ಜೈಪುರ : ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಆವೃತ್ತಿ ಅದ್ಧೂರಿಯಾಗಿ ಆರಂಭಗೊಂಡಿದೆ. ಅಭಿಮಾನಿಗಳ ಉತ್ಸಾಹ ಹೆಚ್ಚಾಗುತ್ತಿರುವ ನಡುವೆಯೇ ಪಂದ್ಯಗಳು ಕಳೆಗಟ್ಟುತ್ತಿವೆ. ಅಂತೆಯೇ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (Rajasthan Royals) ಹಾಗೂ ಕೆ. ಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನಾಲ್ಕನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವು ಜೈಪುರದ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದೆ. ಎರಡೂ ತಂಡಗಳು ತಮ್ಮ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಋತುವಿಗೆ ಹೊಸ ಆರಂಭವನ್ನು ಹೊಂದಲು ಉತ್ಸುಕವಾಗಿವೆ.
Rab rakha! 💗🙏 pic.twitter.com/l8UneruLnm
— Rajasthan Royals (@rajasthanroyals) March 23, 2024
ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಆಡಿರುವ 14 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿತ್ತು. ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಋತುವಿನಲ್ಲಿ ಉತ್ತಮ ಆರಂಭವನ್ನು ಪಡೆದ ನಂತರ, ಆರ್ಆರ್ ಮುಂದಿನ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಸೋತು ಅಂತಿಮವಾಗಿ ನಾಕೌಟ್ ಪ್ರವೇಶ ಪಡೆಯಲು ವಿಫಲಗೊಂಡಿತು.
ಸಂಜು ಸ್ಯಾಮ್ಸನ್ ನೇತೃತ್ವದ ತಂಡವು ರೋವ್ಮನ್ ಪೊವೆಲ್, ನಾಂಡ್ರೆ ಬರ್ಗರ್ ಮತ್ತು ಟಾಮ್ ಕೊಹ್ಲರ್ ಕ್ಯಾಡ್ಮೋರ್ ಅವರಂತಹ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿರುವುದರಿಂದ ಪ್ರಸಕ್ತ ಆವೃತ್ತಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಉತ್ಸುಕವಾಗಿದೆ. ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ 2023 ರಲ್ಲಿ ಸತತ ಎರಡನೇ ಬಾರಿಗೆ ಪ್ಲೇಆಫ್ಗೆ ಅರ್ಹತೆ ಪಡೆದಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ನಿರಾಸೆ ಎದುರಿಸಿತ್ತು.
ಸ್ಥಿರವಾಗಿದೆ ರಾಹುಲ್ ಪಡೆ
ಕೆಎಲ್ ರಾಹುಲ್ ನೇತೃತ್ವದ ತಂಡವು ತಮ್ಮ ಮೊದಲ ಎರಡು ಋತುಗಳಲ್ಲಿ ತಮ್ಮ ಪ್ರದರ್ಶನದೊಂದಿಗೆ ಸಾಕಷ್ಟು ಸ್ಥಿರವಾಗಿದೆ. ಆದರೆ ಟ್ರೋಫಿಯನ್ನು ಎತ್ತಿಹಿಡಿಯಲು ಸಾಧ್ಯವಾಗಲಿಲ್ಲ. ದೇವದತ್ ಪಡಿಕ್ಕಲ್, ಶಿವಂ ಮಾವಿ, ಆಸ್ಟನ್ ನ್ ಟರ್ನರ್ ಮತ್ತು ಡೇವಿಡ್ ವಿಲ್ಲಿ ಅವರ ಸೇರ್ಪಡೆಯೊಂದಿಗೆ ತಮ್ಮ ತಂಡವನ್ನು ಬಲಪಡಿಸಿರುವ ಎಲ್ಎಸ್ಜಿ ಈ ಬಾರಿ ಕಪ್ ಗೆಲ್ಲುವ ಅವಕಾಶ ಹೊಂದಿದೆ.
ತಂಡಗಳು ಹೇಗಿರಲಿವೆ?
ಕೆಲವು ಬದಲಾವಣೆಗಳನ್ನು ಹೊರತುಪಡಿಸಿ ರಾಜಸ್ಥಾನದ ಇಲೆವೆನ್ ಹಿಂದಿನ ಋತುವಿನಂತೆಯೇ ಉಳಿಯುವ ಸಾಧ್ಯತೆಯಿದೆ. ಆಡಮ್ ಜಂಪಾ ಅನುಪಸ್ಥಿತಿಯಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಯಜುವೇಂದ್ರ ಚಾಹಲ್ ಇಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಅವೇಶ್ ಖಾನ್ ಟ್ರೆಂಟ್ ಬೌಲ್ಟ್ ಮತ್ತು ಸಂದೀಪ್ ಶರ್ಮಾ ಅವರನ್ನು ಸೇರಿಸಲಾಗಿದೆ. ರಿಯಾನ್ ಪರಾಗ್ ಅಥವಾ ರೋವ್ಮನ್ ಪೊವೆಲ್ ತಂಡಕ್ಕೆ ನೆರವಾಗಬಹುದು.
ಇದನ್ನೂ ಓದಿ : IPL 2024 : ಮೈದಾನದಲ್ಲೇ ಜಗಳವಾಡಿದ ಕೊಹ್ಲಿ, ಜಡೇಜಾ; ಇಲ್ಲಿದೆ ವಿಡಿಯೊ
ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೆಎಲ್ ರಾಹುಲ್ ಮತ್ತು ಕೈಲ್ ಮೇಯರ್ಸ್ ಅವರೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಬಲವಾದ ಮಧ್ಯಮ ಕ್ರಮಾಂಕಕ್ಕೆ ನೆರವು ನೀಡಲಿದ್ದಾರೆ. ಆಯುಷ್ ಬದೋನಿ ಫಿನಶರ್ ಆಗಬಹುದು. ಕೃಣಾಲ್ ಪಾಂಡ್ಯ ಮತ್ತು ರವಿ ಬಿಷ್ಣೋಯ್ ಸ್ಪಿನ್ನರ್ಗಳಾಗಿ ಮತ್ತು ನವೀನ್ ಉಲ್ ಹಕ್ ವೇಗಿಯಾಗಿ ತಂಡಕ್ಕೆ ನೆರವಾಗಲಿದ್ದಾರೆ.
ಪಿಚ್ ವರದಿ
ಹಿಂದಿನ ಋತುವಿನಲ್ಲಿ, ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಡಿದ ಐದು ಪಂದ್ಯಗಳಲ್ಲಿ, ಮೂರು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಗೆದ್ದವು. ಮೊದಲ ಇನ್ನಿಂಗ್ಸ್ನಲ್ಲಿ ಸರಾಸರಿ ಸ್ಕೋರ್ 171 ಆಗಿದ್ದರೆ, ಸನ್ರೈಸರ್ಸ್ ಹೈದರಾಬಾದ್ 217 ರನ್ಗಳ ಗರಿಷ್ಠ ಗುರಿಯನ್ನು ಬೆನ್ನಟ್ಟಿತ್ತು. ಟಾಸ್ ಗೆದ್ದ ನಾಯಕ ಸ್ಥಳದ ಹಿಂದಿನ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.
ಸಂಭಾವ್ಯ 11ರ ಬಳಗ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ಕೀಪರ್) ಶಿಮ್ರಾನ್ ಹೆಟ್ಮೇರ್, ಧ್ರುವ್ ಜುರೆಲ್, ರಿಯಾನ್ ಪರಾಗ್/ ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯಜುವೇಂದ್ರ ಚಾಹಲ್.
ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್/ ಕ್ವಿಂಟನ್ ಡಿ ಕಾಕ್ (ವಿಕೆಟ್ಕೀಪರ್), ಕೆಎಲ್ ರಾಹುಲ್ (ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್ (ವಿಕೆ), ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಯಶ್ ಠಾಕೂರ್, ಮೊಹ್ಸಿನ್ ಖಾನ್.
ಮುಖಾಮುಖಿ ದಾಖಲೆ
- ಆಡಿದ ಪಂದ್ಯಗಳು 3
ರಾಜಸ್ಥಾನ್ ರಾಯಲ್ಸ್ 2 ಗೆಲುವು
ಲಕ್ನೋ ಸೂಪರ್ ಜೈಂಟ್ಸ್ 1 ಗೆಲುವು
ಪಂದ್ಯದ ವಿವರ
- ದಿನಾಂಕ ಭಾನುವಾರ, ಮಾರ್ಚ್ 24
ಸಮಯ: ಮಧ್ಯಾಹ್ನ 3:30
ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್