Site icon Vistara News

IPL 2024 : ಪಾಂಡ್ಯ ನೇತೃತ್ವದ ಮುಂಬಯಿ​ಗೆ ಹ್ಯಾಟ್ರಿಕ್​​ ಸೋಲು, ರಾಜಸ್ಥಾನ್​​ಗೆ ಮೂರನೇ ವಿಜಯ

Rajastan Royals

ಮುಂಬಯಿ: ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಮುಂಬಯಿ ಇಂಡಿಯನ್ಸ್ (Mumbai Indians) ತಂಡ ತವರಿನ ಮೈದಾನ ಮುಂಬಯಿನಲ್ಲೂ ವೈಫಲ್ಯ ಕಂಡಿತು. ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಐಪಿಎಲ್​ 2024ನೇ ಆವೃತ್ತಿಯ (IPL 2024) 14ನೇ ಪಂದ್ಯದಲ್ಲಿ 6 ವಿಕೆಟ್​ ಸೋಲಿಗೆ ಒಳಗಾಯಿತು. ಇದು ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬಯಿ ಇಂಡಿಯನ್ಸ್ ಬಳಗಕ್ಕೆ ಹಾಲಿ ಆವೃತ್ತಿಯಲ್ಲಿ ಸತತ ಮೂರನೇ ಸೋಲು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ (10) ಪಡೆಯುವಂತಾಯಿತು. ಪಾಂಡ್ಯ ನಾಯಕತ್ವದ ಬಗ್ಗೆ ಮುಂಬಯಿ ಇಂಡಿಯನ್ಸ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ನಡುವೆಯೇ ಸತತ ಸೋಲುಗಳು ಅವರ ಆಸೆಯನ್ನು ನುಚ್ಚು ನೂರು ಮಾಡಿದೆ.

ಇಲ್ಲಿ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127 ರನ್ ಬಾರಿಸಿ ಭರ್ಜರಿ ವಿಜಯ ಸಾಧಿಸಿತು. 39 ಎಸೆತಗಳಲ್ಲಿ 54 ರನ್ ಬಾರಿಸಿದ ರಿಯಾನ್ ಪರಾಗ್​ ಬ್ಯಾಟಿಂಗ್​ನಲ್ಲಿ ತಂಡಕ್ಕೆ ನೆರವು ಕೊಟ್ಟರೆ, ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್​ ಹಾಗೂ ಯಜ್ವೇಂದ್ರ ಚಹಲ್​ ತಲಾ 3 ವಿಕೆಟ್​ ಪಡೆದುಕೊಂಡು ಮಿಂಚಿದರು. ಇದು ರಾಜಸ್ಥಾನ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಜಯವಾಗಿದೆ.

ಸಣ್ಣ ಮೊತ್ತದ ಗುರಿಯನ್ನು ಪಡೆದ ರಾಜಸ್ಥಾನ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಯಶಸ್ವಿ ಜೈಸ್ವಾಲ್ 10 ರನ್ ಬಾರಿಸಿ ಔಟಾಗುವುದರೊಂದಿಗೆ ತಂಡ 10 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಅವರ ಬೆನ್ನಿಗೆ ನಾಯಕ ಸಂಜು ಸ್ಯಾಮ್ಸನ್​ 12 ರನ್ ಬಾರಿಸಿ ಔಟಾದರು. ಜೋಸ್​ ಬಟ್ಲರ್ ತಿಣುಕಾಡಿ 13 ರನ್ ಬಾರಿಸಿದರು.

ರಿಯಾನ್​ ಉತ್ತಮ ಆಟ

ಹಿಂದಿನ ಪಂದ್ಯದಲ್ಲಿ ಅಮೋಘ ಅರ್ಧ ಶತಕ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದ ರಿಯಾನ ಪರಾಗ್ ಮತ್ತೊಂದು ಉತ್ತಮ ಇನಿಂಗ್ಸ್ ಆಡಿದರು. ಅವರು ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿ ವಿಕೆಟ್ ಉರುಳಿಸಿದರೂ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 39 ಎಸೆತಗಳಲ್ಲಿ 5 ಫೋರ್ ಹಾಗೂ 3 ಸಿಕ್ಸರ್ ಸಿಡಿಸಿದ ಅವರು ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಅಜೇಯರಾಗಿ ಉಳಿದ ಅವರು ತಂಡವನ್ನು ದಡ ಮುಟ್ಟಿಸಿ ಸಂಭ್ರಮಿಸಿದರು. ರವಿಚಂದ್ರನ್ ಅಶ್ವಿನ್​ 8 ರನ್ ಬಾರಿಸಿದರೆ ಶುಭಂ ದುಬೆ 8 ರನ್ ಕೊಡುಗೆ ಕೊಟ್ಟರು.

ಇದನ್ನೂ ಓದಿ: IPL 2024 : 250 ​ ಪಂದ್ಯಗಳನ್ನಾಡಿದ ಮುಂಬಯಿ ಇಂಡಿಯನ್ಸ್​, ಉಳಿದ ತಂಡಗಳದ್ದೆಷ್ಟು?

ಮುಂಬಯಿ ಪರ ಆಕಾಶ್​ ಮಧ್ವಾಲ್​ 20 ರನ್​ ನೀಡಿ 3 ವಿಕೆಟ್​ ಉರುಳಿಸುವ ಮೂಲಕ ರಾಜಸ್ಥಾನ್ ತಂಡಕ್ಕೆ ಭಯ ಹುಟ್ಟಿಸಿದ್ದರು.

ಮುಂಬಯಿ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್​ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವೈಫಲ್ಯ ಎದುರಿಸಿತು. ಟ್ರೆಂಟ್ ಬೌಲ್ಟ್​ ಮಾರಕ ಸ್ವಿಂಗ್​ ದಾಳಿಗೆ ಮುಂಬಯಿ ತಂಡದ ಮೊದಲ ಮೂರು ವಿಕೆಟ್ ಉರುಳಿತು. ಇಶಾನ್​ ಕಿಶನ್ ಕಷ್ಟಪಟ್ಟು 16 ರನ್ ಬಾರಿಸಿದರೆ ರೋಹಿತ್​ ಶರ್ಮಾ, ನಮನ್ ಧಿರ್​ ಹಾಗೂ ಡಿವಾಲ್ಡ್​ ಬ್ರೇವಿಸ್​ ಶೂನ್ಯಕ್ಕೆ ಔಟಾದರು.

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ (32) ಹಾಗೂ ನಾಯಕ ಪಾಂಡ್ಯ (34) ಸ್ವಲ್ಪ ಹೊತ್ತು ತಂಡಕ್ಕೆ ಆಸರೆಯಾದರು. ಆದರೆ ಆರ್​ಆರ್​​ ತಂಡದ ಸಾಂಘಿಕ ಬೌಲಿಂಗ್​ ಮುಂದೆ ಅವರಿಗೆ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಟಿಮ್​ ಡೇವಿಡ್​ 17 ರನ್​ಗಳ ಕೊಡುಗೆ ಕೊಟ್ಟರು.

ಆರ್​ ಬೌಲಿಂಗ್​ ನಾಂಡ್ರೆ ಬರ್ಗರ್ 2 ವಿಕೆಟ್ ಪಡೆದರೆ ಆವೇಶ್ ಖಾನ್ 1 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version