ಬೆಂಗಳೂರು: ಅರಬ್ ರಾಷ್ಟ್ರಗಳು ಹಾಗೂ ಕರಾವಳಿ ಪ್ರದೇಶದಲ್ಲಿ ನಾಳೆಯೇ (ಏಪ್ರಿಲ್ 10) ರಂಜಾನ್ ಆಚರಿಸಲಾಗುತ್ತದೆ ಎಂದು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಅದಿ ತಿಳಿಸಿದ್ದಾರೆ. ಇಂದೇ ಚಂದ್ರ ದರ್ಶನವಾಗುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಕರಾವಳಿಯಲ್ಲಿ ನಾಳೆ ರಂಜಾನ್ ಆಚರಿಸಲಾಗುತ್ತದೆ. ಕರಾವಳಿ ಬಿಟ್ಟು ಕರ್ನಾಟಕದ ಎಲ್ಲೆಡೆ ನಾಡಿದ್ದು(ಏ.11) ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದು ವಿಸ್ತಾರ ನ್ಯೂಸ್‌ಗೆ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಅದಿ ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ನಾಳೆ ಈದ್ ಉಲ್ ಫಿತರ್ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ಹೀಗಾಗಿ ಕಾಸರಗೋಡು, ದಕ್ಷಿಣ ಕನ್ನಡ,ಉಡುಪಿ ಭಾಗದಲ್ಲಿ ನಾಳೆ ಈದ್ ಹಬ್ಬ ಆಚರಿಸಲಿದ್ದಾರೆ. ಇಪ್ಪತ್ತೊಂಬತ್ತು ದಿನಗಳ ಉಪವಾಸ ಆಚರಿಸಿದ್ದ ಮುಸ್ಲಿಮರು, ನಾಳೆ ಈದ್ ಉಲ್ ಫಿತರ್ ಹಬ್ಬದೊಂದಿಗೆ ಉಪವಾಸ ಅಂತ್ಯ ಮಾಡಲಿದ್ದಾರೆ. ಈದ್ ಹಬ್ಬದ ಹಿನ್ನೆಲೆ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಲಿದ್ದಾರೆ.
ಇದನ್ನೂ ಓದಿ | Ramadan Shopping: ರಂಜಾನ್ ಶಾಪಿಂಗ್‌ನಲ್ಲಿ ಹೊಸ ಹೊಸ ಫ್ಯಾಷನ್ ಕಲರವ
ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಈದ್ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ರಂಜಾನ್ ತಿಂಗಳ ಕೊನೆಯ ದಿನವನ್ನು ಈದ್-ಉಲ್-ಫಿತರ್ ಆಗಿ ಆಚರಿಸಲಾಗುತ್ತಿದೆ. ರಂಜಾನ್ ತಿಂಗಳ ಉದ್ದಕ್ಕೂ ಮುಸ್ಲಿಂ ಸಮುದಾಯದ ಜನರು ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಈ ಅವಧಿಯಲ್ಲಿ ಆಹಾರ ಮಾತ್ರವಲ್ಲ ನೀರು ಕೂಡ ಕುಡಿಯುವುದಿಲ್ಲ. ಈದ್ ಚಂದ್ರ ಗೋಚರಿಸಿದ ಬಳಿಕ ಈ ರೋಜಾ ಆಚರಣೆ ಮುಕ್ತಾಯವಾಗುತ್ತದೆ.