ಹೈದರಾಬಾದ್: ಎನ್ಎಫ್ಸಿ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈದರಾಬಾದ್ ಮತ್ತು ಅರುಣಾಚಲ ಪ್ರದೇಶ ನಡುವಿನ ರಣಜಿ ಟ್ರೋಫಿ (Ranji Trophy) ಪಂದ್ಯದ ವೇಳೆ ವಿಶ್ವ ದಾಖಲೆ ಸೃಷ್ಟಿಯಾಗಿದೆ. ಹೈದರಾಬಾದ್ ಆರಂಭಿಕ ಬ್ಯಾಟರ್ ತನ್ಮಯ್ ಅಗರ್ವಾಲ್ ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 323 ರನ್ ಗಳಿಸಿದ್ದಾರೆ. ಅರುಣಾಚಲ ಪ್ರದೇಶದ 172 ರನ್ಗಳಿಗೆ ಉತ್ತರವಾಗಿ ಹೈದರಾಬಾದ್ ಕೇವಲ 48 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 529 ರನ್ ಗಳಿಸಿದೆ.
160 ಎಸೆತಗಳಲ್ಲಿ 323 ರನ್ ಗಳಿಸಿದ ಅವರು 201.88 ಸ್ಟ್ರೈಕ್ ರೇಟ್ನೊಂದಿಗೆ ಆಡಿದ್ದಾರೆ. ಇದರಲ್ಲಿ 33 ಬೌಂಡರಿಗಳು ಮತ್ತು 21 ಸಿಕ್ಸರ್ಗಳು ಸೇರಿಕೊಂಡಿದೆ. ಇದು ರಣಜಿ ಟ್ರೋಫಿ ಪಂದ್ಯದಲ್ಲಿ ಬ್ಯಾಟರ್ ಗಳಿಸಿದ ನಾಲ್ಕನೇ ಅತ್ಯುತ್ತಮ ಸ್ಟ್ರೈಕ್ ರೇಟ್. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಅತ್ಯುತ್ತಮ ಸ್ಟ್ರೈಕ್ ರೇಟ್.
ತನ್ಮಯ್ ಅಗರ್ವಾಲ್ ದಾಖಲೆ ನಿರ್ಮಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 300 ರನ್ (ತ್ರಿಶತಕ) ಪೂರೈಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ತನ್ಮಯ್ ಅಗರ್ವಾಲ್ ಪಾತ್ರರಾಗಿದ್ದಾರೆ. ತನ್ಮಯ್ ಒಟ್ಟು 147 ಎಸೆತಗಳಲ್ಲಿ 300 ರನ್ ಗಳಿಸಿದ್ದಾರೆ. ತನ್ಮಯ್ ಅವರಲ್ಲದೆ ಅವರ ಪಾಲುದಾರ ರಾಹುಲ್ ಸಿಂಗ್ ಗಹ್ಲಾಟ್ 105 ಎಸೆತಗಳಲ್ಲಿ 185 ರನ್ ಬಾರಿಸಿದ್ದಾರೆ. ಒಟ್ಟು 26 ಬೌಂಡರಿಗಳು ಮತ್ತು ಮೂರು ಸಿಕ್ಸರ್ಗಳನ್ನು ಅವರು ಸಿಡಿಸಿದ್ದಾರೆ. ತನ್ಮಯ್ ಅಗರ್ವಾಲ್ ಮೊದಲ ವಿಕೆಟ್ಗೆ 449 ರನ್ಗಳ ಜೊತೆಯಾಟವಾಡಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಜೋಡಿಯ ಐದನೇ ಅತಿ ಹೆಚ್ಚು ರನ್ಗಳ ಜೊತೆಯಾಟವಾಗಿದೆ.
ಅನ್ಮಯ್ ಅಗರ್ವಾಲ್ ಈಗ 443 ರನ್ ಗಳಿಸಿದರೆ ಮತ್ತೊಂದು ದಾಖಲೆ ಸೃಷ್ಟಿಯಾಗಲಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. 1948ರಲ್ಲಿ ಕಾಥೇವಾಡ ವಿರುದ್ಧ ಭಾವುಸಾಹೇಬ್ ನಿಂಬಾಳ್ಕರ್ ಅಜೇಯ 443 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಬ್ಯಾಟರ್ ಗಳಿಸಿದ ಗರಿಷ್ಠ ಸ್ಕೋರ್ 501*. ಇದನ್ನು ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ 1994 ರಲ್ಲಿ ವಾರ್ವಿಕ್ಶೈರ್ ವಿರುದ್ಧ ದಾಖಲಿಸಿದ್ದರು.
ಸಿಕ್ಸರ್ಗಳ ದಾಖಲೆ
ಈ ಸಾಧನೆಯ ಹೊರತಾಗಿ, ಪ್ರಥಮ ದರ್ಜೆ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಹಾಗೂ ನ್ಯೂಜಿಲೆಂಡ್ ಬ್ಯಾಟರ್ ಕಾಲಿನ್ ಮುನ್ರೊ ಅವರನ್ನು ಹಿಂದಿಕ್ಕಲು ತನ್ಮಯ್ಗೆ ಈಗ ಇನ್ನೂ 3 ಸಿಕ್ಸರ್ಗಳ ಅಗತ್ಯವಿದೆ. 2014ರಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ವಿರುದ್ಧ ಆಕ್ಲೆಂಡ್ ಪರ ಆಡಿದ್ದ ಮುನ್ರೊ 23 ಸಿಕ್ಸರ್ ಬಾರಿಸಿದ್ದರು.
ಇದನ್ನೂ ಓದಿ : MS Dhoni : ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸಿದ ಎಂಎಸ್ ಧೋನಿ
ಪಂದ್ಯದ ಮೊದಲ ದಿನ ಒಟ್ಟು 701 ರನ್ ದಾಖಲಾಗಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಈ ಮೈಲಿಗಲ್ಲನ್ನು ದಾಟಿರುವುದು ಇದು ಎರಡನೇ ಬಾರಿ. ಸುಮಾರು 72 ವರ್ಷಗಳ ಹಿಂದೆ, 1950ರಲ್ಲಿ, ಎರಡು ತಂಡಗಳು ಪ್ರಥಮ ದರ್ಜೆ ಪಂದ್ಯದ ಒಂದೇ ದಿನದಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ್ದವು.
ಅರುಣಾಚಲ ಪ್ರದೇಶ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 172 ರನ್ಗಳಿಗೆ ಆಲೌಟ್ ಆಗಿತ್ತು, ಇದರಲ್ಲಿ ಟೆಚಿ ಡೋರಿಯಾ ಇನ್ನಿಂಗ್ಸ್ನ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಅವರು ಅಜೇಯ 97 ರನ್ ಗಳಿಸಿದ್ದಾರೆ. ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ ಹಾಗೂ ಎರಡಂಕಿ ಮೊತ್ತ ದಾಟಲಿಲ್ಲ.
ರಣಜಿ ಟ್ರೋಫಿಯ ಕಳೆದ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ ಗೆಲ್ಲಲೇಬೇಕಾದ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದ ಕಾರಣ ಹೈದರಾಬಾದ್ ಎಲೈಟ್ ಗುಂಪಿನಿಂದ ಪ್ಲೇಟ್ ಗುಂಪಿಗೆ ಕುಸಿದಿತ್ತು. ಹೈದರಾಬಾದ್ ಪ್ರಸ್ತುತ ಪ್ಲೇಟ್ ಗ್ರೂಪ್ನಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಮೂರು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ.