Site icon Vistara News

Vinesh Phogat : ವಿನೇಶ್​ ಫೋಗಟ್​ಗೆ ಅನ್ಯಾಯವಾಗಿದೆ ಎಂದ ಆರ್​. ಅಶ್ವಿನ್​; ಅಥ್ಲೀಟ್​ಗಳ ಸಮಸ್ಯೆ ವಿವರಿಸಿದ ಸ್ಪಿನ್ನರ್​

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿಯ ಫೈನಲ್​ ಪಂದ್ಯಕ್ಕೆ ಮುಂಚಿತವಾಗಿ ವಿನೇಶ್ ಫೋಗಟ್ (Vinesh Phogat) ಅವರನ್ನು ಅನರ್ಹಗೊಳಿಸಿದ ಬಗ್ಗೆ ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravinchadran Ashwin) ನಿರಾಶೆ ವ್ಯಕ್ತಪಡಿಸಿದ್ದಾರೆ. ವಿನೇಶ್ ಫೋಗಟ್ 50 ಕೆಜಿ ವಿಭಾಗದಲ್ಲಿ ಕುಸ್ತಿಯ ಫೈನಲ್ ತಲುಪಿದ್ದರೂ ಆ ದಿನದಂದು ಅವರು ಕೇವಲ 100 ಗ್ರಾಂಗಳಷ್ಟು ಅಧಿಕ ತೂಕ ಹೊಂದಿದ್ದರು. ಹೀಗಾಗಿ ಅವರನ್ನು ಅನರ್ಹ ಮಾಡಿ ಕುಸ್ತಿಯಲ್ಲಿ ಕೊನೇ ಸ್ಥಾನ ನೀಡಲಾಗಿತ್ತು. ಹಿಂದಿನ ರಾತ್ರಿಯೇ ಅವರು ಹೆಚ್ಚು ತೂಕ ಹೊಂದಿರುವುದು ಕಂಡುಬಂದ ಕಾರಣ ಫಿಸಿಯೋಗಳು, ವೈದ್ಯರು ಮತ್ತು ಆಹಾರ ತಜ್ಞರ ತಂಡವು ತೂಕ ಇಳಿಸಲು ಯತ್ನಸಿದರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಅತ್ಯಂತ ಆಘಾತಕಾರಿ ಹಿನ್ನಡೆ ಅನುಭವಿಸಿದ್ದರು.

ಪರಿಣಾಮವಾಗಿ ಇದು ಸ್ವತಃ ವಿನೇಶ್ ಫೋಗಟ್ ಮತ್ತು ಭಾರತದ ಕ್ರೀಡಾಭಿಮಾನಿಗಳಿಗೆ ಹೃದಯ ಒಡೆದಂಥ ಕ್ಷಣವಾಗಿತ್ತು. ಅವರು ಐತಿಹಾಸಿಕ ಚಿನ್ನದ ಪದಕವನ್ನು ಗೆಲ್ಲುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಕುಸ್ತಿಪಟುವನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು.

ರವಿಚಂದ್ರನ್ ಅಶ್ವಿನ್ ಹೇಳಿದ್ದು ಏನು?

ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್ ಅವರು ವಿನೇಶ್ ಫೋಗಟ್ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದರು. ಅವರು ತಮ್ಮ ಹಾದಿಯಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಿದರು ಎಂದು ಅಭಿಪ್ರಾಯಪಟ್ಟರು. ತಮ್ಮ ದೇಶಕ್ಕಾಗಿ ಪದಕ ಗೆಲ್ಲಲು ನಾಲ್ಕು ವರ್ಷಗಳ ಕಾಲ ತಯಾರಿ ನಡೆಸುವ ಒಲಿಂಪಿಕ್ ಕ್ರೀಡಾಪಟುಗಳ ಜೀವನ ಕಷ್ಟಕರ ಎಂಬುದಾಗಿ ಹೇಳಿದರು.

“ಇದು ತುಂಬಾ ಬೇಸರದ ವಿಷಯ. ನಾಲ್ಕು ವರ್ಷ, ಎಂಟು ವರ್ಷ ಅಭ್ಯಾಸ. ಅದೊಂದು ಧ್ಯಾನ. ಇದು ಒಲಿಂಪಿಕ್ ಕ್ರೀಡಾಪಟುಗಳಿಗೆ ಒಂದು ಸಂಭ್ರಮವಾಗಿತ್ತದೆ. ಅವರು ಅನೇಕ ವರ್ಷಗಳಿಂದ ಕುಸ್ತಿಯಲ್ಲಿ ಮಿಂಚಿದ್ದಾರೆ. ಅವರು ಪದಕ ತರುತ್ತಿದ್ದರು. ಅವಳು ನಮ್ಮ ದೇಶಕ್ಕೆ ಸಾಕಷ್ಟು ಪದಕಗಳನ್ನು ತರುತ್ತಿದ್ದವರು. ಆದಾಗ್ಯೂ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಈಗ ಅವರು ನಿವೃತ್ತರಾಗಿದ್ದಾರೆ. ಇದು ವಿನೇಶ್ ಫೋಗಟ್​ಗೆ ಅತ್ಯಂತ ಹೃದಯ ವಿದ್ರಾವಕ ಕ್ಷಣ ” ಎಂದು ಅಶ್ವಿನ್ ವೀಡಿಯೊದಲ್ಲಿ ಹೇಳಿದ್ದಾರೆ.

ಅನರ್ಹತೆಯ ನಂತರ, ವಿನೇಶ್ ಫೋಗಟ್ ಅವರು ಇನ್ನು ಮುಂದೆ ಹೋರಾಡಲು ಶಕ್ತಿಯಿಲ್ಲ ಎಂದು ಹೇಳುವ ಮೂಲಕ ಕ್ರೀಡೆಯಿಂದ ನಿವೃತ್ತಿ ಘೋಷಿಸಿದರು. ಸಚಿನ್ ತೆಂಡೂಲ್ಕರ್ ಮತ್ತು ಹರ್ಭಜನ್ ಸಿಂಗ್ ಅವರಂತಹ ಹಲವಾರು ಮಾಜಿ ಕ್ರಿಕೆಟಿಗರು ವಿನೇಶ್ ಫೋಗಟ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪದಕ ವಿಜೇತರನ್ನು ಶ್ಲಾಘಿಸಿದ ರವಿಚಂದ್ರನ್ ಅಶ್ವಿನ್

ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್​​ನಲ್ಲಿ ಪದಕ ಗೆದ್ದ ಭಾರತೀಯರನ್ನು ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದರು. 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತ ಶೂಟಿಂಗ್​​ನಲ್ಲಿ ಮೂರು ಕಂಚಿನ ಪದಕಗಳನ್ನು ಗೆದ್ದಿದೆ. ಶೂಟಿಂಗ್​​ನಲ್ಲಿ ಮನು ಭಾಕರ್, ಸರಬ್ಜೋತ್ ಸಿಂಗ್ ಮತ್ತು ಸ್ವಪ್ನಿಲ್ ಕುಸಾಳೆ ಪದಕ ಗೆದ್ದಿದ್ದಾರೆ. ಮನು ಭಾಕರ್ ಎರಡು ಪದಕಗಳನ್ನು ಗೆದ್ದರು. 2008ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಅಭಿನವ್ ಬಿಂದ್ರಾ 10 ಮೀಟರ್ ಏರ್ ರೈಫಲ್​​ನಲ್ಲಿ ಚಿನ್ನದ ಪದಕ ಗೆದ್ದ ಸಮಯವನ್ನು ಅಶ್ವಿನ್ ಸ್ಮರಿಸಿಕೊಂಡರು.

ಇದನ್ನೂ ಓದಿ: High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಕಾಣಿಸಿಕೊಳ್ಳಲಿದ್ದಾರೆ. ಅಶ್ವಿನ್ ಭಾರತದ ರೆಡ್-ಬಾಲ್ ಸ್ವರೂಪದ ಪ್ರಮುಖ ಬೌಲರ್​ಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಬಾಂಗ್ಲಾದೇಶದ ವಿರುದ್ಧ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

Exit mobile version