Site icon Vistara News

Ravindra Jadeja : ತವರು ನೆಲದಲ್ಲಿ ಹೊಸ ಮೈಲ್ಲುಗಲ್ಲು ಸ್ಥಾಪಿಸಿದ ರವೀಂದ್ರ ಜಡೇಜಾ

Ravindra Jadeja Bowling

ಬೆಂಗಳೂರು : ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ವಿಕೆಟ್ ಪಡೆಯುವ ಮೂಲಕ ಭಾರತದ ಪ್ರಧಾನ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಅವರು ತವರು ನೆಲದಲ್ಲಿ 200 ವಿಕೆಟ್ ಪಡೆದ 5 ನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಶತಕ ಬಾರಿಸಿದ ಜಡೇಜಾ, ಚೆಂಡಿನೊಂದಿಗೂ ಉತ್ತಮ ಪ್ರದರ್ಶನ ನೀಡಿದರು. ತವರಿನ ಆಟಗಾರರ ಮುಂದೆ ಹಲವು ಸಾಧನೆಗಳನ್ನು ಮಾಡಿದರು.

ರೋಹಿತ್ ಶರ್ಮಾ ಅವರ 131 ರನ್​ಗಳ ಶತಕದ ಹಾಗೂ ರವೀಂದ್ರ ಜಡೇಜಾ ಅವರ ಶತಕದ ಮೂಲಕ ಭಾರತ ಇನಿಂಗ್ಸ್​ನ್ಲ್ಲಿ 445 ರನ್ ಗಳಿಸಿತು. ರಾಜ್​ಕೋಟ್​ನಲ್ಲಿ ಜಡೇಜಾ 2ನೇ ಟೆಸ್ಟ್ ಶತಕ ಹಾಗೂ ಅಂತಾರಾಷ್ಟ್ರೀಯ ರೆಡ್-ಬಾಲ್ ಕ್ರಿಕೆಟ್​ನಲ್ಲಿ ಒಟ್ಟಾರೆ 4ನೇ ಶತಕ ಬಾರಿಸಿದ್ದಾರೆ.

200 ವಿಕೆಟ್​​ ಸಾಧನೆ

ರವೀಂದ್ರ ಜಡೇಜಾ 2 ವಿಕೆಟ್ ಕಬಳಿಸುವ ಮೂಲಕ ತವರು ನೆಲದಲ್ಲಿ 200 ಹಾಗೂ 201ನೇ ವಿಕೆಟ್ ಪಡೆದರು. ಇದರೊಂದಿಗೆ ಅವರು ಮಾಜಿ ಮುಖ್ಯ ಕೋಚ್ ಮತ್ತು ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ನೇತೃತ್ವದ ಎಲೈಟ್ ಪಟ್ಟಿಗೆ ಸೇರ್ಪಡೆಯಾದರು.

ಅವರು ಟೆಸ್ಟ್ ಕ್ರಿಕೆಟ್​ನಲ್ಲಿ 3005 ರನ್ ಹಾಗೂ ಒಟ್ಟಾರೆ 283 ವಿಕೆಟ್ ಪಡೆದಿದ್ದಾರೆ. ಈಗ ಜಡೇಜಾ ಅವರ ಮುಂದಿನ ಗುರಿ ಈ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡವು ಗೆಲುವು ಸಾಧಿಸುವುದನ್ನು ನೋಡುವುದು. 2012ರ ನಂತರ ಭಾರತದಲ್ಲಿ ರೆಡ್-ಬಾಲ್ ಸರಣಿಯಲ್ಲಿ ಭಾರತವನ್ನು ಸೋಲಿಸಿದ ಮೊದಲ ತಂಡವಾಗುವ ಹಂಬಲ ಹೊಂದಿರುವ ಇಂಗ್ಲೆಂಡ್​ಗೆ ಸೆಡ್ಡು ಹೊಡೆಯುವುದು.

ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕಿದ ರವೀಂದ್ರ ಜಡೇಜಾ

ಇಂಗ್ಲೆಂಡ್(IND vs ENG)​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ಭಾರತ ತಂಡ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್ ವಿರುದ್ಧ 1000 ಟೆಸ್ಟ್ ರನ್ ಗಳಿಸಿದ 15ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ : WPL 2024 : ಜರ್ಸಿ ಅನಾವರಣಗೊಳಿಸಿದ ಅದಾನಿ ನೇತೃತ್ವದ ಗುಜರಾತ್‌ ಜೈಂಟ್ಸ್‌ ತಂಡ

110 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಜಡೇಜಾ 2 ರನ್​ ಗಳಿಸಿ ಜೋ ರೂಟ್‌ಗೆ ವಿಕೆಟ್​ ಒಪ್ಪಿಸಿದರು. 225 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 112 ರನ್ ಗಳಿಸಿ ನಿರ್ಗಮಿಸಿದರು.

ಟೆಸ್ಟ್‌ನಲ್ಲಿ 250 ವಿಕೆಟ್‌, 3000 ರನ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜಾ 3000 ರನ್‌ ಹಾಗೂ 250 ವಿಕೆಟ್‌ ಸಾಧನೆ ಮಾಡಿದ ಭಾರತದ ಕೇವಲ 3ನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಪರ ಈ ಮೊದಲು ಕಪಿಲ್‌ ದೇವ್‌(5248 ರನ್‌, 434 ವಿಕೆಟ್‌), ಆರ್‌.ಅಶ್ವಿನ್‌(3271 ರನ್‌, 499 ವಿಕೆಟ್‌) ಈ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯಾದ ಶೇನ್‌ ವಾರ್ನ್‌, ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌, ನ್ಯೂಜಿಲ್ಯಾಂಡ್​ನ ರಿಚರ್ಡ್‌ ಹಾರ್ಡ್ಲೀ, ದಕ್ಷಿಣ ಆಫ್ರಿಕಾದ ಶಾನ್‌ ಪೊಲಾಕ್‌, ಇಂಗ್ಲೆಂಡ್‌ನ ಇಯಾನ್‌ ಬೋಥಂ, ಪಾಕಿಸ್ತಾನದ ಇಮ್ರಾನ್ ಖಾನ್‌, ನ್ಯೂಜಿಲ್ಯಾಂಡ್​ನ ವೆಟೋರಿ, ಶ್ರೀಲಂಕಾದ ಚಾಮಿಂಡಾ ವಾಸ್‌, ದಕ್ಷಿಣಆಫ್ರಿಕಾದ ಜ್ಯಾಕ್‌ ಕಾಲೀಸ್‌ ಈ ಸಾಧನೆ ಮಾಡಿದ ವಿಶ್ವ ಕ್ರಿಕೆಟಿಗರು.

Exit mobile version