Site icon Vistara News

Ravindra Jadeja : ಜಡೇಜಾ ಔಟ್​ ಅಥವಾ ನಾಟೌಟ್​? ಮಾಜಿ ಕೋಚ್​ ರವಿ ಶಾಸ್ತ್ರಿ ಏನು ಹೇಳುತ್ತಾರೆ?

Ravindra Jadeja

ಹೈದರಾಬಾದ್: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಶತಕ ಪೂರೈಸುವ ಇರಾದೆಯಲ್ಲಿದ್ದರು. ಆದಾಗ್ಯೂ, ಅವರು ಇಂಗ್ಲೆಂಡ್ ಅರೆಕಾಲಿಕ ಬೌಲರ್​ ಜೋ ರೂಟ್ ಅವರ ಎಸೆತಕ್ಕೆ ಎಲ್​ಬಿಡಬ್ಲ್ಯುಆದರು. ಅಂಪೈರ್​ ಔಟ್ ನೀಡಿದ ತಕ್ಷಣ ಜಡೇಜಾ ಡಿಆರ್​ಎಸ್​ ಬಳಸಿಕೊಂಡರು. ಮೂರನೇ ಅಂಪೈರ್ ವಿಕೆಟ್​ಗೆ ಚೆಂಡು ಬಡಿಯುತ್ತಿದೆ ಹಾಗೂ ಅಂಪೈರ್ ಕಾಲ್ ಎಂಬ ದಿಸೆಯಲ್ಲಿ ಔಟ್ ನೀಡಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯಿತು. ಅಂಪೈರ್ ಎರಾಸ್ಮುಸ್​ ತಪ್ಪು ನಿರ್ಧಾರ ಕೈಗೊಂಡಿದ್ದಾರೆ ಎಂಬುದಾಗಿ ಕ್ರಿಕೆಟ್​ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದರು.

ವಿವಾದಗಳ ನಡುವೆಯೂ ಪಂದ್ಯದ ವೀಕ್ಷಕ ವಿವರಣೆ ಕರ್ತವ್ಯದಲ್ಲಿದ್ದ ಭಾರತ ತಂಡದ ಮಾಜಿ ಕೋಚ್​​ ರವಿ ಶಾಸ್ತ್ರಿ ಈ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಜಡೇಜಾಗೆ ಅನುಮಾನದ ಲಾಭ (benefit of doubt) ಏಕೆ ಸಿಗಲಿಲ್ಲ ಎಂಬುದಾಗಿಯೂ ಪ್ರಶ್ನಿಸಿದ್ದಾರೆ. ಸಂದರ್ಭವು ಜಡೇಜಾಗೆ ಅನುಮಾನದ ಲಾಭ ಸಿಗುವಂತಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಮೈದಾನದಲ್ಲಿನ ನಿರ್ಧಾರವನ್ನು ಬ್ಯಾಟರ್​​ ಪರವಾಗಿ ನೀಡಿದ್ದರೆ ಜಡೇಜಾ ಔಟಾಗದೆ ಉಳಿಯುತ್ತಿದ್ದರು ಎಂದು ಭಾರತದ ಮಾಜಿ ಮುಖ್ಯ ಕೋಚ್ ವಿವರಿಸಿದ್ದಾರೆ.

ಜಡೇಜಾ ಔಟ್ ಅಲ್ಲ; ಅಂಪೈರ್​ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು!

ರವೀಂದ್ರ ಜಡೇಜಾ ಅವರ ಔಟ್ ವಿವಾದಾತ್ಮಕವಾಗಿತ್ತು. ಇದು ಟ್ವಿಟರ್​​ ನಲ್ಲಿ (ಈಗ ಎಕ್ಸ್) ಅಭಿಮಾನಿಗಳ ಕೋಪ ಕಾಣಿಸಿಕೊಂಡಿತು. ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರ ನಿರ್ಧಾರದಿಂದ ಅಭಿಮಾನಿಗಳು ನಿರಾಶರಾದರು. ತೀರ್ಪು ಪರಾಮರ್ಶೆ ಮಾಡಿದಾಗಲೂ ಚೆಂಡು ವಿಕೆಟ್​ಗೆ ಸಂಪೂರ್ಣವಾಗಿ ಬಡಿಯುವುದು ಕಂಡು ಬರಲಿಲ್ಲ. ಚೆಂಡು ಬೇಲ್ಸ್​​ಗಿಂತ ಸಾಕಷ್ಟು ಎತ್ತರಕ್ಕೆ ತಾಗುತ್ತಿತ್ತು. ಡಿಆರ್​​ಎಸ್​ ಕೂಡ ಆನ್​ಫೀಲ್ಡ್​ ಅಂಪೈರ್ ತೀರ್ಪನ್ನು ಬೆಂಬಲಿಸಿತು. ಹೀಗಾಗಿ ರವೀಂದ್ರ ಜಡೇಜಾ ಮೈದಾನ ತೊರೆಯಬೇಕಾಯಿತು. ಆದಾಗ್ಯೂ, ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಅವರ ವಿವಾದಾತ್ಮಕ ನಿರ್ಧಾರದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲವಾದರು.

ಆನ್ ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ವಿರುದ್ಧ ಕ್ರಿಕೆಟ್​ ಅಭಿಮಾನಿಗಳು ತಿರುಗಿಬಿದ್ದರು. ಕೆಲವು ಅಭಿಮಾನಿಗಳು ಅವರನ್ನು ಮೋಸಗಾರ ಎಂದು ಕರೆದರು ಮತ್ತು ಟೀಮ್ ಇಂಡಿಯಾ ವಿರುದ್ಧ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು. ತಪ್ಪು ಕರೆಯಿಂದಾಗಿ ರವೀಂದ್ರ ಜಡೇಜಾ ಶತಕವನ್ನು ಕಳೆದುಕೊಂಡಿರುವುದಕ್ಕೆ ಕೆಲವು ಅಭಿಮಾನಿಗಳು ಸಂಪೂರ್ಣ ನಿರಾಸೆಯಿಂದ ಕೂಡಿದ ಟ್ವೀಟ್​ಗಳನ್ನು ಮಾಡಿದರು.

ಎರಡನೇ ದಿನವೂ ಔಟ್ ನೀಡಿದ್ದರು

ಆಘಾತಕಾರಿ ಸಂಗತಿಯೆಂದರೆ, ರವೀಂದ್ರ ಜಡೇಜಾ ಅವರಿಗೂ 2 ನೇ ದಿನವೂ ಅಂಪೈರ್ ಎಲ್ಬಿಡಬ್ಲ್ಯು ನೀಡಿದ್ದರು. ಆದಾಗ್ಯೂ, ಜಡೇಜಾ ಬ್ಯಾಟ್​ಗೆ ಮೊದಲು ಚೆಂಡು ತಾಗಿದ್ದ ಕಾರಣ ಅವರು ಡಿಆರ್​ಎಸ್​ ಸಲ್ಲಿಸಿದ್ದರು. ಪರಿಣಾಮವಾಗಿ ಅವರು ತಮ್ಮ ವಿಕೆಟ್​ ಉಳಿಸಿಕೊಂಡರು.

ಅದೇನೇ ಇದ್ದರೂ ರವೀಂದ್ರ ಜಡೇಜಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎಡಗೈ ಸ್ಪಿನ್ನರ್ 87 ರನ್ ಬಾರಿಸುವ ಜತೆಗೆ 3 ವಿಕೆಟ್​ ಕೂಡ ಪಡೆದರು. ವಿಶೇಷವೆಂದರೆ, ಯಶಸ್ವಿ ಜೈಸ್ವಾಲ್ (80) ಮತ್ತು ಕೆಎಲ್ ರಾಹುಲ್ (86) ಕೂಡ 80 ರ ಸ್ಕೋರ್ ಮಾಡಿದರು ಹಾಗೂ ತಮ್ಮ ತಮ್ಮ ಶತಕಗಳನ್ನು ಕಳೆದುಕೊಂಡರು.

ಇಂಗ್ಲೆಂಡ್​ನ 246 ರನ್​ಗಳೀಗೆ ಉತ್ತರವಾಗಿ ಭಾರತವು ಮೊದಲ ಇನ್ನಿಂಗ್ಸ್ನಲ್ಲಿ 436 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಅದೇ ರೀತಿ 190 ರನ್​ಗಳ ಮುನ್ನಡೆ ಸಾಧಿಸಿದೆ. ಕೊನೆಯಲ್ಲಿ ಅಕ್ಷರ್ ಪಟೇಲ್ 44 ರನ್ ಸೇರಿಸಿದ್ದಾರೆ. ಇಂಗ್ಲೆಂಡ್ ಪರ ಜೋ ರೂಟ್ 4 ವಿಕೆಟ್ ಪಡೆದರು.

Exit mobile version