ನವದೆಹಲಿ: ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಜಡೇಜಾ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಮಗ ಹಾಗೂ ಸೊಸೆಯ ವಿರುದ್ಧ ಹಲವಾರು ಅರೋಪಗಳನ್ನು ಮಾಡಿದ್ದರು. ಈ ವೇಳೆ ಅವರಿಬ್ಬರ ನಡುವಿನ ಸಂಬಂಧ ಸರಿಯಾಗಿಲ್ಲ ಎಂಬುದು ಗೊತ್ತಾಗಿತ್ತು. ವಿಶೇಷವಾಗಿ ಪತ್ನಿ ರಿವಾಬಾ ಜಡೇಜಾ (Rivaba Jadeja) ಅವರೊಂದಿಗಿನ ವಿವಾಹದ ನಂತರ ಸಂಬಂಧ ಹಾಳಾಗಿದೆ ಎಂದು ಆರೋಪಿಸಲಾಗಿದೆ. ರವೀಂದ್ರ ಜಡೇಜಾ ಈ ಸಂದರ್ಶನವನ್ನು ಪೂರ್ವ ಯೋಜಿತ ಎಂದು ಹೇಳಿದ್ದು, ಅದನ್ನು ನಂಬಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಅದೇ ರಿತಿ ಜಡೇಜಾ ಅವರ ಪತ್ನಿ ಹಾಗೂ ಬಿಜೆಪಿ ಶಾಸಕಿಯೂ ಆಗಿರುವ ರಿವಾಬಾ ಅವರಿಗೆ ಮಾವನ ಆರೋಪಗಳ ಕುರಿತು ಪ್ರಶ್ನೆ ಕೇಳಲಾಗಿತ್ತು. ತಕ್ಷಣ ರಿವಾಬಾ, ವರದಿಗಾರನ ಮೇಲೆ ಕೋಪಗೊಂಡರು. ವೈಯಕ್ತಿಕ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆ ಕೇಳದಂತೆ ಕೆಂಗಣ್ಣು ಬೀರಿದರು.
ನಾವು ಇಂದು ಇಲ್ಲಿ ಏಕೆ ಇದ್ದೇವೆ? ಅದನ್ನು ಕೇಳಿ. ನೀವು ವೈಯಕ್ತಿಕವಾಗಿ ಏನಾದರೂ ತಿಳಿದುಕೊಳ್ಳಲು ಬಯಸಿದರೆ ನೀವು ನೇರವಾಗಿ ನನ್ನನ್ನು ಸಂಪರ್ಕಿಸಬಹುದು” ಎಂದು ರಿವಾಬಾ ಹೇಳಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.
ವಿಶೇಷವೆಂದರೆ ಅನಿರುದ್ಧ್ ಸಿಂಗ್ ಜಡೇಜಾ ಈಗ ತಮ್ಮ ಮಗನಿಂದ ದೂರವಾಗಿ 2 ಬಿಎಚ್ಗೆ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಪತ್ನಿಯ 20,000 ರೂ.ಗಳ ಪಿಂಚಣಿಯಿಂದ ಬದುಕುತ್ತಿದ್ದಾರೆ. ವಿವಾದಾತ್ಮಕ ಸಂದರ್ಶನದಲ್ಲಿ, ಜಡೇಜಾ ರಿವಾಬಾ ಅವರನ್ನು ಮದುವೆಯಾದಾಗಿನಿಂದ ನಮ್ಮ ಕುಟುಂಬದಲ್ಲಿ ಸಮಸ್ಯೆಗಳಾಗಿವೆ ಎಂದು ಅನಿರುದ್ಧ್ ಹೇಳಿದ್ದಾರೆ.
ರವೀಂದ್ರ ಜಡೇಜಾ ಅಥವಾ ಅವರ ಪತ್ನಿ ರಿವಾಬಾ ಜಡೇಜಾ ಅವರೊಂದಿಗೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ನಾವು ಅವರನ್ನು ಕರೆಯುವುದಿಲ್ಲ, ಮತ್ತು ಅವರು ನಮ್ಮನ್ನು ಕರೆಯುವುದಿಲ್ಲ. ನನ್ನ ಹೆಂಡತಿಯ 20,000 ರೂ. ಪಿಂಚಣಿಯಿಂದ ನನ್ನ ಖರ್ಚುಗಳನ್ನು ನಾನು ನಿರ್ವಹಿಸುತ್ತೇನೆ. ನಾನು 2ಕೊಠಡಿಯ ಫ್ಲ್ಯಾಟ್ ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ನನ್ನ ಫ್ಲಾಟ್ ನಲ್ಲಿಯೂ ರವೀಂದ್ರನಿಗೆ ಇನ್ನೂ ಪ್ರತ್ಯೇಕ ಕೋಣೆ ಇದೆ. ರವೀಂದ್ರ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು ನಾವು ತುಂಬಾ ಶ್ರಮಿಸಿದ್ದೇವೆ. ನಾನು ಹಣ ಸಂಪಾದಿಸಲು 20 ಲೀಟರ್ ಹಾಲಿನ ಕ್ಯಾನ್ ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದೆ. ನಾನು ಸೆಕ್ಯುರಿಟಿ ಕೆಲಸವೂ ಮಾಡಿದ್ದೇನೆ. ನಾವು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಅದಕ್ಕಿಂತಲೂ ಅವನ ಸಹೋದರಿ ಇನ್ನೂ ಹೆಚ್ಚಿನ ಹೆಚ್ಚಿನದನ್ನು ಮಾಡಿದ್ದಾಳೆ. ಅವಳು ಅವನನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದಳು. ಆದಾಗ್ಯೂ, ಅವಳ ಜತೆಯೇ ಮುನಿಸಿಕೊಂಡಿದ್ದಾಳೆ ” ಎಂದು ಅನಿರುದ್ಧ್ ಸಂದರ್ಶನದಲ್ಲಿ ಹೇಳಿದ್ದರು.
ಇದನ್ನೂ ಓದಿ : Saweety Boora : ಕಾಂಗ್ರೆಸ್ ಜೋಡೊಗೆ ಕೈಜೋಡಿಸಿದ್ದ ಬಾಕ್ಸರ್ ಸ್ವೀಟಿ ಬೂರಾ ಬಿಜೆಪಿಗೆ
ತಮ್ಮ ತಂದೆಯ ಆರೋಪಗಳನ್ನು ತಳ್ಳಿಹಾಕಿದ ಜಡೇಜಾ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದರು. ಮತ್ತು ಸಂದರ್ಶನವನ್ನು ತಮ್ಮ ಹೆಂಡತಿಯ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ಎಂದು ಕರೆದಿದ್ದರು.
ಆರೋಪ ನಿರ್ಲಕ್ಷಿಸಿ ಎಂದ ಜಡೇಜಾ
ಸ್ಕ್ರಿಪ್ಟೆಡ್ ಸಂದರ್ಶನದಲ್ಲಿ ಹೇಳಿರುವುದನ್ನು ನಿರ್ಲಕ್ಷಿಸೋಣ. ಅಸಂಬದ್ಧ ಸಂದರ್ಶನದಲ್ಲಿ ಹೇಳಿದ್ದೆಲ್ಲವೂ ಸಂಪೂರ್ಣವಾಗಿ ಸುಳ್ಳು ಮತ್ತು ಸುಳ್ಳು. ಇದು ಏಕಪಕ್ಷೀಯ ಕಥೆ. ನಾನು ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ. ನನ್ನ ಪತ್ನಿಯ ವರ್ಚಸ್ಸಿಗೆ ಧಕ್ಕೆ ತರುವ ಕ್ರಮಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಾನು ಹೇಳಲು ಅನೇಕ ವಿಷಯಗಳಿವೆ. ನಾನು ಅವುಗಳನ್ನು ಸಾರ್ವಜನಿಕಗೊಳಿಸದಿರುವುದು ಉತ್ತಮ,” ಎಂದು ಜಡೇಜಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಏತನ್ಮಧ್ಯೆ, ಸ್ನಾಯುಸೆಳೆತದ ಗಾಯದಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಜಡೇಜಾ ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡಕ್ಕೆ ಮರಳಿದ್ದಾರೆ. ಆದಾಗ್ಯೂ, ಫೆಬ್ರವರಿ 15ರಂದು ರಾಜ್ಕೋಟ್ನಲ್ಲಿ ಪ್ರಾರಂಭವಾಗುವ ಮೂರನೇ ಟೆಸ್ಟ್ನಲ್ಲಿ ಅವರು ಭಾಗವಹಿಸುವುದು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ ಒಳಪಟ್ಟಿರುತ್ತದೆ.