ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2,000 ರೂ. ನೋಟುಗಳನ್ನು ಚಲಾವಣೆಯಿಂದ ಶುಕ್ರವಾರ ಹಿಂತೆಗೆದುಕೊಂಡಿದೆ. ಬ್ಯಾಂಕ್‌ಗಳು ಎಟಿಎಂಗಳಿಗೆ 2,000 ರೂ. ನೋಟನ್ನು ಬಿಡುಗಡೆ ಮಾಡದಂತೆ ಆರ್‌ಬಿಐ ಸೂಚಿಸಿದೆ.
ಹೀಗಿದ್ದರೂ, 2,000 ರೂ. ನೋಟಿಗೆ ಸೆಪ್ಟೆಂಬರ್ 30 ರ ತನಕ ಕಾನೂನು ಮಾನ್ಯತೆ ಇರಲಿದೆ ಎಂದು ತಿಳಿಸಿದೆ. ಆರ್‌ಬಿಐ ಈ ಬಗ್ಗೆ ಶುಕ್ರವಾರ ಅಧಿಸೂಚನೆಯನ್ನು ಪ್ರಕಟಿಸಿದೆ.
2000 Notes Withdrawn: 2 ಸಾವಿರ ರೂ. ನೋಟು ವಾಪಸ್ ನಂತರ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಬ್ಯಾಂಕ್‌ಗಳು 2023ರ ಸೆಪ್ಟೆಂಬರ್ 30ರ ತನಕ ತಮ್ಮ ಶಾಖೆಗಳಲ್ಲಿ 2,000 ರೂ. ನೋಟುಗಳ ವಿನಿಮಯಕ್ಕೆ ವ್ಯವಸ್ಥೆಯನ್ನು ಮಾಡಬೇಕು ಎಂದು ಆರ್‌ಬಿಐ ತಿಳಿಸಿದೆ. 2016ರ ನವೆಂಬರ್‌ನಲ್ಲಿ ಡಿಮಾನಿಟೈಸೇಶನ್ ಸಂದರ್ಭ 2,000 ರೂ. ನೋಟನ್ನು ಬಿಡುಗಡೆ ಮಾಡಲಾಗಿತ್ತು. 2018-19ರಲ್ಲಿ ಈ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು.
2023ರ ಮೇ 23ರಿಂದ ಬ್ಯಾಂಕ್‌ಗಳಲ್ಲಿ ವಿನಿಮಯ:
ಈಗ 2000 ರೂ. ನೋಟುಗಳನ್ನು ಹೊಂದಿರುವವರು 2023ರ ಮೇ 23ರಿಂದ ಬ್ಯಾಂಕ್ ಖಾತೆಗೆ ಹಾಕಬಹುದು. ಅಥವಾ ಬ್ಯಾಂಕಿಗೆ ತೆರಳಿ ಇತರ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಬಹುದು. ಮೇ 23ರಿಂದ ಬ್ಯಾಂಕ್‌ಗಳಲ್ಲಿ ಒಂದು ಸಲ 2,000 ರೂ. ಮುಖಬೆಲೆಯ 20,000 ರೂ. ತನಕದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
2,000 ರೂ. ನೋಟು ಹಿಂತೆಗೆತ ಏಕೆ?
ಕ್ಲೀನ್ ನೋಟ್ ಪಾಲಿಸಿಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಚಲಾವಣೆಯಲ್ಲಿ ಇರುವ 2,000 ರೂ. ನೋಟುಗಳ ಮೌಲ್ಯ ಎಷ್ಟು?
ಈ ಹಿಂದೆ 2018ರ ಮಾರ್ಚ್ 31ರಲ್ಲಿ 6.73 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ. ನೋಟುಗಳು ಚಲಾವಣೆಯಲ್ಲಿ ಇತ್ತು. 2023ರ ಮಾರ್ಚ್ ವೇಳೆಗೆ 3.62 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿತ್ತು.