Site icon Vistara News

WPL 2024 : ಆರ್​ಸಿಬಿ ತಂಡಕ್ಕೆ ಸತತ ಎರಡನೇ ಜಯ, ಗುಜರಾತ್​ಗೆ ಹೀನಾಯ ಸೋಲು

RCB Team

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿದೆ. ಇದರೊಂದಿಗೆ ಡಬ್ಲ್ಯುಪಿಎಲ್ 2024 ರಲ್ಲಿ (WPL 2024) ಸತತ ಎರಡು ಗೆಲುವುಗಳನ್ನು ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ಬೆತ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡ ಪಡೆ 20 ಓವರ್ ಗಳಲ್ಲಿ 107 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಆರ್​ಸಿಬಿ ಇನ್ನೂ 45 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.

ಟಾಸ್ ಗೆದ್ದ ಸ್ಮೃತಿ ಮಂಧಾನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಉತ್ತಮ ಆಟ ಆಡಲಿಲ್ಲ. . ಬೆತ್ ಮೂನಿ ನೇತೃತ್ವದ ತಂಡವು ನಿಯಮಿತವಾಗಿ ವಿಕೆಟ್ ಗಳನ್ನು ಕಳೆದುಕೊಂಡ ಕಾರಣ ಕಡಿಮೆ ಮೊತ್ತ ಪೇರಿಸಿತು. ನಾಯಕಿ ಬೆತ್ ಮೂನಿ 7 ಎಸೆತಗಳಲ್ಲಿ 8 ರನ್ ಗಳಿಸಿ ನಿರ್ಗಮಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಹರ್ಲೀನ್ ಡಿಯೋಲ್ 31 ಎಸೆತಗಳಲ್ಲಿ 22 ರನ್ ಗಳಿಸಿ ನಿರ್ಗಮಿಸಿದರು. ಫೋಬೆ ಲಿಚ್ಫೀಲ್ಡ್ ಗುಜರಾತ್ ಜೈಂಟ್ಸ್​ ತಂಡದ ಭರವಸೆಯಾಗಿದ್ದರು. ಆದರೆ ರೇಣುಕಾ ಸಿಂಗ್ ಅವರನ್ನು ಪೆವಿಲಿಯನ್​​ಗೆ ಕಳುಹಿಸಿದರು. ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ : Virat kohli : ವಿರಾಟ್​​ ಕೊಹ್ಲಿ ಈ ಬಾರಿ ಐಪಿಎಲ್​ನಲ್ಲಿಯೂ ಆಡುವುದಿಲ್ಲ…

108 ರನ್ಗಳ ಗುರಿ ಬೆನ್ನತ್ತಿದ ಆರ್​​ಸಿಬಿಗೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಉತ್ತಮ ಆರಂಭ ನೀಡಿದರು. ಅಂತೆಯೇ ಕೇವಲ 7 ಓವರ್​ಗಳಲ್ಲಿ 50 ರನ್ ಬಾರಿಸಿತು. ಸ್ಮೃತಿ ಮಂಧಾನಾ 27 ಎಸೆತಗಳಲ್ಲಿ 43 ರನ್ ಸಿಡಿಸಿ ಔಟಾದರು. ಪ್ರಸ್ತುತ ನಡೆಯುತ್ತಿರುವ ಡಬ್ಲ್ಯುಪಿಎಲ್​ನಲ್ಲಿ ಉತ್ತಮ ಫಾರ್ಮ್​ನಲ್ಲಿರುವ ಸಬ್ಬಿನೇನಿ ಮೇಘನಾ ಮಂಗಳವಾರ ಮತ್ತೊಂದು ಪ್ರಮುಖ ಇನ್ನಿಂಗ್ಸ್ ಆಡಿದರು. ಅವರು 36 ರನ್ ಬಾರಿಸಿದರೆ ಎಲಿಸ್​ ಪೆರಿ 23 ರನ್​ ಕೊಡುಗೆ ಕೊಟ್ಟರು.

ನಿಧಾನಗತಿಯ ಪಿಚ್​​ನಿಂದಾಗಿ ಚೇಸಿಂಗ್ ಕಷ್ಟಕರವಾಗಿತ್ತು. ಆದರೆ ಸ್ಮೃತಿ ಅವರ ಸ್ಫೋಟಕ ಬ್ಯಾಟಿಂಗ್​ ಮತ್ತು ಮೇಘನಾ ಅವರ ಶಾಂತ ಆಟವು ಆರ್​​ಸಿಬಿಯನ್ನು 7 ಓವರ್​ಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿಸಿತು.

Exit mobile version