Site icon Vistara News

WPL 2024 : 17 ವರ್ಷದ ಬಳಿಕ ಆರ್​ಸಿಬಿಗೆ ಮೊದಲ ಟ್ರೋಫಿ, ಅಭಿಮಾನಿಗಳು ಫುಲ್​ ಖುಷ್​

RCB Team

ಬೆಂಗಳೂರು : ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಭಾನುವಾರ ಅತ್ಯಂತ ಸಂತೋಷದಾಯಕ ದಿನ. 17 ವರ್ಷಗಳ ನಿಯತ್ತಿಗೆ ಸಿಕ್ಕ ಗೌರವ. 2008ರಲ್ಲಿ ಪುರುಷರ ಟೂರ್ನಿ (ಐಪಿಎಲ್​) ಮೂಲಕ ಆರಂಭಗೊಂಡ ಫ್ರಾಂಚೈಸಿ ಮೊಟ್ಟ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಈ ಫ್ರಾಂಚೈಸಿ ಪಾಲಿಗೆ ಐತಿಹಾಸಿಕ ದಿನವಾಗಿದೆ. ಮಹಿಳೆಯರ ಪ್ರೀಮಿಯರ್ ಲೀಗ್​ನ (WPL 2024) ಎರಡನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನಾ ನೇತೃತ್ವದ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಆರ್​ಸಿಬಿ ಅಭಿಮಾನಿಗಳಿಗೆ ಸಮಾಧಾನ ಹೇಳಿದೆ. ಅದಕ್ಕೆ ಪೂರಕವಾಗಿ ವಿಶ್ವದ ಮೂಲೆಮೂಲೆಗಳಲ್ಲಿರುವ ಆರ್​ಸಿಬಿ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಾಚರಣೆ ಮಾಡಿದ್ದಾರೆ.

ಮೊದಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ತಂಡದ ಪ್ಲೇ ಆಫ್​ ಹಂತಕ್ಕೆ ಏರಲು ವಿಫಲಗೊಂಡಿತ್ತು. ಆದರೆ, ಎರಡನೇ ಆವೃತ್ತಿಯಲ್ಲಿ ಚಾಂಪಿಯನ್​ಪಟ್ಟಕ್ಕೇರಿದೆ. ಈ ಮೂಲಕ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎಂಬ ಮಾತನ್ನು ಉಳಿಸಿಕೊಂಡಿದೆ.

ಆರ್​ಸಿಬಿ ಫ್ರಾಂಚೈಸಿ ಐಪಿಎಲ್​ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಅದರ ಪುರುಷರ ತಂಡಕ್ಕೆ ಇದುವರೆಗೆ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಮಹಿಳೆಯರ ತಂಡ ಗೆಲುವು ತಂದುಕೊಟ್ಟಿದೆ.

ಅವಕಾಶ ವಂಚಿತ ತಂಡ

ಆರ್​ಸಿಬಿ ಪುರುಷರ ತಂಡವೂ ಐಪಿಎಲ್ ಇತಿಹಾಸದಲ್ಲಿ ವಿರಾಟ್​ ಕೊಹ್ಲಿ , ಎಬಿಡಿ ವಿಲಿಯರ್ಸ್​ ಹಾಗೂ ಕ್ರಿಸ್​ ಗೇಲ್ ಅವರಂಥ ದೈತ್ಯರನ್ನು ಹೊಂದಿದ್ದ ತಂಡವಾಗಿತ್ತು. ಆದರೆ, ತಂಡಕ್ಕೆ ಕಪ್ ಗೆಲ್ಲುವ ಅವಕಾಶ ಒಂದು ಬಾರಿಯೂ ಬರಲಿಲ್ಲ. ಮೂರು ಬಾರಿ ಫೈನಲ್​ಗೇರಿ ರನ್ನರ್​ ಅಪ್​ ಪ್ರಶಸ್ತಿಗೆ ಸಮಾಧಾನಪಟ್ಟುಕೊಂಡಿತು. 2009, 2011 ಹಾಗೂ 2016ರಲ್ಲಿ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು. ಮೊದಲ ಆವೃತ್ತಿಯಲ್ಲಿ (2008) ಲೀಗ್ ಹಂತದಲ್ಲಿ ಓಟ ಮುಗಿಸಿದ್ದರೆ 2010ರಲ್ಲಿ ಪ್ಲೇಆಫ್​ಗೆ ಹೋಗಿತ್ತು. 2012, 13, 14ರಲ್ಲಿ ಲೀಗ್ ಹಂತದಲ್ಲಿಯೇ ಅಭಿಯಾನ ಕೊನೆಗೊಳಿಸಿತ್ತು. 2015ರಲ್ಲಿ ಪ್ಲೇಆಫ್​ಗೇರಿದ್ದರೆ 2017, 18, 19ಕ್ಕೆ ಲೀಗ್ ಹಂತದಲ್ಲಿ ತನ್ನ ಓಟ ಅಂತ್ಯ ಮಾಡಿತ್ತು. 2020ರಿಂದ 2022ರವರೆಗೆ ಮೂರು ವರ್ಷ ಪ್ಲೇಆಫ್​ಗೇರಿದೆ. ಆದರೆ, 2023ರ ಆವೃತ್ತಿಯಲ್ಲಿ ಪ್ಲೇಆಫ್​ ಹಂತದಲ್ಲೇ ಆಟ ಮುಗಿಸಿತ್ತು.

ಪಂದ್ಯದಲ್ಲಿ ಏನಾಯಿತು?

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಬಾರಿ ನಿರಾಸೆ ಎದುರಿಸಿತು. ಕಳೆದ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬಯಿ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿತು.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ತಂಡ 19.3 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 115 ರನ್ ಬಾರಿಸಿ 8 ವಿಕೆಟ್​ ವಿಜಯ ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ ತಂಡ ಉತ್ತಮ ಆರಂಭ ಪಡೆದ ಹೊರತಾಗಿಯೂ ಸರಾಸರಿ ರನ್​ಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿತು. ಆದಾಗ್ಯೂ ನಿಧಾನವಾಗಿ ರನ್​ ಪೇರಿಸಿ ಗೆಲುವು ಸಾಧಿಸಿದರು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಆರಂಭ ಪಡೆಯಿತು. ಕೇವಲ 71. ಓವರ್​ಗಳಲ್ಲಿ 64 ರನ್ ಬಾರಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 27 ಎಸೆಗಳಲ್ಲಿ 44 ರನ್ ಬಾರಿಸಿ ಮಿಂಚಿದರು. ಆದರೆ, ಅಬ್ಬರದ ಆಟ ಮುಂದುವರಿಸಲು ಹೋದ ಅವರು ಮೊಲಿನೆಕ್ಸ್ ಎಸೆತಕ್ಕೆ ಶ್ರೇಯಾಂಕ ಪಾಟೀಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಡೆಲ್ಲಿ ಸತತವಾಗಿ ಎರಡು ವಿಕೆಟ್​ಗಳನ್ನು ಕಳೆದುಕೊಂಡಿತು. ಉತ್ತಮ ಫಾರ್ಮ್​ನಲ್ಲಿದ್ದ ಜೆಮಿಮಾ ರೋಡ್ರಿಗಸ್​ ಹಾಗೂ ಅಲೈಸ್​ ಕಾಪ್ಸಿ ಶೂನ್ಯಕ್ಕೆ ಔಟಾದರು. ಮೊಲಿನೆಕ್ಸ್ ಒಂದೇ ಓವರ್​ನಲ್ಲಿ 3 ವಿಕೆಟ್​ ಪಡೆಯುವ ಮೂಲಕ ಡೆಲ್ಇಯ ಅಬ್ಬರ ಕಡಿಮೆ ಮಾಡಿದರು.

ಇದನ್ನೂ ಓದಿ : Jofra Archer : ಆರ್​ಸಿಬಿ ಪರ ಆಡಲಿದ್ದಾರಾ ಜೋಪ್ರಾ ಆರ್ಚರ್; ಇಲ್ಲಿದೆ ದೊಡ್ಡ ಅಪ್​ಡೇಟ್​​

ಬಳಿಕ ಮರಿಜ್ನೆ ಕಾಪ್​ (8) ಹಾಗೂ ಜೆಸ್ ಜೊನಾಸೆನ್​ 3 ರನ್ ಬಾರಿಸಿದರು. ರಾಧಾ ಯಾದವ್​ ನಂತರದಲ್ಲಿ 9 ಎಸೆತಕ್ಕೆ 12 ರನ್ ಬಾರಿಸಿದರು. ಮಿನ್ನು ಮಣಿ 5 ಹಾಗೂ ಅರುಂಧತಿ ರೆಡ್ಡಿ 10, ಶಿಖಾ ಪಾಂಡೆ 5 ರನ್ ಬಾರಿಸಿದರು. ಆರ್​ಸಿಬಿ ಪರ ಶ್ರೇಯಾಂಕ ಪಾಟೀಲ್​ 12 ರನ್ ನೀಡಿ 4 ವಿಕೆಟ್​ ಕಬಳಿಸಿದರೆ ಸೋಫಿ ಮೊಲಿನೆಕ್ಸ್​ 20 ರನ್​ ನೀಡಿ 3 ವಿಕೆಟ್​ ತಮ್ಮದಾಗಿಸಿಕೊಂಡರು. ಆಶಾ ಶೋಭನಾ ಕೂಡ 14 ರನ್​ಗೆ 2 ವಿಕೆಟ್​ ಉರುಳಿಸಿದರು.

Exit mobile version