Site icon Vistara News

ಸಿದ್ದಗಂಗಾ ಮಠದಿಂದ ಅಕ್ಕಿ ಎರವಲು ಪ್ರಕರಣ; ಕಲ್ಯಾಣಾಧಿಕಾರಿ ಗೀತಮ್ಮ ತಲೆದಂಡ

Siddaganaga mutt

ಬೆಂಗಳೂರು: ತುಮಕೂರು ಜಿಲ್ಲೆಯ ಹಿಂದುಳಿದ ವರ್ಗಗಳ ಹಾಸ್ಟೆಲ್​ಗೆ ಸಿದ್ದಂಗಾ ಮಠದಿಂದ ಅಕ್ಕಿ ಎರವಲು ಪಡೆದು ವಿತರಿಸಿದ್ದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗೀತಮ್ಮ ಅವರನ್ನು ಅಮಾನತು ಮಾಡಿ ಸರ್ಕಾರ (Karanataka Government) ಆದೇಶ ಹೊರಡಿಸಿದೆ. ಪ್ರಕರಣ ಬಯಲಿಗೆ ಬಂದು ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಅಧಿಕಾರಿಯ ತಲೆದಂಡ ಮಾಡಿ ಪ್ರಕರಣವನ್ನು ಕೊನೆಗೊಳಿಸಲು ಯತ್ನಿಸಿದೆ.

ರಾಜ್ಯ ಸರ್ಕಾರ ಸೂಕ್ತ ಪ್ರಮಾಣದಲ್ಲಿ ಅಕ್ಕಿಯನ್ನು ಸರಬರಾಜು ಮಾಡಿದೆ. ಅದರೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಿತಮ್ಮ ಅವರು ಅವುಗಳನ್ನು ಸೂಕ್ತ ಸಮಯಕ್ಕೆ ಬಿಸಿಎಂ ಹಾಸ್ಟೆಲ್​ಗಳಿಗೆ ವಿತರಿಸಲು ವಿಫಲಗೊಂಡಿದ್ದಾರೆ. ಈ ಮೂಲಕ ಅವರು ತಮ್ಮ ಕರ್ತವ್ಯ ಪೂರೈಸಲು ವಿಫಲಗೊಂಡಿದ್ದಾರೆ. ತಪ್ಪಿನ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ಏನಿದು ಪ್ರಕರಣ?

ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲ ಪಡೆಯಲಾಗಿತ್ತು. ತುಮಕೂರು ಜಿಲ್ಲೆಯ ಬಿಸಿಎಂ ಹಾಸ್ಟೆಲ್‌ಗಳಿಗೆ ಸರ್ಕಾರದಿಂದ ಸಕಾಲಕ್ಕೆ ರೇಷನ್ ಪೂರೈಕೆಯಾಗುತ್ತಿಲ್ಲ. ಆದರೆ, ಮಕ್ಕಳನ್ನು ಹೊಟ್ಟೆಗಿಲ್ಲದೆ ಕೂರಿಸಲು ಸಾಧ್ಯವೇ? ಆ ಸಕಾರಣದಿಂದ ಬಿಸಿಎಂ ಇಲಾಖೆ ಅಧಿಕಾರಿಗಳು ಸಿದ್ದಗಂಗಾ ಮಠದಿಂದ ಅಕ್ಕಿ ದಾಸ್ತಾನು ಸಾಲ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಮಾರು 500 ಚೀಲ ಅಕ್ಕಿಯನ್ನು ಸಾಲವಾಗಿ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು.

ಇದನ್ನೂ ಓದಿ : Govt. Employees : ಸರ್ಕಾರಿ ನೌಕರರು ಕೋರ್ಟ್‌ನಲ್ಲಿ ಜಾಮೀನು ಪಡೆದರೂ ಶಿಸ್ತುಕ್ರಮದಿಂದ ವಿನಾಯಿತಿ ಇಲ್ಲ

ಮಠದ ಆಡಳಿತಾಧಿಕಾರಿ ಸ್ಟಪಷ್ಟನೆ ಕೊಟ್ಟಿದ್ದರು

ಬಿಸಿಎಂ ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೊಟ್ಟಿರುವುದು ಹೌದು. ಈಗಾಗಲೇ ಈ ರೀತಿ ಎರಡು ಬಾರಿ ತೆಗೆದುಕೊಂಡು ಹೋಗಿದ್ದಾರೆ. ಒಮ್ಮೆ ವಾಪಸ್‌ ಕೊಟ್ಟಿದ್ದಾರೆ. ಈಗ ವಾಪಸ್‌ ಕೊಡಲಾಗಿದೆಯಾ? ಇಲ್ಲವಾ? ಎಂಬ ಸಂಗತಿ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಉಗ್ರಾಣದಲ್ಲಿ ಈ ಎಲ್ಲ ಮಾಹಿತಿ ಇರುತ್ತದೆ. ನಮ್ಮ ಸಿಬ್ಬಂದಿಗೆ ಈ ವಿಷಯ ಗೊತ್ತಿರುತ್ತದೆ. ಅಕ್ಕಿ ಸಾಲದ ರೂಪದಲ್ಲಿ ಬೇಕು ಎಂದು ಕೇಳಿದಾಗ ಕೊಡಲು ನಾನು ಸೂಚನೆ ನೀಡಿದ್ದೆ. ತರುವಾಯ ಬಂತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದರು.

ಸಚಿವ ಶಿವರಾಜ್‌ ತಂಗಡಗಿ ಸ್ಪಷ್ಟನೆ ನೀಡಿದ್ದರು

ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದರು.

ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ತುಮಕೂರು ಜಿಲ್ಲೆಯಲ್ಲಿ 111 ಹಾಸ್ಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಲ್ಲಿ ವಿದ್ಯಾರ್ಥಿಗಳ ಮಾಸಿಕ ಬೇಡಿಕೆಗಳಿಗೆ ಅನುಗುಣವಾಗಿ ಅಕ್ಕಿ ಮತ್ತು ಗೋಧಿ ಹಂಚಿಕೆಯಾಗಿರುತ್ತದೆ.‌ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ‌ ಅಕ್ಕಿ ಕೊರತೆ ಇಲ್ಲ. ಅಕ್ಕಿ ಇಲ್ಲ ಎಂಬ ವದಂತಿ ಬೆನ್ನಲ್ಲೇ ತುಮಕೂರಿನ ಹಿಂದುಳಿದ ವರ್ಗದ ಜಿಲ್ಲಾ ಕಲ್ಯಾಣ ಅಧಿಕಾರಿಯಿಂದ ಕೂಡ ಮಾಹಿತಿ ಪಡೆದಿದ್ದೇನೆ. ಅಕ್ಕಿ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದರು.

ಇನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಧಾನ‌ ಕಾರ್ಯದರ್ಶಿ ಅವರೊಂದಿಗೂ ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರು ಕೂಡ ಅಕ್ಕಿ‌ ಮತ್ತು ಗೋಧಿ ಪೂರೈಕೆಯಲ್ಲಿ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿ ನಿಲಯಗಳಿಗೆ ಪ್ರಥಮ ಆದ್ಯತೆಯಲ್ಲಿ‌ ಆಹಾರ ಸರಬರಾಜು ಪೂರೈಕೆ ಮಾಡುವಂತೆ‌ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ, ಈ ಕುರಿತು ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದರು.

Exit mobile version