ಬೆಂಗಳೂರು : ಭಾರತ ತಂಡ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishbha Pant) 2022 ರ ಡಿಸೆಂಬರ್ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ 26 ವರ್ಷದ ಆಟಗಾರ ಅನೇಕ ಜೀವಕ್ಕೆ ಅಪಾಯ ತರುವ ಮತ್ತು ಅಂಗವೈಕಲ್ಯಕ್ಕೆ ತುತ್ತಾಗಬಹುದಾಗಿದ್ದಂತ ಗಾಯಗಳಿಗೆ ಒಳಗಾಗಿದ್ದರು. ಹೀಗಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕ್ರಿಕೆಟ್ ಆಡುವ ಅವಕಾಶ ಕಳೆದುಕೊಂಡಿದ್ದರು. ಈ ಬ್ಯಾಟರ್ ಐಪಿಎಲ್ 2023 ಮತ್ತು ಏಕದಿನ ವಿಶ್ವಕಪ್ 2023 ಅನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಅವರು ಟಿ20 ವಿಶ್ವಕಪ್ಗಾಗಿ ತಯಾರಿ ನಡೆಸುತ್ತಿದ್ದಾರೆ.
ರಿಷಭ್ ಪಂತ್ ಅವರನ್ನು ಅಪಘಾತದ ಸ್ಥಳದಿಂದ ರಕ್ಷಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ವಿಮಾನದಲ್ಲಿ ಕರೆದೊಯ್ಯುವ ಮೊದಲು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಪಂತ್ 2-3 ವರ್ಷಗಳ ಅವಧಿಯಲ್ಲಿ ಚೇತರಿಸಿಕೊಳ್ಳಬಹುದು ಎಂದು ಭವಿಷ್ಯ ನುಡಿದಿದ್ದರು. ಆದರೆ ಆಟಗಾರನ ಇಚ್ಛಾಶಕ್ತಿಯು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿತು.
ಇತ್ತೀಚೆಗೆ, ಪಂತ್ ತಮ್ಮ ಅಪಘಾತದ ಬಗ್ಗೆ ಮಾತನಾಡಿದ್ದಾರೆ. ಅವರ ಗಾಯಗಳ ಬಗ್ಗೆ ವೈದ್ಯರು ಏನು ಹೇಳಿದರು ಮತ್ತು ಅದು ಅಂಗಗಳನ್ನು ತೆಗೆದು ಹಾಕುವುದಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ
ವೈದ್ಯರು ನನ್ನ ಬಳಿಗೆ ಬಂದು ರಿಷಭ್, ನೀವು ಮೂರು ಪವಾಡಗಳನ್ನು ಮಾಡಬೇಕಾಗಿದೆ. ಅವುಗಳಲ್ಲಿ ಎರಡು ನೀವು ಈಗಾಗಲೇ ಮಾಡಿದ್ದೀರಿ ಎಂದು ಹೇಳಿದರು. ಆಗ ನನ್ನ ಜೀವನದ ಬಗ್ಗೆ ನನಗೆ ಯಾವುದೇ ಕಲ್ಪನೆ ಇರಲಿಲ್ಲ. ಆದ್ದರಿಂದ ನಾನು ಅದನ್ನು ಸಂಪೂರ್ಣವಾಗಿ ಕೇಳುತ್ತಿದ್ದೆ. ಮೊದಲನೆಯದಾಗಿ, ಇಂತಹ ಭೀಕರ ಅಪಘಾತದ ನಂತರ ನೀವು ಜೀವಂತವಾಗಿದ್ದೀರಿ ಎಂಬುದೇ ದೊಡ್ಡ ಪವಾಡ ಎಂದು ವೈದ್ಯರು ಹೇಳಿದ್ದರು ಎಂಬುದಾಗಿ ‘ಆಪ್ ಕಿ ಅದಾಲತ್’ ನಲ್ಲಿ ಪಂತ್ ಹೇಳಿದ್ದಾರೆ.
“ಅಪಘಾತವಾದಾಗ ನನ್ನ ಬಲಗಾಲು 90 ಡಿಗ್ರಿ ಬಾಗಿತ್ತು. ಆ ಹೊತ್ತಿನಲ್ಲಿ ನನಗೆ ಏನು ಮಾಡಬೇಕೋ ಎಂದು ತಿಳಿದಿರಲಿಲ್ಲ. ನನ್ನನ್ನು ರಕ್ಷಿಸಿದ ವ್ಯಕ್ತಿಗೆ ಕಾಲನ್ನು ಹಿಡಿದು ಸ್ವಸ್ಥಾನಕ್ಕೆ ಮರಳಿಸುವಂತೆ ಹೇಳಿದ್ದೆ. ನೋವಿನ ನಡುವೆಯೂ ಅದನ್ನು ಮಾಡಿದ್ದೆ. ಈ ಬಗ್ಗೆ ವೈದ್ಯರು ಹೇಳಿದ್ದರು. ಎರಡನೆಯದಾಗಿ, ನಿಮ್ಮ ಕಾಲನ್ನು ನೀವು ಸರಿ ಮಾಡದೇ ಹೋಗಿದ್ದರೆ ಅದು ಅಂಗಚ್ಛೇದನಕ್ಕೆ ಕಾರಣವಾಗುತ್ತಿತ್ತು” ಎಂದು ಅವರು ಹೇಳಿದರು.
ಶಸ್ತ್ರ ಚಿಕಿತ್ಸೆಯ ಭರವಸೆ
ವೈದ್ಯರು ಎಸಿಎಲ್ ಮತ್ತು ಸಿಎಲ್ನಲ್ಲಿ ಯಾವುದೇ ಗಾಯ ಉಳಿದಿಲ್ಲ ಎಂದು ಹೇಳಿದ್ದರು. ಅದು ನನಗೆ ನೆರವಾಯಿತು ಎಂದು ಪಂತ್ ಹೇಳಿದ್ದಾರೆ. ಮೂರನೇ ಪವಾಡವೆಂದರೆ ಎಸಿಎಲ್ ಮತ್ತು ಪಿಸಿಎಲ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಅವರು ಹೇಳಿದ್ದರು. ನನ್ನ ಮೊಣಕಾಲುಗಳಲ್ಲಿ ಯಾವುದೇ ಲಿಗಮೆಂಟ್ ಉಳಿದಿಲ್ಲ ಎಂದು ಅವರು ಹೇಳಿದ್ದರು. ಇದು ಕೂಡ ಮೂರನೇ ಪವಾಡ ಎಂಬುದಾಗಿ ಪಂತ್ ಹೇಳಿದ್ದಾರೆ.