ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023 ರ (World Cup 2023) ಫೈನಲ್ ಪಂದ್ಯಕ್ಕಾಗಿ ಬಳಸಲಾದ ಪಿಚ್ ಬಗ್ಗೆ ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಿಚ್ ತಿರುಚಲು ಸಲಹೆ ನೀಡುವ ಮೂಲಕ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಭಾರತದ ಸೋಲಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಸತತ ಹತ್ತು ಪಂದ್ಯಗಳನ್ನು ಗೆದ್ದಿದ್ದ ಭಾರತ ಟೂರ್ನಿಯುದ್ದಕ್ಕೂ ಅಜೇಯ ಪ್ರದರ್ಶನ ನೀಡಿತ್ತು. ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಫೈನಲ್ನಲ್ಲಿ ತಂಡದ ಆವೇಗವು ಕುಸಿಯಿತು. ಇದು ಅಭಿಮಾನಿಗಳು ಮತ್ತು ಆಟಗಾರರಿಗೆ ನಿರಾಶೆಯನ್ನುಂಟು ಮಾಡಿತು. ಪಂದ್ಯದ ಬಳಿಕ 2023 ರ ವಿಶ್ವಕಪ್ನಲ್ಲಿ ಬಳಸಲಾದ ಪಿಚ್ಗಳನ್ನು ಅನೇಕ ತಜ್ಞರು ಟೀಕಿಸಿದರು. ಭಾರತ ತಂಡವು ಪಿಚ್ಗಳನ್ನು ತಿರುಚಿದೆ ಎಂದು ಆರೋಪಿಸಿದ್ದರು. ಅದರಲ್ಲೂ ಅಂತಿಮ ಪಂದ್ಯದ ಸಮಯದಲ್ಲಿ ಪಿಚ್ ಗುಣಮಟ್ಟದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಅನೇಕರು ಭಾರತದ ಸೋಲಿಗೆ ನಿಧಾನಗತಿಯ ಪಿಚ್ ಕಾರಣ ಎಂದು ಬೊಟ್ಟು ಮಾಡಿ ತೋರಿಸಿದ್ದರು.
ಪಿಚ್ ಬಣ್ಣ ಬದಲಾಗಿತ್ತು – ಮೊಹಮ್ಮದ್ ಕೈಫ್
ಪಂದ್ಯಾವಳಿಯ ಸಮಯದಲ್ಲಿ ಪ್ರಸಾರ ತಂಡದ ಭಾಗವಾಗಿದ್ದ ಮೊಹಮ್ಮದ್ ಕೈಫ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಅಂತಿಮ ಪಂದ್ಯಕ್ಕೆ ಪಿಚ್ ಸಿದ್ಧಪಡಿಸುವಲ್ಲಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ನೀಡಿದರು. ರೋಹಿತ್ ಮತ್ತು ದ್ರಾವಿಡ್ ಮೂರು ದಿನಗಳ ಕಾಲ ಪಿಚ್ ಕಡೆಗೆ ಭೇಟಿ ನೀಡುವುದನ್ನು ನೋಡಿದ್ದೇನೆ. ಅದೇ ರೀತಿ ದಿನದಿಂದ ದಿನಕ್ಕೆ ಪಿಚ್ನ ಬಣ್ಣ ಬದಲಾಗುತ್ತಿರುವುದನ್ನು ನೋಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ : IPL 2024 : ಐಪಿಎಲ್ ಸಿಕ್ಸರ್ ಕಿಂಗ್ಸ್; ಗರಿಷ್ಠ ಸಿಕ್ಸರ್ಗಳನ್ನು ಬಾರಿಸಿದ ಪವರ್ ಹಿಟ್ಟರ್ಗಳು ಇವರು
ನಾನು ಅಲ್ಲಿ ಮೂರು ದಿನಗಳ ಕಾಲ ಸ್ಟೇಡಿಯಮ್ನಲ್ಲಿ ಇದ್ದೆ. ಫೈನಲ್ಗೆ ಮುನ್ನ ರೋಹಿತ್ ಶರ್ಮಾ ಹಾಗೂ ದ್ರಾವಿಡ್ ಸ್ಟೇಡಿಯಮ್ಗೆ ಬಂದು ಹೋಗಿದ್ದರು. ಅಲ್ಲಿ ಒಂದು ಗಂಟೆ ನಿಂತು ಹಿಂತಿರುಗಿದರು. ಅವರು ಎರಡನೇ ದಿನ ಮತ್ತೆ ಬಂದಿದ್ದರು. ಇದು ಮೂರು ದಿನಗಳವರೆಗೆ ನಡೆಯಿತು. ಅಂತಿಮ ದಿನದಂದು ಪಿಚ್ ನ ಬಣ್ಣ ಬದಲಾಗಿರುವುನ್ನು ನಾನು ನೋಡಿದೆ. ನಾನು ಮೊದಲು ನೀಲಿ ಶರ್ಟ್ ಧರಿಸಿದ್ದೆ. ಮೂರು ದಿನಗಳ ನಂತರ ಅದು ಹಳದಿ ಬಣ್ಣದಲ್ಲಿ ಕಾಣುತ್ತಿತ್ತು, “ಎಂದು ಕೈಫ್ ಹೇಳಿದ್ದಾರೆ.
ತುಂಬಾ ನಿಧಾನಗತಿಯ ಪಿಚ್ ಆಯಿತು
ಆಸ್ಟ್ರೇಲಿಯಾ ತಂಡದಲ್ಲಿ ಕಮಿನ್ಸ್ ಮತ್ತು ಸ್ಟಾರ್ಕ್ ಅವರಂತಹ ವೇಗದ ಬೌಲರ್ಗಳಿದ್ದ ಕಾರಣ ನಿಧಾನಗತಿಯ ಪಿಚ್ ಸಿದ್ಧಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ. ಈ ನಿರ್ಧಾರವು ಅಂತಿಮವಾಗಿ ಭಾರತಕ್ಕೆ ಹಿನ್ನಡೆಯನ್ನುಂಟುಮಾಡಿತು. ಇದು ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣವಾಯಿತು ಎಂದು ಅವರು ಗಮನಿಸಿದರು.
“ನೀರಿರಲಿಲ್ಲ ಹುಲ್ಲು ಇರಲಿಲ್ಲ. ಇದು ತುಂಬಾ ನಿಧಾನಗತಿಯ ಪಿಚ್. ಕಮಿನ್ಸ್ ಮತ್ತು ಸ್ಟಾರ್ಕ್ ಇದ್ದರು, ಅವರು ವೇಗವಾಗಿ ಬೌಲಿಂಗ್ ಮಾಡಿದರು. ತವರು ತಂಡವಾಗಿ ಪಿಚ್ ಲಾಭ ಪಡೆಯುವುದು ಸರಿ. ಆದರೆ, ಪಿಚ್ಗೆ ನೀರು ಹಾಕಬೇಡಿ ಎಂದು ಹೇಳುವುದು ಸರಿಯಲ್ಲ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಮತ್ತು ಭಾರತ ತಂಡವು ತವರು ನೆಲದಲ್ಲಿ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನವನ್ನು ನೀಡಿತು. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದರು. ಜೂನ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಗೆಲುವು ಸಾಧಿಸುವುದು ಭಾರತದ ಗುರಿಯಾಗಿದೆ. ವಿಶೇಷವೆಂದರೆ 2007 ರಲ್ಲಿ ಉದ್ಘಾಟನಾ ಗೆಲುವಿನ ನಂತರ ಭಾರತ ತಂಡವು ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿಲ್ಲ.