Site icon Vistara News

Ind vs Eng : ಗಿಲ್, ರೋಹಿತ್​ ಶತಕ, ಭಾರತಕ್ಕೆ 255 ರನ್​ ಮುನ್ನಡೆ

Shubhman Gill

ಧರ್ಮಶಾಲಾ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಮೇಲುಗೈ ಸಾಧಿಸಿದೆ. 2ನೇ ದಿನ ಆತಿಥೇಯರು ಆಂಗ್ಲರ ಮೇಲೆ ಸಂಪೂರ್ಣ ಪಾರಮ್ಯ ಸಾಧಿಸಿದ್ದಾರೆ. ಶುಬ್ಮನ್ ಗಿಲ್ (103) ಮತ್ತು ರೋಹಿತ್ ಶರ್ಮಾ (110) ಇಬ್ಬರೂ ಶತಕಗಳನ್ನು ಬಾರಿಸಿದರೆ ಸರ್ಫರಾಜ್ (56) ಮತ್ತು ದೇವದತ್ ಪಡಿಕ್ಕಲ್​​ (65) ಅರ್ಧಶತಕಗಳನ್ನು ದಾಖಲಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಎರಡನೇ ದಿನದಾಟ ಮುಕ್ತಾಯದ ವೇಳೆಗೆ ಭಾರತ ತಂಡ 8 ವಿಕೆಟ್​ಗೆ 473 ರನ್ ಬಾರಿಸಿದ್ದು 255 ರನ್​ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಮೊದಲೆರಡು ಸೆಷನ್​ನಲ್ಲಿ ಉತ್ತಮವಾಗಿದ್ದ ಭಾರತ ತಂಡ ಮೂರನೇ ಸೆಷನ್​ನಲ್ಲಿ ಸತತವಾಗಿ ವಿಕೆಟ್​ಗಳನ್ನು ಕಳೆದುಕೊಂಡಿತು. ಹೀಗಾಗಿ ಭಾರತದ ಕೆಳ ಕ್ರಮಾಂಕವು ಒತ್ತಡಕ್ಕೆ ಸಿಲುಕಿತು. ರವೀಂದ್ರ ಜಡೇಜಾ ಹಾಗೂ ಧ್ರುವ್ ಜುರೆಲ್​ ತಲಾ 15 ರನ್ ಬಾರಿಸಿದರು. ರವಿಚಂದ್ರನ್ ಅಶ್ವನ್​ ಶೂನ್ಯಕ್ಕೆ ಔಟಾದರು. ಆದರೆ, ಕೊನೆಯಲ್ಲಿ ಕುಲ್ದೀಪ್​ ಯಾದವ್​ (27) ಹಾಗೂ ಜಸ್​ಪ್ರಿತ್​ ಬುಮ್ರಾ (19) ಅಂತರ ಹಿಗ್ಗುವಂತೆ ಮಾಡಿದರು.

ಶುಬ್ಮನ್ ಗಿಲ್ 2 ನೇ ದಿನದ ಆರಂಭದಲ್ಲಿ ಆಟಕ್ಕೆ ವೇಗ ತಂದತು. ಅವರು ರೋಹಿತ್ ಶರ್ಮಾ ರೀತಿಯಲ್ಲೇ ಶತಕದತ್ತ ಓಡಿದರು. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​​ನ್ಲಿ 48ನೇ ಶತಕ ಬಾರಿಸಿದ್ದು, ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದರು. ಇದೇ ವೇಳೆ ಹೊಸ ಆಟಗಾರರು ಆಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವುದನ್ನು ಮುಂದುವರಿಸಿದರು.

ಸರ್ಫರಾಜ್ ಖಾನ್ ಸರಣಿಯಲ್ಲಿ ತಮ್ಮ 3 ನೇ ಅರ್ಧಶತಕವನ್ನು ಚಹಾ ವಿರಾಮದ ಪೂರ್ವದಲ್ಲಿ ಔಟಾಗುವ ಮೊದಲು ಬಾರಿಸಿದರು. ಪದಾರ್ಪಣೆ ಆಟಗಾರ ದೇವದತ್ ಪಡಿಕ್ಕಲ್ ಕೂಡ ಟೆಸ್ಟ್ ಅರ್ಧಶತಕದ ಮೂಲಕ ಗಮನ ಸೆಳೆದರು. ಆದರೆ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್​ನಲ್ಲಿ ನಿರಾಸೆಗೊಳಿಸಿದರು. ಅಶ್ವಿನ್ ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ ಡಕ್ ಔಟ್ ಆದರು.

ಇದನ್ನೂ ಓದಿ : ind vs Eng : ಇಂಗ್ಲೆಂಡ್ ಸೋಲುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು ಆಸೀಸ್ ಮಾಜಿ ನಾಯಕ

ಇಂಗ್ಲೆಂಡ್ ಬೌಲಿಂಗ್ ಬಗ್ಗೆ ಹೇಳುವುದಾದರೆ, ಶೋಯೆಬ್ ಬಶೀರ್ ನಾಲ್ಕು ವಿಕೆಟ್ ಪಡೆದು ಭಾರತದ ಕುಸಿತಕ್ಕೆ ಕಾರಣರಾದರು. ಆಶಸ್ ಬಳಿಕ ಇದೇ ಮೊದಲ ಬಾರಿಗೆ ಬೌಲಿಂಗ್​ಗೆ ಮರಳಿದ ಬೆನ್ ಸ್ಟೋಕ್ಸ್, ರೋಹಿತ್ ಶರ್ಮಾ ಅವರನ್ನು ಮೊದಲ ಎಸೆತದಲ್ಲೇ ಔಟ್ ಮಾಡಿದರು.

Exit mobile version