ಬೆಂಗಳೂರು: ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಸ್ಟಾರ್ ಆಟಗಾರರು ಏಕ ದಿನ ಸರಣಿಗಾಗಿ ಕೊಲಂಬೊಗೆ ಬಂದಿಳಿದಿದ್ದಾರೆ. ಅವರು ಶ್ರೀಲಂಕಾ ವಿರುದ್ಧದ ಭಾರತದ ಏಕದಿನ ಸರಣಿಗೆ ಮುಂಚಿತವಾಗಿ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ. ಜುಲೈ 29, ಸೋಮವಾರ ಮಧ್ಯಾಹ್ನ ಕೊಹ್ಲಿ ದ್ವೀಪ ರಾಷ್ಟ್ರಕ್ಕೆ ಬಂದಿಳಿದಿದ್ದಾರೆ. ರೋಹಿತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಭಾನುವಾರ ಲಂಕಾ ತಲುಪಿದ್ದಾರೆ. 50 ಓವರ್ಗಳ ಸರಣಿ ಪ್ರಾರಂಭವಾಗುವ ಮೊದಲು ಕೊಹ್ಲಿ ಮತ್ತು ರೋಹಿತ್ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಭಾರತದ ಟಿ 20 ವಿಶ್ವಕಪ್ ಗೆಲುವಿನ ನಂತರ ಜೂನ್ 29 ರಂದು ಸ್ಟಾರ್ ಜೋಡಿ ಟಿ 20 ಯಿಂದ ನಿವೃತ್ತಿ ಘೋಷಿಸಿದ್ದರು.
ಏಕದಿನ ಸರಣಿಗೆ ರೋಹಿತ್ ಮತ್ತು ಕೊಹ್ಲಿಗೆ ವಿಶ್ರಾಂತಿ ನೀಡಲಾಗುತ್ತದೆಯೇ ಎಂಬ ಬಗ್ಗೆ ಊಹಾಪೋಹಗಳು ಇದ್ದವು. ಆದರೆ, ರೋಹಿತ್ ಅವರನ್ನು ಏಕದಿನ ನಾಯಕನನ್ನಾಗಿ ಘೋಷಿಸಲಾಯಿತು. ಕೊಹ್ಲಿಯನ್ನು 15 ಸದಸ್ಯರ ತಂಡದಲ್ಲಿ ಸೇರಿಸಲಾಯಿತು. 2024 ರ ಟಿ 20 ವಿಶ್ವಕಪ್ನಲ್ಲಿ ಭಾರತದ ಗೆಲುವಿನ ಒಂದು ತಿಂಗಳ ನಂತರ ಭಾರತೀಯ ದಿಗ್ಗಜರು ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಆ ದಿನವೇ, ರೋಹಿತ್ ಮತ್ತು ಕೊಹ್ಲಿ ಭಾರತಕ್ಕಾಗಿ ಕಿರು ಸ್ವರೂಪದಿಂದ ನಿವೃತ್ತಿ ಘೋಷಿಸಿದ್ದರು. ಆಟದ ಉಳಿದ ಎರಡು ಸ್ವರೂಪಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಕುಟುಂಬದೊಂದಿಗೆ ಸಮಯ ಕಳೆದ ಕೊಹ್ಲಿ-ರೋಹಿತ್
ಟಿ 20 ಐ ನಿವೃತ್ತಿಯ ನಂತರ, ಕೊಹ್ಲಿ ಮತ್ತು ರೋಹಿತ್ ತಮ್ಮ ಕುಟುಂಬಗಳೊಂದಿಗೆ ಸುಂದರ ಸಮಯವನ್ನು ಕಳೆದರು. ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳಾದ ವಮಿಕಾ ಮತ್ತು ಅಕೆ ಕೊಹ್ಲಿ ಅವರೊಂದಿಗೆ ಲಂಡನ್ ಗೆ ಹಾರಿದ್ದಾರೆ. ರೋಹಿತ್ ತಮ್ಮ ಪತ್ನಿ ರಿತಿಕಾ ಸಜ್ದೇಹ್ ಮತ್ತು ಮಗಳು ಸಮೈರಾ ಅವರೊಂದಿಗೆ ಯುಎಸ್ಎಗೆ ತೆರಳಿದ್ದರು.
ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರು ಸಜ್ಜು
ಈ ಸರಣಿಯಲ್ಲಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ತಂಡಕ್ಕಾಗಿ ಆಡಲಿದ್ದಾಋಎ. ಕೆಎಲ್ ರಾಹುಲ್ ಕೂಡ ಸರಣಿಯಲ್ಲಿ ಪುನರಾಗಮನ ಮಾಡಲಿದ್ದಾರೆ. ಟಿ 20 ಐ ಸರಣಿಯಿಂದ ವಿಶ್ರಾಂತಿ ಪಡೆದ ವಿಶ್ವ ಚಾಂಪಿಯನ್ ಕುಲದೀಪ್ ಯಾದವ್ ಮರಳಲಿದ್ದಾರೆ. ಹರ್ಷಿತ್ ರಾಣಾ ಕೂಡ ಸರಣಿಯಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಈ ಆಟಗಾರರು ಕೊಲಂಬೊದಲ್ಲಿ ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರ ಅಡಿಯಲ್ಲಿ ತರಬೇತಿ ಪಡೆಯಲಿದ್ದಾರೆ.
ಇದನ್ನೂ ಓದಿ: Paris Olympics 2024 : ಮನು ಭಾಕರ್ ಸೇರಿದಂತೆ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರ ಎಕ್ಸ್ ಖಾತೆಯಲ್ಲಿ ಐಫೆಲ್ ಟವರ್ ಚಿತ್ರ
ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ಭಾರತ ತಂಡವು ಪಲ್ಲೆಕೆಲೆಯಲ್ಲಿ ನಡೆಯಲಿರುವ 3 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾಗವಹಿಸುತ್ತಿದೆ. ಶ್ರೀಲಂಕಾ ವಿರುದ್ಧ ಭಾರತ 2-0 ಮುನ್ನಡೆ ಸಾಧಿಸಿದ್ದು, ಜುಲೈ 30 ರಂದು ನಡೆಯಲಿರುವ 3 ನೇ ಟಿ 20 ಐ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ. ಟಿ 20 ಐ ತಂಡದ ಅನೇಕ ಆಟಗಾರರು ಏಕದಿನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ 50 ಓವರ್ಗಳ ಸ್ವರೂಪದ ಸರಣಿ ಆಗಸ್ಟ್ 2 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 7 ರವರೆಗೆ ನಡೆಯಲಿದೆ.