Site icon Vistara News

Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

Rotary June Run

ಬೆಂಗಳೂರು: ರೋಟರಿ ಜಿಲ್ಲೆ 3192ರ ವತಿಯಿಂದ ಜೂನ್​ 9ರಂದು (ಭಾನುವಾರ) ಬೆಳಗ್ಗೆ 5 ಗಂಟೆಗೆ ನಗರದ ವಿಜ್ಞಾನ ಮತ್ತು ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ಆವರಣದಲ್ಲಿ ‘ರೋಟರಿ ಜೂನ್​ ರನ್’​ (Rotary June Run) ಮ್ಯಾರಥಾನ್​ ಆಯೋಜಿಸಲಾಗಿದೆ. ‘ವಿಸ್ತಾರ ನ್ಯೂಸ್​’ ಈ ಮ್ಯಾರಥಾನ್​ಗೆ ಮಾಧ್ಯಮ ಸಹಯೋಗ ನೀಡುತ್ತಿದೆ. ಸಮಾಜಮುಖಿ ಕಾರ್ಯಗಳಿಗೆ ನಿಧಿ ಸಂಗ್ರಹ ಮಾಡುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಲಾಗಿದ್ದು, ಸಾವಿರಾರು ಓಟದ ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮ್ಯಾರಥಾನ್​ನಲ್ಲಿ ಸುಮಾರು 2 ಸಾವಿರ ಓಟದ ಆಸಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ನೋಂದಣಿ ಪ್ರಾರಂಭಗೊಂಡಿದ್ದು, ಸುಮಾರು ಒಂದು ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಕ್ಯೂಆರ್​​ ಕೋಡ್​ ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. 10 ಕಿಲೋ ಮೀಟರ್​, 5 ಕಿಲೋ ಮೀಟರ್​, 3 ಕಿಲೋ ಮೀಟರ್​ ಹಾಗೂ 1 ಕಿಲೋಮೀಟರ್ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಲಿದೆ.

ಕಾರ್ಯಕ್ರಮದ ಅತಿಥಿಗಳಾಗಿ ವಿಸ್ತಾರ ನ್ಯೂಸ್​​ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿರಣ್​ ಕುಮಾರ್ ಡಿ. ಕೆ ಮತ್ತು ಸಹಾಯಕ ಸಂಪಾದಕ ಚಂದನ್ ಶರ್ಮಾ ಅವರು ಪಾಲ್ಗೊಳ್ಳಲಿದ್ದಾರೆ. ಇವರು ಬೆಳಗ್ಗೆ 5 ಗಂಟೆಗೆ ಓಟಕ್ಕೆ ಚಾಲನೆ ನೀಡಲಿದ್ದಾರೆ. 10 ವರ್ಷಗಳಿಂದ ರೋಟರಿ ಸಂಸ್ಥೆಯು ಈ ಓಟವನ್ನು ಆಯೋಜಿಸಿಕೊಂಡು ಬರುತ್ತಿದೆ. ಕೊರೊನಾ ಕಾಲದಲ್ಲಿ ಮ್ಯಾರಥಾನ್​ಗೆ ಅಡಚಣೆಯಾಗಿರುವುದು ಬಿಟ್ಟರೆ ನಿರಂತರವಾಗಿ ಸಮಾಜ ಮುಖಿ ಕಾರ್ಯಗಳ ಉದ್ದೇಶವನ್ನು ಇಟ್ಟುಕೊಂಡು ಓಟ ಆಯೋಜಿಸಿಕೊಂಡು ಬರಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಓಟದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವವರು ವೆಬ್​ಸೈಟ್​ ಅಥವಾ ಕ್ಯೂಆರ್ ಕೋಡ್​ ಸ್ಕ್ಯಾನ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಓಟದ ಆಸಕ್ತರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಸಾಮಾಜಿಕ ಕಾರ್ಯಕ್ಕಾಗಿ ನಿಧಿ ಸಂಗ್ರಹ

ಮ್ಯಾರಥಾನ್​ ವೇಳೆ ಸಂಗ್ರಹವಾಗುವ ನಿಧಿಯನ್ನು ಪರಿಸರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಯೋಜನೆಗಳು ಸೇರಿದಂತೆ ಸಮಾಜಮುಖಿ ಕಾರ್ಯಗಳಿಗಾಗಿ ವಿನಿಯೋಗಿಸಲಾಗುವುದು. ಪರಿಸರಕ್ಕೆ ಸಂಬಂದಿಸಿದಂತೆ ಚಿತ್ರದುರ್ಗ
ಜಿಲ್ಲೆಯ ಚಳ್ಳಕೆರೆ ಸಮೀಪದ ಸುಮಾರು 1200 ಎಕರೆ ಬರಡು ಭೂಮಿಯಲ್ಲಿ
ಸಸಿಗಳನ್ನು ನೆಡಲಾಗುವುದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ‘ಹ್ಯಾಪಿ ಸ್ಕೂಲ್’ ಯೋಜನೆಯಡಿ ಸರ್ಕಾರಿ ಶಾಲೆಗಳ
ಉನ್ನತೀಕರಣ, ಸೈಕಲ್ ವಿತರಣೆ, ಇ ಕಿಟ್ ವಿತರಣೆ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಮಕ್ಕಳಿಗೆ ಆಟದ ಪ್ರದೇಶ ನಿರ್ಮಾಣ ನೀಡಲಾಗುವುದು. ಅದೇ ರೀತಿ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಿಸಲಾಗುವುದು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಡವರಿಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಮುಟ್ಟಿನ ನೈರ್ಮಲ್ಯ ಇತರೆ ಯೋಜನೆಗಳಿಗಾಗಿ ಬಳಸಲಾಗುವುದು ಎಂದು ರೋಟರಿ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಟಿ ನಿರಂಜನ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Monsoon : ಮಳೆ ವರದಿ; ಕರ್ನಾಟಕದಲ್ಲಿ ಜೂನ್ 1ರಂದೇ ಮಾನ್ಸೂನ್ ಮಳೆ ಆರಂಭ

ಚಿತ್ರದುರ್ಗದಲ್ಲಿ 1200 ಎಕರೆ ಬರಡು ಭೂಮಿಯನ್ನು ದತ್ತು ತೆಗೆದುಕೊಳ್ಳಲಾಗಿದೆ. 400 ಎಕರೆ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಗಿದೆ. ಇನ್ನೂ 800 ಎಕರೆ ಪ್ರದೇಶವನ್ನು ಅರಣ್ಯೀಕರಣ ಮಾಡಬೇಕಾಗಿದೆ. ಓಟದಲ್ಲಿ ಸಂಗ್ರಹಗೊಂಡಿರುವ ಮೊತ್ತವನ್ನು ಅಲ್ಲಿಗೆ ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ನಡೆದ ಗುರುದತ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಂಗ್ರಹಿಸಿದ ಹಣದಲ್ಲಿ ರೋಟರಿ 119ನೇ ವರ್ಷಾಚರಣೆಯ ಸಂದರ್ಭದಲ್ಲಿ 119 ರೋಗಿಗಳ ಹೃದಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆಡೆಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Exit mobile version