Site icon Vistara News

Vinesh Phogat : ವಿನೇಶ್​ ಪೋಗಟ್​ಗೆ ಬೆಳ್ಳಿ ಪದಕ ಕೊಡಿ; ಕುಸ್ತಿಪಟುವಿನ ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್​

Vinesh Phogat

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) 50 ಕೆ.ಜಿ ವಿಭಾಗದ ಮಹಿಳೆಯ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶ್ ಫೊಗಾಟ್​ಗೆ ಕ್ರಿಕೆಟ್ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿನೇಶ್ ಫೋಗಟ್ (Vinesh Phogat) ಅವರು ಬೆಳ್ಳಿ ಪದಕಕ್ಕೆ ಅರ್ಹರು ಎಂಬುದಾಗಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಅಂತಿಮ ಸುತ್ತಿನವರೆಗೆ ರೋಚಕ ಪ್ರದರ್ಶನ ನೀಡಿದ್ದ ವಿನೇಶ್ ಆಗಿರುವ ಹಿನ್ನಡೆಗಾಗಿ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದರು. ಇದೀಗ ಅವರು ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ (CAS) ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಅರ್ಜಿಯನ್ನು ಆಗಸ್ಟ್ 8ರಂದು ಸ್ವೀಕರಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿನೇಶ್​ಗೆ ಬೆಂಬಲ ನೀಡಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೈನಲ್​​​ಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಅರ್ಹ ಪದಕವನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸಾಮರ್ಥ್ಯ ವರ್ಧನೆಯ ಔಷಧಿಗಳ ಬಳಕೆಯಂತಹ ದುಷ್ಕೃತ್ಯಗಳಾಗಿದ್ದರೆ ಅನರ್ಹತೆ ಅರ್ಥಪೂರ್ಣವಾಗುತ್ತಿತ್ತು ಎಂದು ಕ್ರಿಕೆಟ್ ದಂತಕಥೆ ಹೇಳಿದ್ದಾರೆ. ವಿನೇಶ್ ಗೆ ಅರ್ಹ ಮನ್ನಣೆ ಸಿಗುತ್ತದೆ ಎಂದು ಆಶಿಸುವ ಮೂಲಕ ತೆಂಡೂಲ್ಕರ್ ತಮ್ಮ ಹೇಳಿಕೆ ಕೊನೆಗೊಳಿಸಿದರು.

ಪ್ರತಿಯೊಂದು ಕ್ರೀಡೆಗೂ ನಿಯಮಗಳಿವೆ. ಆ ನಿಯಮಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನೋಡಬೇಕು. ನಿಯಮಗಳನ್ನು ಕಾಲಕಾಲಕ್ಕೆ ಮರುಪರಿಶೀಲಿಸಬಹುದು. ವಿನೇಶ್ ಫೋಗಟ್ ಫೈನಲ್​ಗೆ ಅರ್ಹತೆ ಪಡೆದಿದ್ದರು. ಬಳಿಕ ಹೆಚ್ಚು ತೂಕದ ಆಧಾರದ ಮೇಲೆ ಅವರನ್ನು ಅನರ್ಹಗೊಳಿಸಲಾಯಿತು. ಅವರಿಂದ ಬೆಳ್ಳಿ ಪದಕವನ್ನು ಕಸಿದುಕೊಳ್ಳುವುದು ಕ್ರೀಡಾ ಪ್ರಜ್ಞೆಯನ್ನು ಉಲ್ಲಂಘನೆ ಎಂದು ಹೇಳಿದರು.

ಇದನ್ನೂ ಓದಿ: Neeraj Chopra : ಗಾಯದ ಸಮಸ್ಯೆಯಿಂದ ಬಳಲುತ್ತಲೇ ಒಲಿಂಪಿಕ್ಸ್​ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ!

ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿಗಳ ಬಳಕೆಯಂತಹ ನೈತಿಕತೆಯ ಉಲ್ಲಂಘನೆಗಳಿಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದ್ದರೆ ಅದು ಅರ್ಥವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ, ಯಾವುದೇ ಪದಕ ನೀಡದಿರುವುದು ಮತ್ತು ಕೊನೆಯ ಸ್ಥಾನಕ್ಕೆ ಕೊಂಡೊಯ್ಯುವುದು ಸಮರ್ಥನೀಯ. ವಿನೇಶ್ ತನ್ನ ಎದುರಾಳಿಗಳನ್ನು ನ್ಯಾಯಯುತವಾಗಿ ಸೋಲಿಸಿ ಅಗ್ರ ಎರಡರೊಳಗಿನ ಸ್ಥಾನ ತಲುಪಿದರು. ಅವರು ಖಂಡಿತವಾಗಿಯೂ ಬೆಳ್ಳಿ ಪದಕಕ್ಕೆ ಅರ್ಹರು ಎಂಬದಾಗಿ ಸಚಿನ್​ ಹೇಳಿದ್ದಾರೆ.

ನಾವೆಲ್ಲರೂ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ವಿನೇಶ್ ಅವರಿಗೆ ಅರ್ಹವಾದ ಮನ್ನಣೆ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಪ್ರಾರ್ಥಿಸೋಣ” ಎಂದು ಸಚಿನ್ ಹೇಳಿದ್ದಾರೆ.

ಒಲಿಂಪಿಕ್ಸ್ ಮುಗಿಯುವ ಮುನ್ನ ವಿನೇಶ್ ಮೇಲ್ಮನವಿ ತೀರ್ಪು ಸಾಧ್ಯತೆ

ಪ್ಯಾರಿಸ್ ಒಲಿಂಪಿಕ್ಸ್ 2024ರ ಸಮಾರೋಪದ ಮೊದಲು ವಿನೇಶ್ ಫೋಗಟ್ ಸಲ್ಲಿಸಿದ್ದ ಮನವಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಶುಕ್ರವಾರ ತಿಳಿಸಿದೆ. ಇತ್ತೀಚಿನ ನವೀಕರಣದ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ಈ ವಿಷಯವನ್ನು ಏಕೈಕ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರು ನಿರ್ವಹಿಸುತ್ತಿದ್ದಾರೆ.

Exit mobile version