Site icon Vistara News

Grama Sahayaka: ಗ್ರಾಮ ಸಹಾಯಕರ ವೇತನ 13,000 ರಿಂದ 15,000ಕ್ಕೆ ಹೆಚ್ಚಳ: ಅಧಿಕೃತ ಆದೇಶ ಹೊರಡಿಸಿದ ಸರ್ಕಾರ

Health Expenditure

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ (Grama Sahayaka) ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಗ್ರಾಮ ಸಹಾಯಕರ ಮಾಸಿಕ ಮಿತ ವೇತನವನ್ನು 13,000 ರಿಂದ 15,000 ರೂ.ಗಳಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಈ ಬಗ್ಗೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಆದೇಶ ಹೊರಡಿಸಿದ್ದು, ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9903 ಗ್ರಾಮ ಸಹಾಯಕರ ಮಾಸಿಕ ಮಿತಿ ವೇತನವನ್ನು ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮಾಸಿಕ 13,000ಗಳಿಂದ 15,000ಗಳಿಗೆ ಹೆಚ್ಚಿಸಿ ಆದೇಶಿಸಿದ್ದಾರೆ.

ವೇತನ ಹೆಚ್ಚಳ, ಡಿ ದರ್ಜೆ ನೌಕರರೆಂದು ಪರಿಗಣಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇತ್ತೀಚೆಗೆ ಗ್ರಾಮ ಸಹಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ವೇತನ ಹೆಚ್ಚಳದ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಇದೀಗ ಅಧಿಕೃತವಾಗಿ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ | Job Alert: ಪದವೀಧರರಿಗೆ ಗುಡ್‌ನ್ಯೂಸ್‌; ಖಾಲಿ ಇರುವ 4,187 ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಡಿ ದರ್ಜೆ ನೌಕರರೆಂದು ಪರಿಗಣಿಸಲು ನಿರಾಕರಿಸಿದ್ದ ಸರ್ಕಾರ

ಗ್ರಾಮ ಸಹಾಯಕರಿಗೆ ಗೌರವಧನ ಹೆಚ್ಚಳ, ಸೇವಾ ಭದ್ರತೆ ಹಾಗೂ ‘ಡಿ ದರ್ಜೆ ನೌಕರರೆಂದು ಪರಿಗಣಿಸುವ ಸಂಬಂಧ ಆಡಳಿತ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ ಎಂದು ಇತ್ತೀಚೆಗೆ ತಿಳಿಸಿದ್ದ ಸರ್ಕಾರ, ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದೆ. ಗ್ರಾಮ ಸಹಾಯಕರಿಗೆ ಸೇವಾ ನಿಯಮಾವಳಿಯನ್ನು ರೂಪಿಸಿ ಸೇವಾ ಭದ್ರತೆಯನ್ನು ನೀಡುವ ಬಗ್ಗೆ ಇಲಾಖೆಯ ಹಂತದಲ್ಲಿ ಪರಿಶೀಲಿಸಿ, ಇದೇ ರೀತಿ ಗೌರವಧನ (ಸಂಚಿತ ವೇತನ) ಪಡೆಯುತ್ತಿರುವ ನೌಕರರುಗಳಿಗೆ ಇತರೆ ಇಲಾಖೆಗಳಲ್ಲಿ ಸೇವಾ ಭದ್ರತೆಗಾಗಿ ಯಾವ ರೀತಿ ನಿಯಮಾವಳಿ ರೂಪಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ನಿರ್ದಿಷ್ಟ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದೆ. ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸುವ ಪ್ರಸ್ತಾವನೆಯನ್ನು ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲವೆಂದು ತಿಳಿಸಿತ್ತು.

Exit mobile version