Site icon Vistara News

Sandeshkhali: ಐಪಿಎಸ್‌ ಅಧಿಕಾರಿಗೆ ‘ಖಲಿಸ್ತಾನಿ’ ಎಂದ ಬಿಜೆಪಿ ನಾಯಕ ಸುವೇಂದುಗೆ ಎದುರಾಯ್ತು ಸಂಕಟ

Sandeshkhali, BJP leader Suvendu was in trouble for calling the IPS officer a Khalistani

ಕೋಲ್ಕೊತಾ: ಪಶ್ಚಿಮ ಬಂಗಾಳದ (West Bengal) ಸಿಖ್ ಐಪಿಎಸ್ ಪೊಲೀಸ್ ಅಧಿಕಾರಿಯೊಬ್ಬರನ್ನು (IPS Police Officer) ಬಿಜೆಪಿ ಸುವೇಂದು ಅಧಿಕಾರಿ (BJP Leader Suvendu Adhikari) ಅವರು, ‘ಖಲಿಸ್ತಾನಿ’ (Khalistani ಎಂದು ಜರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯು (West Bengal Police) ಕಾನೂನಾತ್ಮಕ ಕ್ರಮವನ್ನು ಎದುರಿಸಬೇಕು ಎಂದು ಎಚ್ಚರಿಸಿದೆ. ಪೊಲೀಸ್ ಅಧಿಕಾರಿಯನ್ನು ನಿಂದಿಸಿರುವ ಬಿಜೆಪಿಯ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಶಿರೋಮಣಿ ಗುರದ್ವಾರ ಪರ್ಬಂಧಕ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷವು ವಾಗ್ದಾಳಿ ನಡೆಸಿವೆ. ಅಲ್ಲದೇ, ಕಠಿಣ ಕ್ರಮಕ್ಕೆ ಆಗ್ರಹಿಸಿವೆ.

ನಮ್ಮದೇ ಅಧಿಕಾರಿಯೊಬ್ಬರನ್ನು ರಾಜ್ಯದ ಪ್ರತಿಪಕ್ಷದ ನಾಯಕ ‘ಖಲಿಸ್ತಾನಿ’ ಎಂದು ಕರೆದಿದ್ದಾರೆ. ಆ ಅಧಿಕಾರಿಯ ತಪ್ಪೆಂದರೆ, ಅವರು ಹೆಮ್ಮೆಯ ಸಿಖ್ ಮತ್ತು ಕಾನೂನನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಸಮರ್ಥ ಪೋಲೀಸ್ ಅಧಿಕಾರಿಯಾಗಿರುವುದು. ಅವರ ವಿರುದ್ದ ಮಾಡಿರುವ ಟೀಕೆ ತುಂಬಾ ದುರುದ್ದೇಶಪೂರಿತವಾಗಿದೆ ಮತ್ತು ಇದು ಕೋಮು ಪ್ರಚೋದನೆ ಮಾತ್ರವಲ್ಲದೇ, ಜನಾಂಗೀಯವಾಗಿದೆ. ಇದು ಕ್ರಿಮಿನಲ್ ಕೃತ್ಯವಾಗಿದೆ ಎಂದು ಎಕ್ಸ್‌ ವೇದಿಕೆಯಲ್ಲಿ ಪಶ್ಚಿಮ ಬಂಗಾಳ ಪೊಲೀಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.

ಸುವೇಂದು ಅಧಿಕಾರಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಂದೇಶಖಾಲಿಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದರು. ನಂತರದ ಘರ್ಷಣೆಯಲ್ಲಿ, ಪ್ರತಿಭಟನಾಕಾರರಲ್ಲಿ ಒಬ್ಬರು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು “ಖಲಿಸ್ತಾನಿ” ಎಂದು ಕರೆದರು. ಈ ಕುರಿತಾದ ವಿಡಿಯೋ ಭಾರೀ ವೈರಲ್ ಆಗಿದ್ದು, ಪೊಲೀಸರು ಕೂಡ ಬಿಜೆಪಿ ನಾಯಕನ ವಿರುದ್ಧ ಗರಂ ಆಗಿದ್ದಾರೆ.

ದೇಶದ ಸ್ವಾತಂತ್ರ್ಯ ಮತ್ತು ರಕ್ಷಣೆಗಾಗಿ ಸಿಖ್ಖರು ಅತಿ ಹೆಚ್ಚು ತ್ಯಾಗ ಮಾಡಿದ್ದಾರೆ ಎಂಬುದನ್ನು ದೇಶದಲ್ಲಿ ಇಂತಹ ಚಿಂತನೆಯನ್ನು ಹೊಂದಿರುವ ನಾಯಕರು ಎಂದಿಗೂ ಮರೆಯಬಾರದು. ದೇಶದಲ್ಲಿ ಅಂತಹ ಜನರು ಉದ್ದೇಶಪೂರ್ವಕವಾಗಿ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಆದರೆ ಸರ್ಕಾರಗಳು ಮೌನವಾಗಿರುವುದ ದುರಂತ ಎಂದು ಎಸ್‌ಜಿಸಿಪಿ ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ನಾಯಕ ಖಲಿಸ್ತಾನಿ ಎಂದು ಹೇಳುತ್ತಿದ್ದಂತೆ ಇದಕ್ಕೆ ಆಕ್ರೋಶದಿಂದ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯು, “ನಾನು ಪೇಟ ಧರಿಸಿದ್ದೇನೆ, ಅದಕ್ಕಾಗಿಯೇ ನೀವು ನನ್ನನ್ನು ಖಲಿಸ್ತಾನಿ ಎಂದು ಕರೆಯುತ್ತಿದ್ದೀರಾ? ನಾನು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ. ನೀವು ನನ್ನ ಧರ್ಮದ ಮೇಲೆ ದಾಳಿ ಮಾಡಬಾರದು. ನಿಮ್ಮ ಧರ್ಮದ ಬಗ್ಗೆ ನಾನು ಏನನ್ನೂ ಹೇಳಿಲ್ಲ ಎಂದು ಅಧಿಕಾರಿ ಹೇಳುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದು.

ಈ ಸುದ್ದಿಯನ್ನೂ ಓದಿ: Sandeshkhali case: ಸಂದೇಶಖಾಲಿ ಪ್ರಕರಣ; ಬಂಗಾಳದ ಉನ್ನತ ಅಧಿಕಾರಿಗಳ ವಿರುದ್ಧ ಲೋಕಸಭೆ ಸಮಿತಿ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ

Exit mobile version