ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ (Sandeshkhali case) ಭೂ ಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ನಿರ್ದೇಶಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಯಾರನ್ನಾದರೂ ರಕ್ಷಿಸಲು ರಾಜ್ಯವು ಏಕೆ ಆಸಕ್ತಿ ವಹಿಸಬೇಕು?” ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠ ಪ್ರಶ್ನಿಸಿದೆ. ವಿಚಾರಣೆಯ ಕೊನೆಯ ದಿನಾಂಕದಂದು, ಸುಪ್ರೀಂ ಕೋರ್ಟ್ ಈ ನಿರ್ದಿಷ್ಟ ಪ್ರಶ್ನೆಯನ್ನು ಕೇಳಿದ ನಂತರ ವಿಚಾರಣೆ ಮುಂದೂಡಬೇಕೆಂದು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರು ಹೇಳಿದರು.
#NewDelhi | #SupremeCourt rejects #WestBengal Govt's plea challenging Calcutta High Court order directing CBI investigation into allegations of land grabbing and sexual assault in #Sandeshkhali pic.twitter.com/50PcxBy4br
— DD News (@DDNewslive) July 8, 2024
ಈ ವೇಳೆ “ಧನ್ಯವಾದಗಳು. ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಪೀಠ ಹೇಳಿತು. ಕಲ್ಕತ್ತಾ ಹೈಕೋರ್ಟ್ ಏಪ್ರಿಲ್ 10 ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಏಪ್ರಿಲ್ 29 ರಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಲವು ಖಾಸಗಿ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯವು ಏಕೆ ಅರ್ಜಿದಾರರಾಗಿ ಬರಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಳಿತು. ಕಲ್ಕತ್ತಾ ಹೈಕೋರ್ಟ್ನ ಆದೇಶವು ಪೊಲೀಸ್ ಪಡೆ ಸೇರಿದಂತೆ ಇಡೀ ರಾಜ್ಯ ಯಂತ್ರದ ನೈತಿಕ ಸ್ಥೈರ್ಯ ಕುಗ್ಗಿಸಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.
ಸಂದೇಶ್ಖಾಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಬಿಐ ಈಗಾಗಲೇ ನಡೆಸುತ್ತಿದೆ ಮತ್ತು ಜನವರಿ 5 ರಂದು ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಮೂರು ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಕಲ್ಕತ್ತಾ ಹೈಕೋರ್ಟ್, ಕಂದಾಯ ದಾಖಲೆಗಳ ಸಮಗ್ರ ಪರಿಶೀಲನೆ ಮತ್ತು ಪರಿವರ್ತಿಸಲಾಗಿದೆ ಎಂದು ಹೇಳಲಾದ ಭೂಮಿಯ ಭೌತಿಕ ತಪಾಸಣೆ ನಡೆಸಿದೆ. ಬಳಿಕ ಕೃಷಿ ಭೂಮಿಯನ್ನು ಮೀನು ಸಾಕಣೆಗಾಗಿ ಜಲಮೂಲಗಳಾಗಿ ಅಕ್ರಮವಾಗಿ ಪರಿವರ್ತಿಸಲಾಗಿದೆ ಎಂಬ ಆರೋಪದ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು.
ಇದನ್ನೂ ಓದಿ: Chennai Police commissioner : ಬಿಎಸ್‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ
ಸಂದೇಶ್ಖಾಲಿಯಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಗಳು ಮತ್ತು ಭೂ ಕಬಳಿಕೆ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಮತ್ತು ಮುಂದಿನ ವಿಚಾರಣೆಯ ದಿನಾಂಕದಂದು ಸಮಗ್ರ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು.
ಏನಿದು ಸಂದೇಶ್ಖಾಲಿ ಪ್ರಕರಣ?
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ಖಾಲಿ ಎಂಬ ಹಳ್ಳಿಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಆ ಪಕ್ಷದ ಪ್ರಭಾವಿ ಶೇಖ್ ಶಹಜಹಾನ್ ವಿರುದ್ಧ ಗ್ರಾಮಸ್ಥರು, ಹೆಚ್ಚಾಗಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಅಲ್ಲಿ ರಾಜಕೀಯ ಬಿರುಗಾಳಿ ಎದ್ದಿತ್ತು. ನಂತರ ಅವರನ್ನು ಬಂಧಿಸಲಾಯಿತು. ಸಂದೇಶ್ಖಾಲಿ ವಿಚಾರವಾಗಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಎರಡೂ ಪರಸ್ಪರರ ವಿರುದ್ಧ ಆರೋಪಗಳನ್ನು ಮಾಡುತ್ತಿವೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರದಲ್ಲಿ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಜನರ ಗುಂಪು ದಂಪತಿಯನ್ನು ಸಾರ್ವಜನಿಕವಾಗಿ ಥಳಿಸಿದ ವಿಷಯದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು.