ಬೆಂಗಳೂರು: ಸರಳ ವಾಸ್ತು ಎಂಬ ಹೆಸರಿನ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದ ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಹಾಡಹಗಲೆ, ಅನೇಕ ಜನರೆದುರೇ ಇಬ್ಬರು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವುದರ ಹಿನ್ನೆಲೆ ಏನು ಎಂಬ ಬಗ್ಗೆ ಈಗ ಕುತೂಹಲ ಮೂಡಿದೆ.
ಆರೋಪಿಗಳ ಕೃತ್ಯ ಹೋಟೆಲ್‌ನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬಾಗಲಕೋಟೆಯವರು ಎನ್ನಲಾಗುತ್ತಿದೆ. ಅನೇಕ ವರ್ಷಗಳಿಂದ ಚಂದ್ರಶೇಖರ ಗುರೂಜಿ ಅವರಿಗೆ ಪರಿಚಿತನಾಗಿದ್ದ ಮಹಾಂತೇಶ ಶಿರೂರ ಎಂದು ಹೇಳಲಾಗುತ್ತಿದೆ. ಈಗಾಗಲೆ ತನಿಖೆ ಆರಂಭಿಸಿರುವ ಪೊಲೀಸರು ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಲ್ಲಿವರೆಗೆ ಲಭಿಸಿದ ಮಾಹಿತಿಗಳ ಪ್ರಕಾರ, ವ್ಯಾಪಾರ ಉದ್ದೇಶಕ್ಕೆ ಸರಳ ವಾಸ್ತು ಪರಿಹಾರ ಕೇಳಿದ್ದು, ಲಕ್ಷಾಂತರ ರೂ. ಕಳೆದುಕೊಂಡ ಕೋಪದಲ್ಲಿ ಹತ್ಯೆ ಮಾಡಿರಬಹುದು ಎನ್ನಲಾಗುತ್ತಿದೆ.
ಅನೇಕ ಸಮಸ್ಯೆಗಳಿಗೆ ಪರಿಹಾರ
ಸರಳ ವಾಸ್ತುವಿನ ಮೂಲಕ ಚಂದ್ರಶೇಖರ ಗುರೂಜಿ ಅವರು ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ತಿಳಿಸುತ್ತಿದ್ದರು. ಅಂಗಡಿಗಾಗಿ ವಾಸ್ತು, ಹೋಟೆಲ್‌ಗಾಗಿ ವಾಸ್ತು, ಕಚೇರಿಗೆ ವಾಸ್ತು, ಕಾರ್ಖಾನೆಗಳಿಗಾಗಿ ವಾಸ್ತು, ಆಸ್ಪತ್ರೆಗಳಿಗಾಗಿ ವಾಸ್ತು, ಕೈಗಾರಿಕೆಗಳಿಗಾಗಿ ವಾಸ್ತು, ಕಾರ್ಪೊರೇಟ್‌ಗಳಿಗೆ ವಾಸ್ತು, ಶೈಕ್ಷಣಿಕ ಸಂಸ್ಥೆಗಾಗಿ ವಾಸ್ತು ಪರಿಹಾರ ನೀಡುತ್ತಿದ್ದರು.
ಮನೆಗಳ ಕುರಿತಂತೆ, ಅಡುಗೆ ಕೋಣೆಗಾಗಿ ವಾಸ್ತು, ಮಲಗುವ ಕೋಣೆಗಾಗಿ ವಾಸ್ತು, ಅಧ್ಯಯನ ಕೋಣೆಗಾಗಿ ವಾಸ್ತು, ಪೂಜಾ ಕೋಣೆಗಾಗಿ ವಾಸ್ತು, ಸ್ನಾನದ ಕೋಣೆಗಾಗಿ ವಾಸ್ತು, ಮುಖ್ಯದ್ವಾರಗಳಿಗಾಗಿ ವಾಸ್ತು ಪರಿಹಾರ ನೀಡುತ್ತಿದ್ದರು.
ಪ್ರತಿಯೊಂದು ಪರಿಹಾರಕ್ಕೂ ಶುಲ್ಕವನ್ನು ನಿಗದಿಪಡಿಸುತ್ತಿದ್ದರು. ಮನೆಯ ಪರಿಹಾರಗಳಿಗೆ ಸಾಮಾನುವಾಗಿ ಕಡಿಮೆ ಮೊತ್ತ ಇರುತ್ತಿತ್ತು. ಹತ್ತು ಸಾವಿರ ರೂ.ನಿಂದ ಆರಂಭವಾಗಿ, ವಾಣಿಜ್ಯ ಉದ್ದೇಶಕ್ಕೆ ನೀಡುವ ಪರಿಹಾರಗಳು ಲಕ್ಷಾಂತರ ರೂ.ವರೆಗೆ ಇರುತ್ತಿದ್ದವು.
ಪರಿಹಾರಗಳನ್ನು ಸರಳ ವಾಸ್ತುವಿನಿಂದ ನೀಡಲಾಗುತ್ತಿತ್ತಾದರೂ ಅದರಿಂದ ಆಗುವ ಎಲ್ಲ ಪರಿಣಾಮಗಳಿಗೆ ತಮ್ಮನ್ನೇ ಹೊಣೆ ಮಾಡಬಾರದು ಎಂದು ಪ್ರಾರಂಭದಲ್ಲೆ ತಿಳಿಸಲಾಗುತ್ತಿತ್ತು. ಸರಳ ವಾಸ್ತು ವೆಬ್‌ಸೈಟ್‌ನಲ್ಲಿ ಈ ಕುರಿತು ಸುದೀರ್ಘ ಷರತ್ತು ಮತ್ತು ನಿಯಮಗಳನ್ನು ಘೋಷಿಸಲಾಗಿದೆ.
ʻಯಾವುದೇ ಸಮಯದಲ್ಲಾದರೂ, ಯಾವುದೇ ಸನ್ನಿವೇಶಗಳ ಅಡಿಯಲ್ಲಿ ಬೇಕಾದರೂ ಸೈಟ್ ನಲ್ಲಿ ದೊರೆಯುವ ಸೇವೆಗಳ ಉಪಯೋಗದ ಕಾರಣದಿಂದಾಗಿ, ಜೀವನದಲ್ಲಿ ನೀವು ಮಾಡುವ ಅಥವಾ ಅನುಭವಿಸುವ ಯಾವುದೇ ನಿರ್ಧಾರಗಳಿಗೆ, ಕ್ರಮಗಳಿಗೆ ಅಥವಾ ಫಲಿತಾಂಶಗಳಿಗೆ ಕಂಪನಿಯಾಗಲಿ ಮತ್ತು/ಅಥವಾ ಅದರ ಅಧಿಕಾರಿಗಳಾಗಲಿ, ಮ್ಯಾನೇಜರ್‌ಗಳಾಗಲಿ, ಸದಸ್ಯರಾಗಲಿ, ನಿರ್ದೇಶಕರಾಗಲಿ, ನೌಕರರಾಗಲಿ, ಉತ್ತರಾಧಿಕಾರಿಗಳಾಗಲಿ, ನಿಯೋಜಕರಾಗಲಿ, ಅಂಗಸಂಸ್ಥೆಗಳಾಗಲಿ, ಪೂರೈಕೆದಾರರಾಗಲಿ ಮತ್ತು ಪ್ರತಿನಿಧಿಗಳಾಗಲಿ ಹೊಣೆಗಾರರಾಗಲು ಸಾಧ್ಯವಿಲ್ಲ ಎಂಬುದನ್ನು ನೀವು ಸಮ್ಮತಿಸಿ ಒಪ್ಪುತ್ತೀರಿ. ಈ ಸೇವೆಗಳ ಅಡಿಯಲ್ಲಿ ಕೊಡಲಾದ ಸಲಹೆಯನ್ನು ಅನುಷ್ಠಾನಕ್ಕೆ ತಂದ ನಂತರ ನಿಮ್ಮ ಜೀವನಕ್ಕೆ ನೀವು ಮಾತ್ರವೇ ಜವಾಬ್ದಾರರಾಗಿರುತ್ತೀರಿ ಎಂದು ನೀವು ಅರ್ಥಮಾಡಿಕೊಳ್ಳುತ್ತೀರಿ ಮತ್ತು ಒಪ್ಪುತ್ತೀರಿʼ ಎಂದು ತಿಳಿಸಲಾಗಿದೆ. ಅಂದರೆ ಪರಿಹಾರ ಕೋರಿ ಆಗಮಿಸುವವರ ಜೀವನದಲ್ಲಿ ಬದಲಾವಣೆಗಳು ಆಗದಿದ್ದರೆ ತಮ್ಮ ಸಂಸ್ಥೆಯನ್ನು ಹೊಣೆ ಮಾಡಬಾರದು ಎಂದು ತಿಳಿಸುತ್ತಿದ್ದರು.
ಆದರೂ, ಕೆಲವು ಬಾರಿ ಲಕ್ಷಾಂತರ ರೂ. ವೆಚ್ಚ ಮಾಡಿ ಪರಿಹಾರ ಸಿಕ್ಕದಿದ್ದಾಗ ಆಕ್ರೋಶ ವ್ಯಕ್ತಪಡಿಸುವವರೂ ಇರುತ್ತಿದ್ದರು ಎನ್ನಲಾಗಿದೆ. ಇದೆಲ್ಲದರ ನಡುವೆ ಚಂದ್ರಶೇಖರ ಗುರೂಜಿ ಅವರ ಹತ್ಯೆಗೆ ನಿಖರ ಕಾರಣ ಇನ್ನಷ್ಟೆ ತಿಳಿದುಬರಬೇಕಿದೆ.
ಇದನ್ನೂ ಓದಿ | ಸರಳ ವಾಸ್ತು ಖ್ಯಾತಿಯ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಹತ್ಯೆ