Site icon Vistara News

Sarfaraz Khan : ಕೆಕೆಆರ್​ ತಂಡ ಸೇರಲಿದ್ದಾರಾ ಸರ್ಫರಾಜ್ ಖಾನ್​?

Sarfaraz Khan

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಮುಂಬರುವ ಋತುವಿನಲ್ಲಿ ಸರ್ಫರಾಜ್ ಖಾನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. 2023ರ ಡಿಸೆಂಬರ್​ನಲ್ಲಿ ನಡೆದ ಹರಾಜಿನಲ್ಲಿ ಬಲಗೈ ಬ್ಯಾಟರ್​​ ಆಶ್ಚರ್ಯಕರವಾಗಿ ಅನ್​ಸೋಲ್ಡ್​ ಆಗಿದ್ದರು. ಇದಕ್ಕೂ ಮೊದಲು ಐಪಿಎಲ್ 2023 ರಲ್ಲಿ ಅವರು ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿದ್ದರು. ಹೀಗಾಗಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿತ್ತು. ಅವರು ದೆಹಲಿ ತಂಡದ ಪರ ನಾಲ್ಕು ಪಂದ್ಯಗಳನ್ನು ಆಡಿದರು ಮತ್ತು ಸಾಧಾರಣ 53 ರನ್ ಗಳಿಸಿದ್ದರು. ಬ್ಯಾಟ್​ನೊಂದಿಗೆ ಅವರ ಪ್ರತಿಭೆ ಎಲ್ಲರಿಗೂ ತಿಳಿದಿದ್ದರೂ, ಫ್ರಾಂಚೈಸಿಗಳು ಹರಾಜಿನಲ್ಲಿ ಅವರನ್ನು ಬಿಡ್ ಮಾಡದಿರಲು ನಿರ್ಧರಿಸಿದವು.

ಆದಾಗ್ಯೂ, ಟೆಸ್ಟ್​ನಲ್ಲಿ ಟೀಮ್ ಇಂಡಿಯಾಕ್ಕಾಗಿ ಪಾದಾರ್ಪಣೆ ಮಾಡಿದ ನಂತರ ಮುಂಬೈ ಆಟಗಾರನ ಬಗ್ಗೆ ಆಸಕ್ತಿ ಮೂಡಿ ಬಂದಿದೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ರಾಜ್​ಕೋಟ್​ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ಅರ್ಧಶತಕಗಳನ್ನು ಗಳಿಸುವ ಮೂಲಕ ಸರ್ಫರಾಜ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೈದಾನಕ್ಕೆ ಕಾಲಿಟ್ಟರು. ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 66 ಎಸೆತಗಳಲ್ಲಿ 62 ರನ್ ಗಳಿಸಿದ್ದ ಅವರು, ಎರಡನೇ ಇನ್ನಿಂಗ್ಸ್​ನಲ್ಲಿ 72 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿದ್ದರು.

ಕೆಕೆಆರ್ ಗುರಿ ಸರ್ಫರಾಜ್ ಖಾನ್


ಎರಡು ಬಾರಿಯ ಐಪಿಎಲ್ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡ 2024ರ ಐಪಿಎಲ್ ಟೂರ್ನಿಗೆ ಸರ್ಫರಾಜ್ ಖಾನ್ ಅವರ ಸೇವೆ ಪಡೆಯಲು ಆಸಕ್ತಿ ತೋರಿದೆ. ಬಂಗಾಳಿ ದಿನಪತ್ರಿಕೆ ಆನಂದಬಜಾರ್ ಪತ್ರಿಕೆಯ ವರದಿಯ ಪ್ರಕಾರ, ಕೆಕೆಆರ್ ಮಾರ್ಗದರ್ಶಕ ಗೌತಮ್ ಗಂಭೀರ್ ಬ್ಯಾಟರ್​ ಬಳಿ ಸಹಿ ಹಾಕುವಂತೆ ಕೋರಿಕೊಂಡಿದ್ದಾರೆ . ಬ್ಯಾಟಿಂಗ್ ಕ್ರಮಾಂಕವನ್ನು ಬಲಪಡಿಸುವ ಸಲುವಾಗಿ ಬ್ಯಾಟರ್​​ಗೆ ಸಹಿ ಹಾಕುವಂತೆ ಕೆಕೆಆರ್ ಮಾಜಿ ನಾಯಕ ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸರ್ಫರಾಜ್ ಖಾನ್ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭರವಸೆಯ ಆರಂಭವನ್ನು ನೀಡಿದ್ದಾರೆ, ಆದರೆ ಅವರು ಐಪಿಎಲ್​​ನಲ್ಲಿ ನಿಜವಾಗಿಯೂ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಅವರು ಇಲ್ಲಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ ಮತ್ತು ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಐಪಿಎಲ್​​ನಲ್ಲಿ 50 ಪಂದ್ಯಗಳನ್ನಾಡಿರುವ ಅವರು ಕೇವಲ 585 ರನ್ ಗಳಿಸಿದ್ದಾರೆ.

ಕೆಕೆಆರ್ ಬಗ್ಗೆ ಮಾತನಾಡುವುದಾದರೆ ತಂಡವು 2018ರಿಂದ ಲೀಗ್ ಹಂತ ದಾಟಿಲ್ಲ. ಈ ಋತುವಿಗೆ ಮುಂಚಿತವಾಗಿ, ಅವರು ಗಂಭೀರ್ ಅವರನ್ನು ತಮ್ಮ ಮಾರ್ಗದರ್ಶಕರಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬೆನ್ನುನೋವಿನಿಂದಾಗಿ ಕಳೆದ ಋತುವಿನಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಮರಳುವುದರಿಂದ ಅವರು ಬಲಗೊಳ್ಳಲಿದ್ದಾರೆ.

Exit mobile version