Site icon Vistara News

Gun Fire : ಶಿಂಧೆ ಬಣದ ಶಿವಸೇನಾ ನಾಯಕನ ಮೇಲೆ ಗುಂಡು ಹಾರಿಸಿದ ಮಹಾರಾಷ್ಟ್ರ ಬಿಜೆಪಿ ಶಾಸಕ

Ganpat Gawikwad

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಬಣದ ಮುಖಂಡರೊಬ್ಬರ ಮೇಲೆ ಬಿಜೆಪಿ ಶಾಸಕರೊಬ್ಬರು ಫೆ 2ರಂದು ರಾತ್ರಿ ಮುಂಬೈ ಬಳಿ ಗುಂಡಿನ ದಾಳಿ ನಡೆಸಿದ್ದಾರೆ (Gun Fire). ಭೂ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಗಣಪತ್ ಗಾಯಕ್ವಾಡ್ ಮತ್ತು ಶಿವಸೇನೆ ನಾಯಕ ಮಹೇಶ್ ಗಾಯಕ್ವಾಡ್ ಜಗಳವಿತ್ತು. ವಿಷಯ ತಾರಕಕ್ಕೇರಿ ಬುವ ಶಿವಸೇನಾ ನಾಯಕನ ಮೇಲೆ ಶಾಸಕ ಗುಂಡು ಹಾರಿಸಿದ್ದಾರೆ. ತಕ್ಷಣ ಶಾಸಕನನ್ನು ಪೊಲೀಸರು ಬಂದಿಸಿದ್ದಾರೆ.

ಗಣಪತ್ ಗಾಯಕ್ವಾಡ್ ಅವರು ಮುಂಬೈನಿಂದ 40 ಕಿ.ಮೀ ದೂರದಲ್ಲಿರುವ ಕಲ್ಯಾಣ್ ನ ಕಲ್ಯಾಣ್ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಅವರ ಪಕ್ಷವು ಮಹಾರಾಷ್ಟ್ರ ಸರ್ಕಾರದಲ್ಲಿ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಗುಂಡಿನ ದಾಳಿಯಲ್ಲಿ ಒಟ್ಟು ಇಬ್ಬರು ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುಧಾಕರ್ ಪಠಾರೆ ತಿಳಿಸಿದ್ದಾರೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಉಲ್ಹಾಸ್ ನಗರದ ಹಿಲ್ ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ವಾಕ್ಸಮರ ನಡೆದಿದ್ದು ಈ ವೇಳೆ ಶಾಸಕರು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ಸೇನಾ ನಾಯಕ ಮತ್ತು ಇನ್ನೊಬ್ಬ ಬೆಂಬಲಿಗನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮಹೇಶ್​ ಗಾಯಕ್ವಾಡ್​ ದೇಹದಿಂದ ಐದು ಗುಂಡುಗಳನ್ನು ಹೊರತೆಗೆಯಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಮಗನಿಗೆ ಬೆದರಿಕೆ ಹಾಕಿದ ಕಾರಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೇನೆ ಎಂದು ಗಣಪತ್​ ಗಾಯಕ್ವಾಡ್ ಹೇಳಿದ್ದಾರೆ.

ಇದನ್ನೂ ಓದಿ : US Air Strikes: ಯೋಧರ ಹತ್ಯೆಗೆ ಅಮೆರಿಕ ಪ್ರತೀಕಾರ; ಸಿರಿಯಾ, ಇರಾಕ್‌ನಲ್ಲಿ 85ಕ್ಕೂ ಹೆಚ್ಚು ಕಡೆ ವಾಯುದಾಳಿ

ಮಹೇಶ್ ಗಾಯಕ್ವಾಡ್ ಮತ್ತು ಗಣಪತ್ ಗಾಯಕ್ವಾಡ್ ನಡುವೆ ಕೆಲವು ವಿವಾದಗಳಿದ್ದವು. ಅಂತೆಯೇ ಇಬ್ಬರೂ ಪರಸ್ಪರ ದೂರು ನೀಡಲು ಹಿಲ್ ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಗಣಪತ್ ಗಾಯಕ್ವಾಡ್ ಅವರು ಮಹೇಶ್ ಗಾಯಕ್ವಾಡ್ ಮತ್ತು ಅವರ ಸಹಚರರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ” ಎಂದು ಪಠಾರೆ ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ ಸರ್ಕಾರ ವಿಫಲವಾಗಿದೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬಿಜೆಪಿ ಶಾಸಕರೊಬ್ಬರು ಪೊಲೀಸ್ ಠಾಣೆಯೊಳಗೆ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಮುಖ್ಯಮಂತ್ರಿ ಮತ್ತು ಮಾಜಿ ಕಾರ್ಪೊರೇಟರ್​ಗೆ ಆತ್ಮೀಯ. ಅವರ ಎರಡೂ ಪಕ್ಷಗಳು ಜತೆಯಾಗಿ ಅಧಿಕಾರದಲ್ಲಿವೆ , ಆದ್ದರಿಂದ ಅವರಿಗೆ ಕಾನೂನಿನ ಭಯವಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದ ಎರಡೂ ಎಂಜಿನ್​ಗಳು ವಿಫಲವಾಗಿವೆ ಎಂದು ಉದ್ಧವ್ ಬಣದ ವಕ್ತಾರ ಆನಂದ್ ದುಬೆ ಆರೋಪಿಸಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ದಂಗೆ ಎದ್ದ ನಂತರ ಬಿಜೆಪಿಯ ಸಹಾಯದಿಂದ ಸರ್ಕಾರ ರಚಿಸಿಸಲಾಗಿದೆ. ಆ ಬಳಿಕ ಶಿವಸೇನೆ ವಿಭಜನೆಗೊಂಡಿದೆ. ಪಕ್ಷದ ಪರಂಪರೆಯ ಬಗ್ಗೆ ಚುನಾವಣಾ ಆಯೋಗವು ಕಳೆದ ವರ್ಷ ಶಿಂಧೆ ಅವರ ಪರವಾಗಿ ತೀರ್ಪು ನೀಡಿತ್ತು.

Exit mobile version