ಮುಂಬಯಿ: ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವದ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, (Sensex) ಸೋಮವಾರ ಬೆಳಗ್ಗೆ 600 ಅಂಕ ಜಿಗಿಯಿತು. 60,000 ಅಂಕಗಳ ಮೈಲುಗಲ್ಲನ್ನು ಮತ್ತೆ ಗಳಿಸಿತು. ನಿಫ್ಟಿ 18,000 ಅಂಕಗಳ ಮೈಲುಗಲ್ಲನ್ನು ಕ್ರಮಿಸಿತು. ಹೂಡಿಕೆದಾರರು 2 ಲಕ್ಷ ಕೋಟಿ ರೂ. ಲಾಭ ಗಳಿಸಿದರು. ಬಿಎಸ್‌ಇ ನೋಂದಾಯಿತ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯ 279 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು.
ಅಮೆರಿಕದಲ್ಲಿ ಸದ್ಯದ ಭವಿಷ್ಯದಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ ಕ್ಷೀಣಿಸಿರುವುದು ಜಾಗತಿಕ ಮಾರುಕಟ್ಟೆಯನ್ನು ಉಲ್ಲಸಿತಗೊಳಿಸಿತು. ಇದು ದೇಶಿ ಮಾರುಕಟ್ಟೆ ಮೇಲೆ ಕೂಡ ಪ್ರಭಾವ ಬೀರಿತು.
ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಹೂಡಿಕೆಯ ಹೊರ ಹರಿವಿನಲ್ಲಿ ಇಳಿಕೆಯಾಗಿದೆ. ಕಳೆದ ಎರಡು ದಿನಗಳಿಂದ ನಿವ್ವಳ ಖರೀದಿ ನಡೆದಿದೆ.