Site icon Vistara News

Sharad Pawar : ಶರದ್ ಪವಾರ್ ನೇತೃತ್ವದ ಎನ್​ಸಿಪಿಗೆ ಹೊಸ ಹೆಸರು ಕೊಟ್ಟ ಚುನಾವಣಾ ಆಯೋಗ

Sharad Pawar

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವನ್ನು ಚುನಾವಣಾ ಆಯೋಗ ನಿಜವಾದ ಎನ್​ಸಿಪಿ (Nationalist Congress Party) ಎಂದು ಗುರುತಿಸಿ, ಪಕ್ಷದ ಹೆಸರು ಮತ್ತು ‘ಗಡಿಯಾರ’ ಚಿಹ್ನೆಯ ಮೇಲೆ ನಿಯಂತ್ರಣವನ್ನು ನೀಡಿತ್ತು. ಅದಾಗಿ ಒಂದು ದಿನದ ನಂತರ ಶರದ್ ಪವಾರ್ (Sharad Pawar) ಬಣಕ್ಕೆ ‘ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ – ಶರದ್ ಚಂದ್ರ ಪವಾರ್’ ಎಂಬ ಹೆಸರನ್ನು ನೀಡಲಾಗಿದೆ.

ಮಹಾರಾಷ್ಟ್ರದಿಂದ ರಾಜ್ಯಸಭೆಯ ಆರು ಸ್ಥಾನಗಳಿಗೆ ನಡೆಯಲಿರುವ ಮುಂಬರುವ ಚುನಾವಣೆಯ ಉದ್ದೇಶಗಳಿಗಾಗಿ ನಿಮ್ಮ ಗುಂಪು/ ಬಣದ ಹೆಸರನ್ನು ಒಂದು ಬಾರಿಯ ಆಯ್ಕೆಯಾಗಿ ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಜುಲೈನಲ್ಲಿ ತಮ್ಮ ಚಿಕ್ಕಪ್ಪನ ಪಕ್ಷದಿಂದ ಬೇರ್ಪಟ್ಟ ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ಬಣವು ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಶಾಸಕರನ್ನು ಹೊಂದಿದೆ. ಹೀಗಾಗಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸಬಹುದು ಎಂದು ಚುನಾವಣಾ ಆಯೋಗ ಮಂಗಳವಾರ ಹೇಳಿದೆ. ಎನ್ಸಿಪಿ 53 ಶಾಸಕರನ್ನು ಹೊಂದಿದೆ. ಕೇವಲ 12 ಶಾಸಕರು ಮಾತ್ರ ಶರದ್ ಪವಾರ್ ಅವರ ಪರವಾಗಿ ನಿಂತಿದ್ದಾರೆ. ಹೊಸ ಹೆಸರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಶರದ್ ಪವಾರ್ ಅವರಿಗೆ ಬುಧವಾರ ಸಂಜೆ 4 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

84 ವರ್ಷದ ಶರದ್ ಪವಾರ್ ಅವರು ವಕೀಲರು ಮತ್ತು ಪಕ್ಷದ ಮುಖಂಡರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮತ್ತು ರಾಜ್ಯ ಚುನಾವಣೆಗಳಲ್ಲಿ ಸಂಭಾವ್ಯ ಮತಗಳು ಒಡೆಯುವುದನ್ನು ತಪ್ಪಿಸಲು ಪಕ್ಷವು ‘ರಾಷ್ಟ್ರೀಯವಾದಿ’ ಅಥವಾ ಪವಾರ್ ಅವರ ಹೆಸರನ್ನು ಮುಂಚೂಣಿಗೆ ತರುವ ಸಾಧ್ಯತೆಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗಡಿಯಾರದ ಚಿತ್ರವನ್ನು ಶರದ್ ಪವಾರ್ ಅವರೊಂದಿಗೆ ಗುರುತಿಸುವುದರಿಂದ ಹೊಸ ಹೆಸರಿನ ಬಗ್ಗೆ ಜಾಗೃತಿ ಮೂಡಿಸುವುದು ಒಂದು ಸವಾಲಾಗಿದೆ ಎಂದು ಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ.

ಇನ್ನೆರಡು ಆಯ್ಕೆಗಳ ಹೆಸರು

ಶರದ್ ಪವಾರ್ ಕಾಂಗ್ರೆಸ್ ಮತ್ತು ಶರದ್ ಪವಾರ್ ಸ್ವಾಭಿಮಾನಿ ಪಕ್ಷ ಎಂದು ಪರಿಗಣಿಸಲಾದ ಇತರ ಹೆಸರುಗಳು. ಎನ್​ಸಿಪಿಯನ್ನು ಯಾರು ಸ್ಥಾಪಿಸಿದರು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಅದರ ಹೊರತಾಗಿಯೂ ಚುನಾವಣಾ ಆಯೋಗವು ಮಾಡಿದ್ದು ಚುನಾವಣಾ ಆಯೋಗದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

Exit mobile version