ನವ ದೆಹಲಿ: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಜಮ್ಮು ರ‍್ಯಾಲಿಯ ವೇಳೆ ಉಗ್ರರ ಆತ್ಮಾಹುತಿ ದಾಳಿಯನ್ನು ತಪ್ಪಿಸಿದ್ದ, ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಫೋರ್ಸ್‌ನ ಕ್ಯಾಪ್ಟನ್ ರಾಕೇಶ್ ಟಿಆರ್ ಅವರಿಗೆ ಈ ಸಲ ಗಣರಾಜ್ಯೋತ್ಸವದ (Republic day 2023) ದಿನ ಶೌರ್ಯಚಕ್ರ ಪ್ರಶಸ್ತಿ (Shaurya chakra) ನೀಡಿ ಗೌರವಿಸಲಾಗುತ್ತಿದೆ. 2022ರ ಏಪ್ರಿಲ್ 24ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮುವಿಗೆ ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ವೇಳೆ ಅವರನ್ನು ಗುರಿಯಾಗಿಟ್ಟುಕೊಂಡು ಉಗ್ರರ ಆತ್ಮಾಹುತಿ ದಾಳಿ ನಡೆಯುವ ಬಗ್ಗೆ ಸುಳಿವು ಲಭಿಸಿತ್ತು. ಆಗ ಪ್ರಾಣದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ್ದ ಕ್ಯಾಪ್ಟನ್ ರಾಕೇಶ್ ಟಿಆರ್ ಅವರು ಇಬ್ಬರು ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಇದರಿಂದ ಸಂಭವನೀಯ ಭಾರಿ ಅನಾಹುತವನ್ನು ತಪ್ಪಿಸಿದ್ದರು.
ತುಮಕೂರು ಮೂಲದ ಕ್ಯಾಪ್ಟನ್ ರಾಕೇಶ್ ಟಿಆರ್:
ಕ್ಯಾಪ್ಟನ್ ರಾಕೇಶ್ ಟಿಆರ್ ಅವರು ಜಮ್ಮು ವಲಯದಲ್ಲಿ ಯಾವುದೇ ಭಯೋತ್ಪಾದನೆ ದಾಳಿಯನ್ನು ನಿಗ್ರಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಮೂಲತಃ ತುಮಕೂರಿನವರು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದರು.
ಪ್ರಧಾನಿಯವರ ಜಮ್ಮು ರ‍್ಯಾಲಿಯ ವೇಳೆ ಉಗ್ರರ ದಾಳಿಯನ್ನು ತಪ್ಪಿಸಲು ಕ್ಯಾಪ್ಟನ್ ರಾಕೇಶ್ ಅವರು ತಮ್ಮ ಪ್ರಾಣದ ಹಂಗು ತೊರೆದು ದಟ್ಟಾರಣ್ಯದಲ್ಲಿ ಉಗ್ರರನ್ನು ಸುತ್ತುವರೆದಿದ್ದರು. ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು. ಅವರ ಅಪ್ರತಿಮ ಶೌರ್ಯ, ಸಾಹಸದ ಕಾರ್ಯಾಚರಣೆಯನ್ನು ಗೌರವಿಸಿ ಶೌರ್ಯಚಕ್ರ ಪ್ರದಾನ ಮಾಡಲಾಗುತ್ತಿದೆ.