Site icon Vistara News

ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳಿಗೆ ಬೀಗ, ಲೈಸೆನ್ಸ್‌ ಅಮಾನತು: ಬಿಬಿಎಂಪಿ ಆದೇಶದಲ್ಲಿ ಏನೇನಿದೆ?

BBMP Order

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಮಫಲಕಗಳಲ್ಲಿ (Kannada Name Board) ಶೇ. 60 ಕನ್ನಡ ಅಳವಡಿಸದ ವಾಣಿಜ್ಯ ಉದ್ದಿಮೆ, ಮಳಿಗೆಗಳಿಗೆ ಬೀಗ ಮುದ್ರೆ ಹಾಕುವ ಜತೆಗೆ ಪರವಾನಗಿ ಅಮಾನತು ಮಾಡಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಕನ್ನಡ ನಾಮಫಲಕ ಅಳವಡಿಕೆಗೆ ನೀಡಿದ ಗಡುವು ಬುಧವಾರಕ್ಕೆ ಮುಗಿದಿರುವುದರಿಂದ, ಫೆ.29ರಿಂದ ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರ ನಿರ್ದೇಶನದಂತೆ ವಿಶೇಷ ಆಯುಕ್ತರು (ಆರೋಗ್ಯ) ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ ಮುಂತಾದವುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | Kannada signboard rules: ಕನ್ನಡ ಬೋರ್ಡ್‌ ಕಡ್ಡಾಯ; ಡೆಡ್‌ಲೈನ್‌ ಮುಗೀತು, ಅಂಗಡಿ ಬಂದ್‌ ಮಾಡ್ತೇವೆ ಎಂದ ಬಿಬಿಎಂಪಿ!

ಮುಖ್ಯ ಆಯುಕ್ತರವರ ಅಧ್ಯಕ್ಷತೆಯಲ್ಲಿ ಫೆ.2 ಮತ್ತು 12ರಂದು ನಡೆದ ಸಭೆಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಉದ್ದಿಮೆಗಳ ಮೇಲೆ ಫೆ.28 ರೊಳಗೆ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವಂತೆ ಎಲ್ಲಾ ವಾಣಿಜ್ಯದಾರರಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.29 ರಿಂದ ಅನ್ವಯವಾಗುವಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದೇ ಇರುವ ವಾಣಿಜ್ಯ ಉದ್ದಿಮೆಗಳಿಗೆ ಇಲಾಖಾ ವತಿಯಿಂದ ನೀಡಿರುವ ಉದ್ದಿಮೆ ಪರವಾನಗಿಯನ್ನು ಅಮಾನತು ಮಾಡಲು ಹಾಗೂ ಅಂತಹ ವಾಣಿಜ್ಯ ಉದ್ದಿಮೆಗಳಿಗೆ ಬೀಗಮುದ್ರೆ (Sealdown) ಮಾಡಲು ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಕನ್ನಡ ನಾಮಫಲಕ ಅಳವಡಿಸದಿದ್ದರೆ ಮಾ.5ಕ್ಕೆ ಮತ್ತೆ ಪ್ರತಿಭಟನೆ: ನಾರಾಯಣಗೌಡ ಎಚ್ಚರಿಕೆ

TA Narayana Gowda warns of protests on March 5 if Kannada signboards are not installed

ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60ರಷ್ಟು ಕನ್ನಡ ಅಳವಡಿಕೆಗೆ ಬಿಬಿಎಂಪಿ ಗಡುವು ನೀಡಿತ್ತು. ಆದರೆ, ಇನ್ನೂ ಹಲವು ಕಡೆ ಕನ್ನಡ ನಾಮಫಲಕ ಅಳವಡಿಕೆ (Kannada Name Board) ಮಾಡದಿರುವುದು ಕಂಡುಬಂದಿದೆ. ಹೀಗಾಗಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಮಾ.5ರಂದು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿರುವ ಅವರು, ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಲೇಬೇಕು. ಬೆಂಗಳೂರು ಮಾತ್ರವಲ್ಲ, ರಾಜ್ಯದ 31 ಜಿಲ್ಲೆಗಳಲ್ಲೂ ಈ ಕಾನೂನು ಜಾರಿಗೆ ಬರಬೇಕು. ಬಿಬಿಎಂಪಿ ನೀಡಿದ ಗಡುವು ಬುಧವಾರಕ್ಕೆ ಮುಗಿದಿದೆ. ಮಾರ್ಚ್ 1ರವರೆಗೆ ನಾವು ಕಾದು ನೋಡುತ್ತೇವೆ. ಮಾರ್ಚ್ 5ರಂದು ಮತ್ತೆ ಬೀದಿಗಿಳಿದು, ಬಿಬಿಎಂಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ಕನ್ನಡದಲ್ಲಿ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಹೋರಾಟ ನಡೆದಿತ್ತು. ಅಂದು ಆಂಗ್ಲ ಭಾಷೆಯಲ್ಲಿದ್ದ ನಾಮಫಲಕಗಳನ್ನ ಕಿತ್ತು ಹಾಕಿದ್ದೆವು. ಆಗ ನಾನು 14 ದಿನ ಜೈಲುವಾಸ ಮಾಡಿದ್ದೆ. ರಾಜ್ಯ ಸರ್ಕಾರ ಕನ್ನಡ ನಾಮಫಲಕ ಅನುಷ್ಠಾನಕ್ಕೆ ಸುಗ್ರಿವಾಜ್ಞೆ ತರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿತ್ತು. ನಂತರ ಬಿಬಿಎಂಪಿ ಒಂದು ಗಡುವು ಕೇಳಿತ್ತು. ಇಂದಿಗೆ ಗಡುವು ಮುಗಿದಿದೆ. ಎಷ್ಟರ ಮಟ್ಟಿಗೆ ಕನ್ನಡ ನಾಮಫಲಕ ಅಳವಡಿಕೆಯಾಗಿದೆ ಎಂದು ಬಿಬಿಎಂಪಿ ಕಮಿಷನರ್ ಜೊತೆ ಚರ್ಚೆ ಮಾಡಿದ್ದೇವೆ ಎಂದರು.

46,600 ಉದ್ದಿಮೆದಾರರು ಕನ್ನಡ ನಾಮಫಲಕ ಅಳವಡಿಕೆ ಮಾಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ 3,616 ಉದ್ದಿಮೆದಾರರು ಅಳವಡಿಕೆ ಮಾಡಬೇಕು, ಅದನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದಾರೆ. ಆದರೆ ಇದು ಕೇವಲ ಬೆಂಗಳೂರಿನಗೆ ಅಷ್ಟೇ ಅಲ್ಲ, ರಾಜ್ಯದ 31 ಜಿಲ್ಲೆಗಳಿಗೂ ಅನ್ವಯ ಆಗಬೇಕು. ಮಾರ್ಚ್ 1ರವರೆಗೆ ಕಾದುನೋಡುತ್ತೇವೆ, ಮಾರ್ಚ್ 5ರಂದು ಮತ್ತೆ ಬೀದಿಗೆ ಇಳಿದು ಬಿಬಿಎಂಪಿ ವಿರುದ್ಧ ಹೋರಾಟ ಮಾಡುತ್ತೇವೆ. ಈ ಬಗ್ಗೆ ಇಂದು ಸಂಜೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮತ್ತೊಂದು ದಿನ ಗಡುವು ವಿಸ್ತರಣೆ

ಕನ್ನಡ ನಾಮಫಲಕ ಅಳವಡಿಕೆಗೆ ಮತ್ತೊಂದು ದಿನ ಬಿಬಿಎಂಪಿ ಅವಕಾಶ ನೀಡಿದೆ.. ಫೆ.29 ಸಂಜೆಯೊಳಗೆ ನಿಯಮ ಪಾಲಿಸದಿದ್ದರೆ ಅಂಗಡಿಗಳನ್ನು ಬಂದ್‌ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಈಗಾಗಲೇ ಶೇ. 90 ರಷ್ಟು ನಾಮಫಲಕ ಬದಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ. ಅವರು ಗುರುವಾರ ಸಂಜೆಯೊಳಗೆ ಬದಲಾಯಿಸಬೇಕು. ಇಲ್ಲದಿದ್ದರೆ ಅಂಗಡಿ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ಒಳಗಿನ ಖಾಸಗಿ ಲ್ಯಾಬ್‌ ಬಂದ್‌; ಸರ್ಕಾರದ ಖಡಕ್‌ ಆದೇಶ!

ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ನೀಡುವಂತೆ ಕೆಲವು ಅಂತಾರಾಷ್ಟ್ರೀಯ ಕಂಪನಿಗಳು, ಎಸ್‌ಬಿಐ, ಕೆನರಾ ಬ್ಯಾಂಕ್ ಮನವಿ ಮಾಡಿವೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version