ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಲ್ಲಿ ಶುಬ್ಮನ್ ಗಿಲ್ (Shubman Gill) ತಮ್ಮ ನಾಯಕತ್ವದ ಅಭಿಯಾನವನ್ನು ಸ್ಮರಣೀಯವಾಗಿಸುತ್ತಿದ್ದಾರೆ. ಐಪಿಎಲ್ 2024 ರ ಐದನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ರೋಚಕ ಗೆಲುವು ಸಾಧಿಸಿದ ಖುಷಿಯಲ್ಲಿದ್ದಾರೆ. ಆದರೆ, ಎರಡನೇ ಪಂದ್ಯದಲ್ಲಿ ಅವರು ರೋಹಿತ್ ಶರ್ಮಾ ಅವರಂತೆಯೇ ಮರೆಗುಳಿ ಸ್ವಭಾವ ಪ್ರದರ್ಶಿಸುವ ಮೂಲಕ ಸುದ್ದಿಯಾಗಿದ್ದಾರೆ.
A fun moment at the Chepauk.
— Mufaddal Vohra (@mufaddal_vohra) March 26, 2024
Shubman Gill won the toss, but got confused and said we're batting first and later said 'sorry, bowl, bowl first'. 😄 pic.twitter.com/KsSNF66UKx
ಐಪಿಎಲ್ ಐದು ಬಾರಿಯ ಚಾಂಪಿಯನ್ ಮುಂಬಯಿ ವಿರುದ್ಧ ಕಠಿಣ ಹೋರಾಟದ ಆರು ರನ್ಗಳ ಗೆಲುವಿನ ಬಳಿಕ ಗಿಲ್ ವಿಶ್ವಾಸ ಹೆಚ್ಚಾಗಿದೆ. 169 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಆದಾಗ್ಯೂ, ಶುಬ್ಮನ್ ಗಿಲ್ ನೇತೃತ್ವದ ಟೈಟಾನ್ಸ್ ಡೆತ್ ಓವರ್ಗಳ ಅದ್ಭುತ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ಅನ್ನು 9 ವಿಕೆಟ್ಗೆ 162 ರನ್ಗಳಿಗೆ ನಿಯಂತ್ರಿಸಿತು.
ನಿರ್ಧಾರ ಬದಲಿಸಿದ ಗಿಲ್
ಟಾಸ್ ಗೆದ್ದ ನಂತರ, ಶುಬ್ಮನ್ ಗಿಲ್ ತಮ್ಮ ನಿರ್ಧಾರ ಬದಲಾಯಿಸಿದರು. ಟಾಸ್ ಗೆದ್ದ ತಕ್ಷಣ ತಮ್ಮ ತಂಡವು ಮೊದಲು ಬ್ಯಾಟ್ ಮಾಡುತ್ತದೆ ಎಂದು ಹೇಳಿದರು. ಬಳಿಕ “ಕ್ಷಮಿಸಿ, ಬೌಲಿಂಗ್ ಮಾಡುತ್ತೇವೆ, ಮೊದಲು ಬೌಲಿಂಗ್” ಎಂದು ಹೇಳಿದರು. ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಕೂಡ ತಮ್ಮ ಭಾರತ ತಂಡದ ಸಹ ಆಟಗಾರನ ತಪ್ಪನ್ನು ನೋಡಿ ನಗಾಡಿದರು.
ವಿಶೇಷವೆಂದರೆ, ಶುಬ್ಮನ್ ಗಿಲ್ ಅವರ ಏಕದಿನ ತಂಡದ ಆರಂಭಿಕ ಪಾಲುದಾದ ರೋಹಿತ್ ಶರ್ಮಾ ಕೂಡ ಟಾಸ್ ವೇಳೆ ಮರೆಗುಳಿತನ ಪ್ರದರ್ಶನ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಸಮಯದಲ್ಲಿ ಅವರು ಇದೇ ರೀತಿ ಮಾಡಿದ್ದರು. ಅಲ್ಲಿ ಅವರು ತಮ್ಮ ತಂಡದ ನಿರ್ಧಾರವನ್ನು ಮರೆತು ನೆನಪಿಸಿಕೊಳ್ಳುವ 10 ಸೆಕೆಂಡುಗಳ ಸಮಯ ತೆಗೆದುಕೊಂಡಿದ್ದರು.
ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟೈಟಾನ್ಸ್ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾವುದೇ ಬದಲಾವಣೆಗ ಮಾಡಿಲ್ಲ. ಆದರೆ ಸಿಎಸ್ಕೆ ಒಂದು ಬದಲಾವಣೆ ಮಾಡಿದೆ – ಮಹೇಶ್ ತೀಕ್ಷಣಾ ಬದಲಿಗೆ ಮಥೀಶಾ ಪತಿರಾನಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ.
“ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಎಂಐ ವಿರುದ್ಧದ ಪಂದ್ಯದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದೆವು. ಎಲ್ಲರೂ ಚೆನ್ನಾಗಿ ವಿಶ್ರಾಂತಿ ಪಡೆದಿದ್ದಾರೆ. ಪಂದ್ಯಗಳ ನಡುವೆ ನಮಗೆ ಸಾಕಷ್ಟು ವಿಶ್ರಾಂತಿ ಸಮಯ ಸಿಗುತ್ತದೆ , “ಎಂದು ಗಿಲ್ ಟಾಸ್ ಬಳಿಕ ಹೇಳಿದ್ದಾರೆ.