Site icon Vistara News

T20 World Cup 2024 : ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ರನ್ ಜಯ

T20 World Cup 2024

ಸೇಂಟ್​ ಲೂಸಿಯಾ: ಟಿ20 ವಿಶ್ವ ಕಪ್​ನ 2024ನೇ (T20 World Cup 2024) ಅವೃತ್ತಿಯ ಸೂಪರ್​ 8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ 7 ವಿಕೆಟ್​ ವಿಜಯ ದಾಖಲಿಸಿದೆ. ಇದು ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಹಂತದಲ್ಲಿ ಲಭಿಸಿರುವ ಎರಡನೇ ಗೆಲುವಾಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ (Point Table) ಅಗ್ರ ಸ್ಥಾನ ಪಡೆದುಕೊಂಡಿದ್ದು ಸೆಮಿಫೈನಲ್ ಹಂತಕ್ಕೇರುವುದು ಬಹುತೇಕ ನಿಶ್ಚಿತವಾಗಿದೆ. ಅತ್ತ ಇಂಗ್ಲೆಂಡ್​ ತಂಡ ಒಂದು ಗೆಲುವಿನೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಮುಂದಿನ ಪಂದ್ಯಗಳ ಫಲಿತಾಂಶಗಳ ಬಳಿಕ ಸೆಮಿಫೈನಲ್​ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

ಸೇಂಟ್​ಲೂಸಿಯಾದ ಡ್ಯಾರೆನ್​ ಸಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಶುಕ್ರವಾರ (ಜೂನ್​ 22ರಂದು) ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 163 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ನಷ್ಟಕ್ಕೆ 156 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಬ್ರೂಕ್ ಹೋರಾಟ ವಿಫಲ

ವೆಸ್ಟ್​ ಇಂಡೀಸ್​ನ ಪಿಚ್​ನಲ್ಲಿ ಚೇಸ್​ ಮಾಡಲು ಕಷ್ಟಕರವಾಗಿರುವ ಸ್ಕೋರ್​ ಬೆನ್ನಟ್ಟಲು ಹೊರಟ ಇಂಗ್ಲೆಂಡ್ ತಂಡ ಆರಂಭದಲ್ಲಿಯೇ ವಿಕೆಟ್​ಗಳನ್ನು ಕಳೆದಕೊಂಡಿತು. ಆರಂಭಿಕರಾದ ಫಿಲ್​ ಸಾಲ್ಟ್​ (11 ರನ್​), ಜೋಸ್​ ಬಟ್ಲರ್​ (17 ರನ್​) ಬೇಗನೆ ವಿಕೆಟ್​ ಒಪ್ಪಿಸಿದರು. ಜಾನಿ ಬೈರ್​ಸ್ಟೋವ್​ 16 ರನ್​ಗೆ ಔಟಾದರೆ ಮೊಯೀನ್ ಅಲಿ 9 ರನ್ ಬಾರಿಸಿ ನಿರ್ಗಮಿಸಿದರು. 10.2 ಓವರ್​ಗಳಲ್ಲಿ 61 ರನ್​ಗೆ 4 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಬಿತ್ತು. ಈ ವೇಳೆ ಬ್ಯಾಟ್ ಮಾಡಿದ ಹ್ಯಾರಿ ಬ್ರೂಕ್​ 37 ಎಸೆತಕ್ಕೆ 53 ರನ್ ಬಾರಿಸಿದರೆ ಲಿಯಾಮ್ ಲಿವಿಂಗ್​ಸ್ಟನ್​ 17 ಎಸೆತಕ್ಕೆ 33 ರನ್ ಬಾರಿಸಿದರು. ಈ ಜೋಡಿ ಐದನೇ ವಿಕೆಟ್​ಗೆ 78 ರನ್ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ಕೊನೇ ಹಂತದಲ್ಲಿ ಬೌಲಿಂಗ್ ಬಿಗುಗೊಳಿಸಿದ ದಕ್ಷಿಣ ಆಫ್ರಿಕಾ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: Suryakumar Yadav : ವಿಶ್ವದ ಬೆಸ್ಟ್​ ಟಿ20 ಆಟಗಾರ ಸೂರ್ಯಕುಮಾರ್​ ಯಾದವ್​ ಎಂದ ಅಂಬಾಟಿ ರಾಯುಡು

ಕ್ವಿಂಟನ್​ ಅಬ್ಬರದ ಆಟ

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 38 ಎಸೆತಕ್ಕೆ 65 ರನ್ ಬಾರಿಸಿ ಅದ್ಭುತ ಆರಂಭಕೊಟ್ಟರು. ರೀಜಾ ಹೆಂಡ್ರಿಕ್ಸ್​ 19 ರನ್ ಬಾರಿಸಿದರು. ಅವರಿಬ್ಬರು ಮೊದಲ ವಿಕೆಟ್​ಗೆ 86 ರನ್ ಬಾರಿಸಿದಾಗ ದೊಡ್ಡ ಮೊತ್ತ ಪೇರಿಸುವ ಸೂಚನೆ ಸಿಕ್ಕಿತು. ಆದರೆ ಹೆನ್ರಿಚ್ ಕ್ಲಾಸೆನ್​ (8 ರನ್​) ಅದ್ಭುತ ರನ್​ಔಟ್​ಗೆ ಬಲಿಯಾದರು. ಆದರೆ, ಡೇವಿಡ್​ ಮಿಲ್ಲರ್​ 43 ರನ್ ಬಾರಿಸಿ ಮತ್ತೆ ಚೈತನ್ಯ ತಂದರು. ಕೊನೆ ಹಂತದಲ್ಲಿ ದಕ್ಷಿಣ ಆಫ್ರಿಕಾ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಮಾರ್ಕ್ರಮ್​ 1 ರನ್ ಬಾರಿಸಿದರೆ ಟ್ರಿಸ್ಟಾನ್​ ಸ್ಟಬ್ಸ್​ 12 ರನ್​ಗೆ ಸೀಮಿತಗೊಂಡರು.

Exit mobile version