ಮುಂಬಯಿ: ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಜುಲೈ ೨ ಮತ್ತು ೩ ರಂದು ನಡೆಯಲಿದೆ. ಈ ಕುರಿತು ಗುರುವಾರ ರಾತ್ರಿ ನಡೆದ ನೂತನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಚಿವ ಸಂಪುಟದ ಮೊದಲ ಸಭೆ ನಡೆಸಿದರು. ಇವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ದೇವೇಂದ್ರ ಫಡ್ನವಿಸ್ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಭೆಯಲ್ಲಿ ವಿಶೇಷ ಆಧಿವೇಶನ ನಡೆಸುವ ಕುರಿತು ತೀರ್ಮಾನಿಸಲಾಗಿದೆ. ಅಧಿವೇಶನದ ಮೊದಲ ದಿನ ಅಂದರೆ ಜುಲೈ ೨ರಂದು ಸ್ಪೀಕರ್ ಆಯ್ಕೆ ನಡೆಯಲಿದೆ. ಮೊದಲ ದಿನವೇ ಮುಖ್ಯಮಂತ್ರಿ ಏಕನಾಥ ಶಿಂಧೆ ವಿಶ್ವಾಸಮತ ಯಾಚಿಸುವ ಸಾಧ್ಯತೆಗಳೂ ಇವೆ.
ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಬೇಕು. ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿ ನೂತನ ಮುಖ್ಯಮಂತ್ರಿ ಸೂಚಿಸಿದರೆಂದು ಸಂಪುಟ ಸಭೆಯ ಕುರಿತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಹಿಂದೆ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿದ್ದ, ನೀರು ಸಂರಕ್ಷಿಸುವ ಯೋಜನೆ ಜಲ್‌ಯುಕ್ತ ಶಿವಾರ್ ಅನ್ನು ಪುನಃ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಯೋಜನೆಗೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ತಡೆ ನೀಡಿತ್ತು.
ಇದನ್ನೂ ಓದಿ| Monsoon Session | ಸಂಸತ್ತಿನ ಮುಂಗಾರು ಅಧಿವೇಶನ ಜು.18 ರಿಂದ ಆರಂಭ