ಹೈದರಾಬಾದ್: ಕೊನೇ ಓವರ್ನ ಕೊನೇ ಎಸೆತದ ತನಕವೂ ಕುತೂಹಲ ಮೂಡಿಸಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರೋಚಕ ಒಂದು ರನ್ ಗೆಲುವಿನ ಫಲಿತಾಂಶ ಮೂಡಿ ಬಂತು. ಇದರೊಂದಿಗೆ ಐಪಿಎಲ್ 17ನೇ ಆವೃತ್ತಿಯಲ್ಲಿ (IPL 2024) ಸತತ ಎರಡು ಸೋಲುಗಳ ಮೂಲಕ ನಿರಾಸೆ ಎದುರಿಸಿದ್ದ ಹೈದರಾಬಾದ್ ತಂಡ ಗೆಲುವಿನ ಹಾದಿಗೆ ಮರಳಿತು. ಅತ್ತ ರಾಜಸ್ಥಾನ್ ತಂಡ ಎರಡನೇ ಸೋಲಿಗೆ ಒಳಗಾಯಿತು. ಕೊನೇ ಎಸೆತದಲ್ಲಿ ರಾಯಲ್ಸ್ ತಂಡದ ಗೆಲುವಿಗೆ ಎರಡು ರನ್ ಬೇಕಾಗಿದ್ದವು. ಆದರೆ, ಭುವನೇಶ್ವರ್ ಕುಮಾರ್ ರಾಯಲ್ಸ್ ಬ್ಯಾಟರ್ ಪೊವೆಲ್ ರೊವ್ಮನ್ ಪೊವೆಲ್ ಅವರನ್ನು ಎಲ್ಬಿಡಬ್ಲ್ಯು ಮಾಡಿ ತವರು ತಂಡಕ್ಕೆ ಗೆಲುವು ತಂದುಕೊಟ್ಟರು.
Jumps of Joy in Hyderabad 🥳
— IndianPremierLeague (@IPL) May 2, 2024
Terrific turn of events from @SunRisers' bowlers as they pull off a nail-biting win 🧡
Scorecard ▶️ https://t.co/zRmPoMjvsd #TATAIPL | #SRHvRR pic.twitter.com/qMDgjkJ4tc
ಇಲ್ಲಿನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್ಆರ್ಎಚ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ಗೆ 200 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್ನಲ್ಲಿ ರಾಯಲ್ಸ್ ತಂಡಕ್ಕೆ 13 ರನ್ಗಳು ಬೇಕಾಗಿತ್ತು. ಪೊವೆಲ್ ನಿಖರವಾಗಿ ರನ್ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್ ಲೊ ಪುಲ್ಟಾಸ್ ಹಾಕುವ ಮೂಲಕ ಪೊವೆಲ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು.
ನಿತೀಶ್ ಅರ್ಧ ಶತಕ
ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಎಚ್ ತಂಡ ಅಭಿಶೇಕ್ ಶರ್ಮಾ ಅವರನ್ನು 12 ರನ್ಗೆ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 25 ಆಗಿತ್ತು. ನಂತರ ಬಂದ ಅನ್ಮೋಲ್ ಪ್ರೀತ್ ಸಿಂಗ್ 5 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಆ ಬಳಿಕ ಜತೆಯಾದ ನಿತೀಶ್ ಕುಮಾರ್ ರೆಡ್ಡಿ ಅರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಜತೆ ಉತ್ತಮವಾಗಿ ಬ್ಯಾಟ್ ಬೀಸಿದರು. ಅವರಿಬ್ಬರೂ ನಾಲ್ಕನೇ ವಿಕೆಟ್ಗೆ 96 ರನ್ ಜತೆಯಾಟ ನೀಡಿದರು. ಹೆಡ್ 58 ರನ್ ಬಾರಿಸಿದರೆ ನಿತೀಶ್ 76 ರನ್ ಬಾರಿಸಿ ಅಜೇಯವಾಗಿ ಉಳಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ 19 ಎಸೆತಕ್ಕೆ 42 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸಲು ನೆರವಾದರು.
ಇದನ್ನೂ ಓದಿ: M S Dhoni : ಧೋನಿಯನ್ನು ರನ್ಔಟ್ ಮಾಡಿದ ಜಿತೇಶ್ ಶರ್ಮಾ ನಿಂದಿಸಿದ ಅಭಿಮಾನಿಗಳು!
ದೊಡ್ಡ ಗುರಿ ಬೆನ್ನಟ್ಟಲು ಅರಂಭಿಸಿದ ಎಸ್ಆರ್ಎಚ್ 1 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಜೋಸ್ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟಾಗಿದ್ದರು. ಆದರೆ, ಆರಂಭಿಕ ಬ್ಯಾಟರ್ ಜೈಸ್ವಾಲ್ 67 ರನ್ ಬಾರಿಸಿ ವಿಕೆಟ್ ಬೀಳದಂತೆ ನೋಡಿಕೊಂಡರು. ರಿಯಾನ್ ಪರಾಗ್ 77 ರನ್ ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ, ಆ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರು.