Site icon Vistara News

Vistara News Launch | ಶ್ರೀನಿವಾಸ್‌ ಹೆಬ್ಬಾರ್‌ ಅವರ ಸಾಮಾಜಿಕ ಕಾರ್ಯ ಯುವ ಸಮುದಾಯಕ್ಕೆ ಮಾದರಿ

Vistara news Launch

ಶಿರಸಿ: ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಬೇರೆಯವರಿಗೆ ಗೊತ್ತಾಗದಂತೆ ಜನರಿಗಾಗಿ ಸದ್ವಿನಿಯೋಗ ಮಾಡುವಂತಹ ಜನರು ಇಂದಿನ ಸಮಾಜಕ್ಕೆ ಅಗತ್ಯ ಎಂದು ಕರ್ನಾಟಕ ಪಂಚಾಯತ್ ರಾಜ್ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.

ನಗರದ ತೋಟಗಾರ ಕಲ್ಯಾಣ‌ ಮಂಟಪದಲ್ಲಿ ಭಾನುವಾರ (ನವೆಂಬರ್‌ ೧೩) ನಡೆದ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಶ್ರೀನಿವಾಸ್‌ ಹೆಬ್ಬಾರ್‌ ಅವರು ಧಾರ್ಮಿಕ, ಶಿಕ್ಷಣ, ಮಾಧ್ಯಮ ಕ್ಷೇತ್ರದ ಮೂಲಕ‌ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡ‌ದು. ನೀರಿಲ್ಲದ ಹಲವು ಕೆರೆಗಳಲ್ಲಿ ಜೀವ ಜಲ ಉಕ್ಕುವಂತೆ ಮಾಡಿದ ಅವರು ಇಂದಿನ ಯುವ ಸಮುದಾಯಕ್ಕೆ ಮಾದರಿ,” ಎಂದರು.

ಟಿಎಸ್ಎಸ್ ಕಾರ್ಯಾಧ್ಯಕ್ಷ‌ ರಾಮಕೃಷ್ಣ ಹೆಗಡೆ‌ ಕಡವೆ‌ ಮಾತನಾಡಿ “ಏನೇ ಬರೆದರೂ ಸತ್ಯ ಬರೆಯಬೇಕು. ಸತ್ಯವನ್ನಾದರೂ ಸಮಾಜಕ್ಕೆ ಕೆಡುಕಾಗದಂತೆ ಬರೆಯಬೇಕು. ಮಾಧ್ಯಮ ಬಿತ್ತರಿಸುವ ವಿಷಯದ ಮೇಲೆ ಸಮಾಜ ನಿಂತಿರುತ್ತದೆ,” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಹಾಗೂ ಜೀವ ಜಲ‌ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ‌ ಹೆಬ್ಬಾರ್ ಅವರು ಮಾತನಾಡಿ “ನಿಖರ ಹಾಗೂ ಜನಪರದ‌ ಆಶಯದೊಂದಿಗೆ ವಿಸ್ತಾರ ನ್ಯೂಸ್ ಆರಂಭಿಸಲಾಗಿದೆ. ಜನರ ಹಿತವೇ ನಮ್ಮ‌ ಮೊದಲ ಕನಸು,”ಎಂದರು.

ನೆಮ್ಮದಿ ರುದ್ರ ಭೂಮಿಯ ಹರಿಕಾರರಾದ ವೈಶಾಲಿ ವಿ ಪಿ ಹೆಗಡೆ ಮಾತನಾಡಿ “ನಾವು ನೆಮ್ಮದಿ ರುದ್ರ ಭೂಮಿಯ ಅಭಿವೃದ್ಧಿಗಾಗಿ ವ್ಯಯ ಮಾಡಿದ ಸಮಯ ನಮಗೆ ಯಶಸ್ಸು ತಂದುಕೊಟ್ಟಿದೆ. ನಮ್ಮ ರುದ್ರಭೂಮಿ ರಾಜ್ಯದ ಪ್ರತಿಷ್ಠಿತ ರುದ್ರಭೂಮಿಯಲ್ಲೊಂದಾಗಿದೆ,” ಎಂದು ಹೇಳಿದರು.

“ಸಾಂಸ್ಕೃತಿಕ ನಗರಿ ಶಿರಸಿಯಲ್ಲಿ ರಂಗಮಂದಿರ ಇಲ್ಲದಿರುವುದು ಬೇಸರದ ಸಂಗತಿ. ರಂಗಮಂದಿರದ ನಿರ್ಮಾಣಕ್ಕಾಗಿ ಪ್ರಯತ್ನಗಳು ನಡೆಯುತ್ತಿದ್ದು ಸದ್ಯದಲ್ಲಿಯೇ ಕೈಗೂಡುವ ನಿರೀಕ್ಷೆಯಿದೆ,” ಎಂದರು.

ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ “ಮಾಧ್ಯಮ ಕ್ಷೇತ್ರದಲ್ಲಿ ಪ್ರಾಮಾಣಿಕರಾಗಿ, ನಿಖರವಾಗಿ ಬರೆದರೆ ಅಪಾಯವನ್ನೂ ಎದುರಿಸಬೇಕಾಗುತ್ತದೆ. ಸರಕಾರ ಬದಲಾದರೂ ಸಮಾಜ ಬದಲಾಗುವುದಿಲ್ಲ. ಹೀಗಾಗಿ ಮಾಧ್ಯಮಕ್ಕೆ ಜನರ ಹಿತವೇ ಮುಖ್ಯ,” ಎಂದರು.

ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಚೇರ್ಮೆನ್‌, ಎಂಡಿ ಎಚ್.ವಿ. ಧರ್ಮೇಶ್‌, ಉದ್ಯಮಿ ಭೀಮಣ್ಣ ಟಿ ನಾಯ್ಕ, ರಾಜಧಾನಿ ಸೌಹಾರ್ದದ ಕಿರಣ ಚಿತ್ರಕಾರ, ಜಿಲ್ಲಾ ಪತ್ರಿಕಾ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ‌ ಬಕ್ಕಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾಧಕರಾದ ಹಿರಿಯ‌ ಸಮಾಜ ಸೇವಕ ಕಾಶಿನಾಥ‌ ಮೂಡಿ, ರಾಘವೇಂದ್ರ ಮಠದ ಅಧ್ಯಕ್ಷ ಡಿ.ಡಿ. ಮಾಡಗೇರಿ, ರುದ್ರಭೂಮಿ‌ ಹರಿಕಾರರಾದ ವೈಶಾಲಿ ವಿ.ಪಿ. ಹೆಗಡೆ, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ನಗರಸಭೆ ಸದಸ್ಯ ಕಿರಣ್ ಶೆಟ್ಟರ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ವಿದ್ಯಾನಿಧಿ ಡಾ. ವಿದ್ಯಾಭೂಷಣ ಹಾಗೂ ಕು.ಮೇಧಾ ವಿದ್ಯಾಭೂಷಣ ಅವರಿಂದ ಗಾಯನ ಕಾಯಕ್ರಮ ನಡೆಯಿತು.

ಇದನ್ನೂ ಓದಿ | Vistara News Launch | ಸುದ್ದಿ ಮಾಧ್ಯಮಗಳು ಜನಪರವಾಗಿರಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಶಯ

Exit mobile version