ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ವಿಶ್ವಕಪ್ 2024 ರ ಫೈನಲ್ (T20 World Cup FInal) ಪಂದ್ಯಕ್ಕೂ ಮೊದಲು ಭಾರತದ ಮಾಜಿ ಆರಂಭಿಕ ಆಟಗಾರ ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿಗೆ (Virat kohli) ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದಾರೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕೊಹ್ಲಿ ಇಲ್ಲಿಯವರೆಗೆ ಬ್ಯಾಟರ್ ಆಗಿ ಪಂದ್ಯಾವಳಿಯಲ್ಲಿ ದುಸ್ವಪ್ನ ಕಂಡಿದ್ದಾರೆ. ಅವರು 7 ಇನ್ನಿಂಗ್ಸ್ಗಳಲ್ಲಿ 10.71 ಸರಾಸರಿಯಲ್ಲಿ ಕೇವಲ 75 ರನ್ ಗಳಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಸ್ವತಃ ಕೊಹ್ಲಿಯೇ ಅದರಿಂದ ಅಧಿರರಾಗಿದ್ದಾರೆ.
ಟೂರ್ನಿಯಲ್ಲಿ ಆರಂಭಿಕ ಬ್ಯಾಟಿಂಗ್ ಹೊಣೆಗಾರಿ ಪಡೆದಿರುವ ಕೊಹ್ಲಿ ಆಕ್ರಮಣಕಾರಿಯಾಗಲು ಪ್ರಯತ್ನಿಸುತ್ತಿದ್ದಾರೆ. ಮೊದಲ ಎಸೆತದಿಂದಲೇ ಎದುರಾಳಿ ಬೌಲಿಂಗ್ ದಾಳಿಯ ಮೇಲೆ ಹಿಡಿತ ಸಾಧಿಸಲು ನೋಡುತ್ತಿದ್ದಾರೆ. ಆದರೆ ಅವರ ನಿಸ್ವಾರ್ಥ ವಿಧಾನವು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿಲ್ಲ. ಮತ್ತೊಂದೆಡೆ, ಅವರ ಆರಂಭಿಕ ಪಾಲುದಾರ ರೋಹಿತ್ ಶರ್ಮಾ ಆರಂಭಿಕ ಬೌಲರ್ಗಳನ್ನು ಹಿಮ್ಮೆಟ್ಟಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಅನ್ರಿಚ್ ನೋರ್ಜೆ, ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಅವರನ್ನೊಳಗೊಂಡ ಉತ್ತಮ ಗುಣಮಟ್ಟದ ಬೌಲಿಂಗ್ ದಾಳಿಯ ವಿರುದ್ಧ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
ಸುನಿಲ್ ಗವಾಸ್ಕರ್ ನೀಡಿದ ಸಲಹೆ ಏನು?
ಫೈನಲ್ ಪಂದ್ಯಕ್ಕೂ ಮುನ್ನ ಸುನಿಲ್ ಗವಾಸ್ಕರ್ ಅವರು ಕೊಹ್ಲಿಗೆ ಚೆಂಡನ್ನು ಜೋರಾಗಿ ಹೊಡೆಯುವ ಬದಲು ದೇಹದ ಸಮತೋಲನದೊಂದಿಗೆ ಆಡುವಂತೆ ಸಲಹೆ ನೀಡಿದ್ದಾರೆ. “ಇದು ಫೈನಲ್ ಮತ್ತು ಇದನ್ನು ಉತ್ತಮ ಬ್ಯಾಟಿಂಗ್ ಪಿಚ್ನಲ್ಲಿ ಆಡಲಾಗುತ್ತದೆ. ಕೊಹ್ಲಿ ಮಾಡಬೇಕಾಗಿರುವುದು ಅವರು ಆಡುವ ಶಾಟ್ಗಳನ್ನು ಅದೇ ದೇಹದ ಸಮತೋಲನದೊಂದಿಗೆ ಆಡಬೇಕು. ಅವರು ಚೆಂಡನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿರುವಾಗ, ಅವರು ತಮ್ಮ ದೇಹದ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದಾರೆ “ಎಂದು ಗವಾಸ್ಕರ್ ಹೇಳಿದರು.
ಸೆಮಿ ಫೈನಲ್ನಲ್ಲಿ ಅವರು ( ಇಂಗ್ಲೆಂಡ್ ವೇಗದ ಬೌಲರ್ ರೀಸ್ ಟಾಪ್ಲೆ ಎಸೆತದಲ್ಲಿ) ಸಿಕ್ಸರ್ ಬಾರಿಸಿದರು. ಇದು ಅದ್ಭುತ ಸಮತೋಲನವಾಗಿತ್ತು. ಅವರು ಕೆಳಗಿನ ಕೈಯಿಂದ ಚೆಂಡನ್ನು ಹೊಡೆದರು. ಅವರು ಮಾಡಬೇಕಾಗಿರುವುದು ಇಷ್ಟೇ ಎಂದು ಗವಾಸ್ಕರ್ ಹೇಳಿದ್ದಾರೆ. .
ನಿಧಾನವಾಗಿ ಆಟವಾಡಿ
ಕೊಹ್ಲಿ ಬ್ಯಾಟಿಂಗ್ ಮಾಡುವಾಗ ನಿರಾಳವಾಗಿರಬೇಕು. ಕ್ರೀಸ್ನಲ್ಲಿ ಹೆಚ್ಚು ಚಲಿಸಬಾರದು ಎಂದು ಗವಾಸ್ಕರ್ ಸಲಹೆ ನೀಡಿದರು. ಹಿಂದಿನ ಪಂದ್ಯಗಳಲ್ಲಿ, ಕೊಹ್ಲಿ ಶಾಟ್ಗಳನ್ನು ಬಲವಂತವಾಗಿ ಆಡಲು ಪ್ರಯತ್ನಿಸಿದ್ದಾರೆ. ಇದು ಆಗಾಗ್ಗೆ ಅವರ ವಿಕೆಟ್ ಪತನಕ್ಕೆ ಕಾರಣವಾಗಿದೆ ಎಂದು ಹೇಳಿದರು.
“ಅವನು ಚಲಿಸಲು ಪ್ರಾರಂಭಿಸಿದಾಗ, ತಲೆಯೂ ನಡುಗುತ್ತದೆ. ಅದು ಕೊಹ್ಲಿಗೆ ಸಹಾಯ ಮಾಡುತ್ತಿಲ್ಲ. ಇದನ್ನು ನೀವು ನಿಧಾನಗತಿಯಲ್ಲಿಯೂ ನೋಡುತ್ತೀರಿ. ಅವರು ಮಾಡಬೇಕಾಗಿರುವುದು ಸ್ವಲ್ಪ ನಿಧಾನವಾಗುವುದು. ಅದು ಭಾರತಕ್ಕೆ ದೊಡ್ಡ ಸ್ಕೋರ್ ನೀಡುತ್ತದೆ”ಎಂದು ಗವಾಸ್ಕರ್ ಹೇಳಿದರು.
2024ರ ಟಿ20 ವಿಶ್ವಕಪ್ ಫೈನಲ್ನಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗಲಿದ್ದಾರೆ. ಅವರು ತೀವ್ರವಾಗಿ ಸ್ಕೋರ್ ಮಾಡಬೇಕೆಂದು ಬಯಸುವ ಫೈನಲ್ನಲ್ಲಿ ದೊಡ್ಡ ಸ್ಕೋರ್ ಮಾಡುವ ನಿರೀಕ್ಷೆಯಲ್ಲಿದೆ. ಕೊಹ್ಲಿ ಒತ್ತಡದಲ್ಲಿದ್ದಾಗ ಸ್ಕೋರ್ ಮಾಡಲು ಇಷ್ಟಪಡುವ ವ್ಯಕ್ತಿ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಅಜೇಯ ಎರಡು ತಂಡಗಳಾಗಿವೆ. ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಗುಂಪು ಹಂತ ಮತ್ತು ಸೂಪರ್ 8 ರಲ್ಲಿ ಆಯಾ ಗುಂಪುಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.