Site icon Vistara News

AAP Office: ಕೇಜ್ರಿವಾಲ್‌ಗೆ ಮತ್ತೊಂದು ಶಾಕ್;‌ ಆಪ್‌ ಕಚೇರಿ ತೆರವಿಗೆ ಸುಪ್ರೀಂ ಆದೇಶ

Supreme Court

Supreme Court asks AAP to vacate Delhi office by June 15

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇದುವರೆಗೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಎಂಟು ಬಾರಿ ಸಮನ್ಸ್‌ ನೀಡಿದ್ದಾರೆ. ಇದರ ಬೆನ್ನಲ್ಲೇ, ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿರುವ ಆಮ್‌ ಆದ್ಮಿ ಪಕ್ಷದ (Aam Admy Party) ಕಚೇರಿಯನ್ನು ಜೂನ್‌ 15ರೊಳಗೆ ಸ್ಥಳಾಂತರಿಸಬೇಕು ಎಂದು ಸುಪ್ರೀಂ ಕೋರ್ಟ್‌ (Supreme Court) ಗಡುವು ನೀಡಿದೆ.

“ದೆಹಲಿಯ ರೋಸ್‌ ಅವೆನ್ಯೂ ಪ್ರದೇಶದಲ್ಲಿರುವ ಆಮ್‌ ಆದ್ಮಿ ಪಕ್ಷದ ಕಚೇರಿಯನ್ನು 2024ರ ಜೂನ್‌ 15ರೊಳಗೆ ಸ್ಥಳಾಂತರ ಮಾಡಬೇಕು. ಆಮ್‌ ಆದ್ಮಿ ಪಕ್ಷದ ಕಚೇರಿ ಇರುವ ಜಾಗವನ್ನು ದೆಹಲಿ ಹೈಕೋರ್ಟ್‌ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಿಸ್ತರಣೆಗಾಗಿ ನೀಡಿದೆ. ಹಾಗಾಗಿ, ಆಮ್‌ ಆದ್ಮಿ ಪಕ್ಷವು ಕಚೇರಿಯನ್ನು ಸ್ಥಳಾಂತರಿಸಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಆದೇಶ ಹೊರಡಿಸಿತು. ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಆಪ್‌ಗೆ ಕೋರ್ಟ್‌ ಸೂಚನೆಯಿಂದ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತಿದೆ.

ಆಮ್‌ ಆದ್ಮಿ ಪಕ್ಷದ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, “ಚುನಾವಣೆ ಸಂದರ್ಭದಲ್ಲಿ ಪಕ್ಷದ ಕಚೇರಿ ಸ್ಥಳಾಂತರಗೊಳಿಸಿ ಎಂದರೆ ಕಷ್ಟವಾಗುತ್ತದೆ. ಇದಕ್ಕೆ 2-3 ತಿಂಗಳಾದರೂ ಬೇಕಾಗುತ್ತದೆ. ದೇಶದ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಆಮ್‌ ಆದ್ಮಿ ಪಾರ್ಟಿಯೂ ಒಂದಾಗಿದೆ. ನಮ್ಮದು ರಾಷ್ಟ್ರೀಯ ಪಕ್ಷ ಎಂಬುದಾಗಿ ಘೋಷಿಸಲಾಗಿದೆ. ಆದರೆ, ನಮಗೆ ಏನೂ ಸಿಕ್ಕಿಲ್ಲ.‌ ಎಲ್ಲ ಪಕ್ಷಗಳ ಕಚೇರಿಗಳು ಉತ್ತಮ ಸ್ಥಳಗಳಲ್ಲಿ ಇವೆ. ನಮಗೆ ಮಾತ್ರ ಬದರ್‌ಪುರದಲ್ಲಿ ಪಕ್ಷದ ಕಚೇರಿಗಾಗಿ ಜಾಗ ನೀಡಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Arvind Kejriwal: ಅರವಿಂದ್‌ ಕೇಜ್ರಿವಾಲ್‌ ಉದ್ದೇಶಪೂರ್ವಕವಾಗಿ ಸಮನ್ಸ್‌ಗೆ ಉತ್ತರಿಸಿಲ್ಲ; ಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಿದ ಇ.ಡಿ

ಅಭಿಷೇಕ್‌ ಮನು ಸಿಂಘ್ವಿ ವಾದ ಆಲಿಸಿದ ನ್ಯಾಯಾಲಯವು, ಜೂನ್‌ 15ರ ಗಡುವು ನೀಡಿತು. ಹಾಗೆಯೇ, ಆಮ್‌ ಆದ್ಮಿ ಪಕ್ಷದ ಕಚೇರಿಯ ಜಾಗಕ್ಕಾಗಿ ಭೂಮಿ ಹಾಗೂ ಅಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಿ ಎಂದು ಕೋರ್ಟ್‌ ಸೂಚಿಸಿತು. ಈಗ ಗಡುವಿಗೂ ಮೊದಲು ಪಕ್ಷ ಕಚೇರಿಯನ್ನು ಸ್ಥಳಾಂತರ ಮಾಡುವ ಅನಿವಾರ್ಯತೆಗೆ ಆಪ್‌ ಸಿಲುಕಿದೆ. ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಈಗಾಗಲೇ ಆಮ್‌ ಆದ್ಮಿ ಪಕ್ಷದ ಸಚಿವರನ್ನು ಬಂಧಿಸಲಾಗಿದೆ. ಅರವಿಂದ್‌ ಕೇಜ್ರಿವಾಲ್‌ ಅವರಿಗೂ ಎಂಟು ಸಮನ್ಸ್‌ ನೀಡಲಾಗಿದ್ದು, ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗುತ್ತೇನೆ ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version