Site icon Vistara News

NEET PG Exam 2024: ನೀಟ್‌ ಪಿಜಿ ಪರೀಕ್ಷೆ ಮುಂದೂಡಲು ಸುಪ್ರೀಂ ಕೋರ್ಟ್‌ ನಕಾರ; ಆಗಸ್ಟ್‌ 11ಕ್ಕೇ ಎಕ್ಸಾಂ!

NEET PG Exam 2024

ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET PG Exam 2024) ದಿನಾಂಕವನ್ನು ಮುಂದೂಡಬೇಕು ಎಂಬುದಾಗಿ ಐವರು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ. ಆಗಸ್ಟ್‌ 11ರಂದು ನಡೆಯಬೇಕಿರುವ ನೀಟ್‌ ಪಿಜಿ ಪರೀಕ್ಷೆಯನ್ನು ರದ್ದುಗಳಿಸಲು ಸಾಧ್ಯವಿಲ್ಲ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ತಿಳಿಸಿದೆ.

ನೀಟ್‌ ಪರೀಕ್ಷೆ ನಡೆಯುವ ನಗರಗಳ ಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಜುಲೈ 31ರಂದು ಪ್ರಕಟಿಸಿದೆ. ಆಗಸ್ಟ್‌ 8ರಂದು ಪರೀಕ್ಷೆ ನಡೆಯುವ ಕೇಂದ್ರಗಳ ಮಾಹಿತಿ ನೀಡಲಾಗಿದೆ. ಇದರಿಂದಾಗಿ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪುವುದು ಕಷ್ಟವಾಗುತ್ತದೆ. ಹಾಗಾಗಿ, ಪರೀಕ್ಷೆಯನ್ನು ಮುಂದೂಡಬೇಕು, ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಬೇಕು. ನೀಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬುದಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

“ದೇಶದಲ್ಲಿ ಈಗಾಗಲೇ ತುಂಬ ಸಮಸ್ಯೆಗಳಿವೆ. ಈಗ ನೀಟ್‌ ಪಿಜಿ ಪರೀಕ್ಷೆಯನ್ನೂ ಮತ್ತೆ ಮುಂದೂಡಬೇಕಾ” ಎಂದು ಅರ್ಜಿದಾರರ ಪರ ವಕೀಲರಿಗೆ ಕೋರ್ಟ್‌ ಪ್ರಶ್ನಿಸಿತು. ಆಗ ಅರ್ಜಿದಾರರ ಪರ ವಕೀಲ ಸಂಜಯ್‌ ಹೆಗ್ಡೆ, “ಇದುವರೆಗೆ ಒಮ್ಮೆ ಮಾತ್ರ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ” ಎಂದು ತಿಳಿಸಿದರು. ಆಗ ನ್ಯಾಯಪೀಠವು, “ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್‌ ಪಿಜಿ ಬರೆಯಲು ಸಜ್ಜಾಗಿದ್ದಾರೆ. ಆದರೆ, 2 ಲಕ್ಷ ಅಭ್ಯರ್ಥಿಗಳಲ್ಲಿ ಐವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಪರೀಕ್ಷೆಯ ದಿನಾಂಕ ಮುಂದೂಡಲು ಆಗುವುದಿಲ್ಲ. ಅಷ್ಟಕ್ಕೂ, ಶೈಕ್ಷಣಿಕ ನೀತಿಯನ್ನು ನಾವು ಬದಲಿಸಲು ಸಾಧ್ಯವಿಲ್ಲ. ಇದು ಪರಿಪೂರ್ಣ ಜಗತ್ತು ಕೂಡ ಅಲ್ಲʼ ಎಂದು ಸ್ಪಷ್ಟಪಡಿಸಿತು.

ನೀಟ್‌ ಪಿಜಿ ಪರೀಕ್ಷೆಯನ್ನು ಇದಕ್ಕೂ ಮೊದಲು ಜೂನ್‌ 23ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ನೀಟ್‌ ಯುಜಿ, ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೊಪ ಕೇಳಿಬಂದ ಹಿನ್ನೆಲೆಯಲ್ಲಿ ನೀಟ್‌ ಪಿಜಿ ಪರೀಕ್ಷೆಯನ್ನು ಆಗಸ್ಟ್‌ 11ಕ್ಕೆ ಮುಂದೂಡಲಾಗಿತ್ತು. ನೀಟ್‌ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಇದು ಕೋರ್ಟ್‌ ಮೆಟ್ಟಿಲು ಕೂಡ ಏರಿತ್ತು. ಆದರೆ, ನ್ಯಾಯಾಲಯವು ನೀಟ್‌ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿದೆ.

ಇದನ್ನೂ ಓದಿ: NEET PG : ನೀಟ್​ ಪಿಜಿ ಪರೀಕ್ಷೆಯ ಗೌಪ್ಯ ಮಾಹಿತಿಗಳು ಸೋರಿಕೆ, ಅಭ್ಯರ್ಥಿಗಳಿಗೆ ಆತಂಕ

Exit mobile version