Site icon Vistara News

School Jobs: 25 ಸಾವಿರ ಶಿಕ್ಷಕರ ವಜಾ ಆದೇಶಕ್ಕೆ ಸುಪ್ರೀಂ ತಡೆ; ಮಮತಾ ಸರ್ಕಾರಕ್ಕೆ ಚಾಟಿ

School Jobs

Supreme Court stays Calcutta HC order cancelling over 25,000 school jobs, slams Bengal govt

ನವದೆಹಲಿ: ಪಶ್ಚಿಮ ಬಂಗಾಳದ (West Bengal) ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು (School Jobs) ಕೆಲಸದಿಂದ ವಜಾಗೊಳಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್‌ (Supreme Court) ತಡೆಯಾಜ್ಞೆ ನೀಡಿದೆ. ಹಾಗೆಯೇ, ನೇಮಕಾತಿ ವೇಳೆ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ನೇಮಕಗೊಂಡ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಿಗೆ 25,753 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸಿ ಏಪ್ರಿಲ್‌ 22ರಂದು ಕೋಲ್ಕೊತಾ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದರು. ಹಾಗೆಯೇ, “ನೇಮಕಾತಿ ಹಗರಣದ ಕುರಿತು ಸಿಬಿಐ ತನಿಖೆ ಮುಂದುವರಿಸಿ, ಅದನ್ನು ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ನೇಮಕಗೊಂಡವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು” ಎಂದು ಸೂಚಿಸಿದರು.

“ಸರ್ಕಾರಿ ನೌಕರಿ ಸಿಗುವುದೇ ತುಂಬ ವಿರಳ. ಹಾಗಾಗಿ, ನೌಕರರನ್ನು ವಜಾಗೊಳಿಸಿದರೆ, ಸಾರ್ವಜನಿಕ ನಂಬಿಕೆ ಎಂಬುದೇ ಇರುವುದಿಲ್ಲ. ಇದು ವ್ಯವಸ್ಥಿತ ವಂಚನೆಯಾಗಿದೆ. ಸರ್ಕಾರಿ ಉದ್ಯೋಗವನ್ನು ಕಾನೂನು ಬಾಹಿರವಾಗಿ ಪಡೆದುಕೊಂಡರೆ, ಜನರಿಗೆ ವ್ಯವಸ್ಥೆ ಮೇಲೆ ನಂಬಿಕೆಯೇ ಇರುವುದಿಲ್ಲ. ಇನ್ನು ನೇಮಕಾತಿ ಪ್ರಕ್ರಿಯೆ ಸೇರಿ ಯಾವುದೇ ದಾಖಲೆಗಳು ಸರ್ಕಾರದ ಬಳಿ ಇಲ್ಲ. ಸರ್ಕಾರದ ಬಳಿ ದಾಖಲೆಯೇ ಇಲ್ಲ ಎಂದರೆ ಹೇಗೆ? ನೇಮಕಾತಿ ವೇಳೆ ಎಲ್ಲ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಇಡಬಹುದಿತ್ತಲ್ಲ” ಎಂದು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಚಾಟಿ ಬೀಸಿತು.

2016ರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕ ಮಾಡಲಾಗಿತ್ತು. ಈ ಪ್ರಕ್ರಿಯೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ನೇಮಕಗೊಂಡ 25,753 ಮಂದಿಯನ್ನು ವಜಾಗೊಳಿಸಬೇಕು ಹಾಗೂ ಅವರು ಇದುವರೆಗೆ ಪಡೆದ ವೇತನವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಹಂತಿರುಗಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಖಾಲಿ OMR ಹಾಳೆಗಳನ್ನು ಸಲ್ಲಿಸಿ, ಕಾನೂನುಬಾಹಿರವಾಗಿ ನೇಮಕಗೊಂಡ ಆರೋಪದಲ್ಲಿ ವಜಾಗೊಂಡ ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನವನ್ನು ಹಿಂದಿರುಗಿಸಬೇಕು ಎಂದು ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರ ವಿಭಾಗೀಯ ಪೀಠ ಹೇಳಿತ್ತು. ಈ ಶಿಕ್ಷಕರಿಂದ ಹಣ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿತ್ತು.

ಇದನ್ನೂ ಓದಿ: Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Exit mobile version