ನವದೆಹಲಿ: ಕರ್ನಾಟಕದಂತೆ ಮಹಾರಾಷ್ಟ್ರದ ಮುಂಬೈನಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ (Hijab Ban) ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಆದೇಶವು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಮುಂಬೈನ (Mumbai College) ಚೆಂಬುರ್ ಟ್ರೋಂಬೆ ಎಜುಕೇಷನ್ ಸೊಸೈಟಿಯ ಎನ್.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆಯಾಜ್ಞೆ ನೀಡಿದೆ. ಇದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಕಾಲೇಜುಗಳಿಗೆ ಹಿನ್ನಡೆಯಾದಂತಾಗಿದೆ.
ಕಾಲೇಜು ಆಡಳಿತ ಮಂಡಳಿ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಸಂಜಯ್ ಕುಮಾರ್ ನೇತೃತ್ವದ ನ್ಯಾಯಪೀಠವು, “ಕಾಲೇಜು ಆಡಳಿತ ಮಂಡಳಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಆದರೆ, ತರಗತಿಯಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಕೂರುವಂತಿಲ್ಲ. ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಕ್ಯಾಂಪಸ್‌ನಲ್ಲಿ ಕೈಗೊಳ್ಳುವಂತಿಲ್ಲ. ಇನ್ನು, ಕಾಲೇಜು ಆಡಳಿತ ಮಂಡಳಿಯು ಬುರ್ಖಾ, ನಿಕಾಬ್, ಹಿಜಾಬ್ ನಿಷೇಧಿಸಿದ್ದು, ಬಿಂದಿ, ತಿಲಕಕ್ಕೆ ಏಕೆ ಅವಕಾಶ ಕೊಟ್ಟಿದೆ” ಎಂದೂ ಪ್ರಶ್ನಿಸಿತು.
#BREAKING #HIJAB case
— Bar and Bench (@barandbench) August 9, 2024
"How are you empowering women by telling them what to wear?": #SupremeCourt lifts ban on Hijab in Mumbai college pic.twitter.com/Hg2EHvfGpv
ಕಾಲೇಜಿನ ಆದೇಶ ಏನಾಗಿತ್ತು?
ಮುಂಬೈನಲ್ಲಿರುವ ಚೆಂಬುರ್ ಟ್ರೋಂಬೆ ಎಜುಕೇಷನ್ ಸೊಸೈಟಿಯ ಎನ್.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನಲ್ಲಿ ಇತ್ತೀಚೆಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದ್ದು, ಕಾಲೇಜು ಆವರಣದಲ್ಲಿ ಹಿಜಾಬ್, ನಕಾಬ್, ಬುರ್ಖಾ, ಶಾಲು, ಟೋಪಿ, ಬ್ಯಾಡ್ಜ್‌ಗಳನ್ನು ಧರಿಸಿಕೊಂಡು ಬರುವಂತಿಲ್ಲ ಎಂದು ಆದೇಶ ಹೊರಡಿಸಿತ್ತು. ಆದರೆ, ಕಾಲೇಜಿನಲ್ಲಿ ಪದವಿಯ ದ್ವಿತೀಯ ಹಾಗೂ ಅಂತಿಮ ವರ್ಷದ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ 9 ವಿದ್ಯಾರ್ಥಿನಿಯರು ಕಾಲೇಜಿನ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೀಗ, ಸುಪ್ರೀಂ ಕೋರ್ಟ್, ಕಾಲೇಜಿನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಅಷ್ಟೇ ಅಲ್ಲ, ವಿದ್ಯಾರ್ಥಿಗಳು ಔಪಚಾರಿಕ ಮತ್ತು ಯೋಗ್ಯವಾದ ಉಡುಗೆಯನ್ನು ಧರಿಸಬೇಕು. ಅವರು ಶರ್ಟ್-ಪ್ಯಾಂಟ್ ಧರಿಸಬಹುದು. ಹುಡುಗಿಯರು ಭಾರತೀಯ ಹಾಗೂ ಮಾರ್ಡನ್ ಡ್ರೆಸ್ ಧರಿಸಬಹುದು. ಆದರೆ ಆದರೆ ಒಂದು ಧರ್ಮ, ಜಾತಿಯನ್ನು ಪ್ರತಿನಿಧಿಸುವಂತಹ ಬಟ್ಟೆಯನ್ನು ಧರಿಸುವಂತಿಲ್ಲ. ಜೀನ್ಸ್, ಟಿ ಶರ್ಟ್, ಅಸಭ್ಯ ರೀತಿಯ ಉಡುಗೆಗಳನ್ನು ಧರಿಸಲು ಅವಕಾಶ ಇಲ್ಲ. ಹಿಜಾಬ್, ಬುರ್ಖಾ, ನಖಾಬ್, ಶಾಲು, ಟೋಪಿಗಳನ್ನು ತೆಗೆದೇ ಕ್ಯಾಂಪಸ್ ಒಳಗೆ ಬರಬೇಕು ಎಂದು ಪ್ರಕಟಣೆ ತಿಳಿಸಿತ್ತು.