Site icon Vistara News

Citizenship Amendment Act : ​ 19ರಂದು ಸಿಎಎ ಜಾರಿ ವಿಚಾರ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ

Supreme Court

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ 2019 (Citizenship Amendment Act) ಅನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಮಾರ್ಚ್ 19 ರಂದು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಅವರು ಮುಂದಿನ ವಾರ ಈ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಹೇಳಿದರು.

2019ರಿಂದ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಲಾದ ಇನ್ನೂರಕ್ಕೂ ಹೆಚ್ಚು ಸಂಬಂಧಿತ ಅರ್ಜಿಗಳು ವಿವಿಧ ಸಿಎಎ ನಿಬಂಧನೆಗಳನ್ನು ಪ್ರಶ್ನಿಸಿವೆ. 2014ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳದಿಂದಾಗಿ ಭಾರತಕ್ಕೆ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ತ್ವರಿತ ಪೌರತ್ವ ನೀಡುವ ಗುರಿಯನ್ನು ಈ ಕಾನೂನು ಹೊಂದಿದೆ.

ಸಿಎಎಯನ್ನು 2019 ರ ಡಿಸೆಂಬರ್​ನಲ್ಲಿ ಸಂಸತ್ತು ಅಂಗೀಕರಿಸಿದರೆ. ಕೇಂದ್ರ ಸರ್ಕಾರ ಸೋಮವಾರ ಅದಕ್ಕಾಗಿ ನಿಯಮಗಳನ್ನು ಹೊರಡಿಸಿದೆ. ಕಾಯ್ದೆಯ ಜಾರಿಯು ವಿರೋಧ ಪಕ್ಷದ ನಾಯಕರಿಂದ ಟೀಕೆಗೆ ಒಳಗಾಗಿದೆ. ಅವರು ಅಧಿಸೂಚಿತ ನಿಯಮಗಳು “ಅಸಂವಿಧಾನಿಕ”, “ತಾರತಮ್ಯ” ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ “ಪೌರತ್ವದ ಜಾತ್ಯತೀತ ತತ್ವ ಉಲ್ಲಂಘಿಸುತ್ತವೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Lok Sabha Election : ನಾಳೆ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ

ಸಿಎಎ ಪೌರತ್ವವನ್ನು ನೀಡುವ ಕಾನೂನಿನಲ್ಲಿ ದೇಶದ ಯಾವುದೇ ನಾಗರಿಕರು ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಕೇಂದ್ರವು ಸಮರ್ಥಿಸಿಕೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎಯನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಎಂದಿಗೂ ಅದರೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

“ಭಾರತೀಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು. ನಾವು ಅದರ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಸಿಎಎಯನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ” ಎಂದು ಹಿರಿಯ ಬಿಜೆಪಿ ನಾಯಕ ಹೇಳಿದ್ದಾರೆ. “ಪ್ರತಿಪಕ್ಷಗಳಿಗೆ ಬೇರೆ ಕೆಲಸವಿಲ್ಲ. ಅವರು ಹೇಳವುದೇ ಒಂದು ಮಾಡುವುದೇ ಒಂದು. ಆದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ಇತಿಹಾಸ ವಿಭಿನ್ನ ಬಿಜೆಪಿ ಅಥವಾ ಪ್ರಧಾನಿ ಮೋದಿ ಹೇಳುವುದು ಕಲ್ಲಿನಲ್ಲಿ ಕೆತ್ತಿದಂತೆ. ಮೋದಿ ನೀಡಿದ ಪ್ರತಿಯೊಂದು ಭರವಸೆಯೂ ಈಡೇರಿದೆ ಎಂಬುದಾಗಿ ಅವರು ಹೇಳಿದ್ದಾರೆ.

Exit mobile version