ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಟಿ 20 ವಿಶ್ವಕಪ್ ಫೈನಲ್ 2024 ರ ಫೈನಲ್ ಪಂದ್ಯದಲ್ಲಿ ಬೌಂಡರಿ ಲೈನ್ನಲ್ಲಿದ್ದ ಫೀಲ್ಡರ್ ಸೂರ್ಯಕುಮಾರ್ ಯಾದವ್ (Suryakumar Yadav ) ಆಕರ್ಷಕ ಜಗ್ಲಿಂಗ್ ಕ್ಯಾಚ್ ಹಿಡಿದಿದ್ದಾರೆ. ಇದು ಭಾರತದ ಕ್ರಿಕೆಟ್ ಇತಿಹಾಸ ಸ್ಮರಣೀಯ ಕ್ಯಾಚ್ ಆಗಿ ಇತಿಹಾಸ ಪುಸ್ತಕ ಸೇರಲಿದೆ. ಯಾಕೆಂದರೆ ಅದೇ ಕ್ಯಾಚ್ನಿಂದ ಭಾರತ ತಂಡ ಗೆಲುವು ಸಾಧಿಸಿದೆ ಎಂದೂ ಹೇಳಬಹುದು. ಯಾಕೆಂದರೆ ಅವರು ಔಟ್ ಮಾಡಿದ್ದು 19.1 ಓವರ್ನಲ್ಲಿ ಹೊಡೆಬಡಿಯ ಬ್ಯಾಟರ್ ಡೇವಿಡ್ ಮಿಲ್ಲರ್ ಅವರನ್ನು. ಅದೇನಾದರು ಸಿಕ್ಸರ್ ಹೋಗಿದ್ದರೆ ಭಾರತಕ್ಕೆ ಸೋಲಾಗುತ್ತಿತ್ತು.
ಅದಕ್ಕಿಂತ ಮೊದಲು ಹೆನ್ರಿಚ್ ಕ್ಲಾಸೆನ್ ಅಮೋಘ 52 ರನ್ ಗಳಿಸಿ ಭಾರತದ ಗೆಲುವು ಕಸಿಯಲು ಯತ್ನಿಸಿದ್ದರು. ಆದರೆ, ಹಾರ್ದಿಕ್ ಪಾಂಡ್ಯ 17ನೇ ಓವರ್ನಲ್ಲಿ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ತಮ್ಮ ಕಡೆಗೆ ತಿರುಗಿಸಿದರು. ಕೊನೆಯ ಎರಡು ಓವರ್ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 20 ರನ್ಗಳ ಅವಶ್ಯಕತೆಯಿತ್ತು.
ನಂತರ ಅರ್ಶ್ದೀಪ್ ಸಿಂಗ್ 19ನೇ ಓವರ್ನಲ್ಲಿ ಕೇವಲ 4 ರನ್ ನೀಡಿ ಮಿಂಚಿದರು. ಅಂತಿಮ ಓವರ್ನಲ್ಲಿ ದಕ್ಷಿಣ ಆಫ್ರಿಕಾಕ್ಕೆ 16 ರನ್ಗಳ ಅವಶ್ಯಕತೆಯಿತ್ತು. ಮೊದಲ ಎಸೆತಕ್ಕೆ ಡೇವಿಡ್ ಮಿಲ್ಲರ್ ಹಾರ್ದಿಕ್ ಪಾಂಡ್ಯ ಅವರನ್ನು ಎದುರಿಸಿದರು. ಮಿಲ್ಲರ್ ದಕ್ಷಿಣ ಆಫ್ರಿಕಾದ ಕೊನೆಯ ಬಲಾಢ್ಯ ಬ್ಯಾಟ್ಸ್ಮನ್ ಆಗಿದ್ದರು. ಅವರಿಗೆ ತಂಡವನ್ನು ಗೆಲ್ಲಿಸುವ ಜವಾಬ್ದಾರಿ ಇತ್ತು. ಮತ್ತೊಂದೆಡೆ, ಮಿಲ್ಲರ್ ಅವರ ವಿಕೆಟ್ ಭಾರತಕ್ಕೆ ಪಂದ್ಯವನ್ನು ಗೆಲ್ಲಲು ನಿರ್ಣಾಯಕವಾಗಿತ್ತು.
ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಪ್ರಯತ್ನದಿಂದಾಗಿ ಪಂದ್ಯ ಫಲಿತಾಂಶವನ್ನು ಮೊದಲ ಎಸೆತದಲ್ಲೇ ನಿರ್ಧರಿಸಲಾಯಿತು. ಪಾಂಡ್ಯ ವೈಡ್ ಕಡೆಗೆ ಲೊ ಫುಲ್ ಟಾಸ್ ಎಸೆದರು. ಮಿಲ್ಲರ್ ಅದನ್ನು ಲಾಂಗ್ ಆಫ್ ಕಡೆಗೆ ಹೊಡೆದರು. ಚೆಂಡು ಬೌಂಡರಿ ಹಗ್ಗವನ್ನು ದಾಟಲು ಸಿದ್ಧವಾಗಿತ್ತು ಆದರೆ ಸೂರ್ಯಕುಮಾರ್ ಯಾದವ್ ಚುರುಕಾದರು.
ಭಾರತದ ಸ್ಟಾರ್ ಫೀಲ್ಡರ್ ಓಡಿ ಬಂದರು. ಚೆಂಡನ್ನು ಹಿಡಿದು ಗಾಳಿಯಲ್ಲಿ ಎಸೆದು ಬೌಂಡರಿ ಲೈನ್ ದಾಟಿ ಮತ್ತೆ ಬಂದು ಹಿಡಿದರು. ಇದು ಈ ದಶಕದ ಅಮೋಘ ಕ್ಯಾಚ್ ಎಂದರೂ ಕಡಿಮೆಯೇ. ಯಾಕೆಂದರೆ ಇದು ನಿರ್ಣಾಯಕ ಕ್ಯಾಚ್ ಅಗಿತ್ತು. ಮಿಲ್ಲರ್ ಅವರ ಔಟ್ ನಿಂದಾಗಿ ಭಾರತ 7 ರನ್ ಗಳಿಂದ ಪಂದ್ಯವನ್ನು ಗೆದ್ದು 17 ವರ್ಷಗಳ ನಂತರ ಟಿ 20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. 2007ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಈ ಮೂಲಕ ಎರಡು ಬಾರಿ ಪ್ರಶಸ್ತಿ ಗೆದ್ದ ಏಷ್ಯಾದ ಮೊದಲ ಹಾಗೂ ಒಟ್ಟಾರೆ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ
ಕ್ಲಾಸೆನ್ 27 ಎಸೆತಗಳಲ್ಲಿ 52 ರನ್ ಗಳಿಸುವುದರೊಂದಿಗೆ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ 76 ರನ್ ಬಾರಿಸುವುದರೊಂದಿಗೆ ಭಾರತ 7 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತ್ತು.