Site icon Vistara News

IPL 2024 : ಐಪಿಎಲ್ ಆಡುವ ಕುರಿತು ಹೊಸ ಅಪ್​ಡೇಟ್​ ನೀಡಿದ ಸೂರ್ಯಕುಮಾರ್ ಯಾದವ್ , ಏನದು?

Suryakumar Yadav

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ಕ್ಕೆ (IPL 2024) ಮುಂಚಿತವಾಗಿ ಭಾರತ ಮತ್ತು ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಚೇತರಿಕೆಯ ಹಾದಿ ಉತ್ತಮವಾಗಿ ಸಾಗುತ್ತಿದೆ ಮತ್ತು ಶೀಘ್ರದಲ್ಲೇ ಮೈದಾನದಲ್ಲಿ ಎಲ್ಲರನ್ನೂ ನೋಡುವ ಭರವಸೆಯಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಭಾರತದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಡಿಸೆಂಬರ್ 2023 ರಿಂದ ಆಟದಿಂದ ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಐ ಸರಣಿಯಲ್ಲಿ ಅವರು ಭಾರತ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಪಾದ ತಿರುಚಿದ್ದರಿಂದ ಅವರು ಮೈದಾನ ತೊರೆಯಬೇಕಾಗಿತ್ತು. ಅವರು ಇಡೀ ಸರಣಿ ಮತ್ತು ಅಫ್ಘಾನಿಸ್ತಾನ ಟಿ 20 ಪಂದ್ಯಗಳಿಂದ ಹೊರಗುಳಿದಿದ್ದರು.

ಇದನ್ನೂ ಓದಿ : IPL 2024: ಅತಿ ಹೆಚ್ಚು ಐಪಿಎಲ್​ ಶತಕ ಬಾರಿಸಿದ ದಾಂಡಿಗರಿವರು!

ಪಾದದ ಗಾಯದ ನಂತರ ಸೂರ್ಯಕುಮಾರ್ ಯಾದವ್ ಶಸ್ತ್ರಚಿಕಿತ್ಸೆ ಒಂದಕ್ಕೆ ಒಳಗಾಗಿದ್ದರು. ಈ ವೇಳೆ ಸೂರ್ಯಕುಮಾರ್​ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಸಾಕಷ್ಟು ಗೊಂದಲಗಳು ಉಂಟಾದ ಬಳಿಕ ಅವರು ಕ್ರೀಡಾ ಹರ್ನಿಯಾಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆಯೇ ಹೊರತು ಪಾದಕ್ಕೆ ಅಲ್ಲ ಎಂದು ಗೊತ್ತಾಯಿತು.

ಸೂರ್ಯಕುಮಾರ್ ಯಾದವ್ ಇದೀಗ ತಮ್ಮ ಚೇತರಿಕೆಯ ಬಗ್ಗೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಮೈದಾನಕ್ಕೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅವರು ಹೀಗೆ ಹೇಳಿದ್ದಾರೆ.

“ಎಲ್ಲರಿಗೂ ನಮಸ್ಕಾರ, ಶುಭೋದಯ. ನೀವೆಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಏನೋ ಹೇಳಲು ಬಯಸಿದ್ದೆ. ಸ್ವಲ್ಪ ಗೊಂದಲ ಉಂಟಾಗಿತ್ತು ನನ್ನ ಬಗ್ಗೆ. ಕೆಲವು ವಾರಗಳ ಹಿಂದೆ ಸ್ಪೋರ್ಟ್ಸ್ ಹರ್ನಿಯಾಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಯಿತು. ಅದು ಪಾದದ ಗಾಯಕ್ಕೆ ಅಲ್ಲ. ಚೇತರಿಕೆಯ ಹಾದಿ ನಿಜವಾಗಿಯೂ ಉತ್ತಮವಾಗಿ ಸಾಗುತ್ತಿದೆ. ಎಲ್ಲರಿಗೂ ಧನ್ಯವಾದಗಳು, ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ನೆಟ್ಸ್​​ನಲ್ಲಿ ಅಭ್ಯಾಸ

ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ನೆಟ್ಸ್​​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದು ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಸಕಾರಾತ್ಮಕ ಸಂಗತಿ . ಬ್ಯಾಟರ್​ ತಂಡಕ್ಕೆ ಮರಳಲು, ತನ್ನ ಪಾಲನ್ನು ಮರಳಿ ಪಡೆಯಲು ಉತ್ಸುಕರಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ಎನ್​ಸಿಎಯಿಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಅರ್ಶ್​​ದೀಪ್​ ಸಿಂಗ್ ಅವರೊಂದಿಗೆ ಮಾತನಾಡುವುದು ಕಂಡುಬಂದಿದೆ. ಬ್ಯಾಟರ್​ ತನ್ನ ಕಾಲಿಗೆ ಆರಾಮವಾಗಿ ಓಡಾಡುತ್ತಿರುವುದರಿಂದ ಶೀಘ್ರದಲ್ಲೇ ಪುನರಾಗಮನ ಮಾಡಬಹುದು ಎಂದು ಹೇಳಲಾಗಿದೆ.

ಸೂರ್ಯಕುಮಾರ್ ಯಾದವ್ ದೊಡ್ಡ ಪಾತ್ರ ವಹಿಸಲಿದ್ದಾರೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಮುಂಬರುವ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಪುನರಾಗಮನ ಮಾಡುವ ನಿರೀಕ್ಷೆಯಿದೆ. ಅವರು ಲೀಗ್​​ನ ಮೊದಲ ಪಂದ್ಯವನ್ನು ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್​ಗಾಗಿ ಇಡೀ ಆವೃತ್ತಿಯಲ್ಲಿ ಅವರು ದೊಡ್ಡ ಪಾತ್ರ ವಹಿಸುವ ನಿರೀಕ್ಷೆಯಿದೆ.

ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಸೂರ್ಯಕುಮಾರ್ ಯಾದವ್ ಪ್ರಮುಖ ಕಾರಣಗಳಲ್ಲಿ ಒಬ್ಬರು. ಅವರು ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ಭಾನುವಾರ (ಮಾರ್ಚ್ 24) ಗುಜರಾತ್ ಜೈಂಟ್ಸ್ ವಿರುದ್ಧ ಆಡಲಿದೆ. ಈ ಬಾರಿ ಅವರು ಹೊಂದಿರುವ ಪ್ರತಿಭೆ ಮತ್ತು ಅನುಭವದೊಂದಿಗೆ, ಅವರು ಲೀಗ್​​ನಲ್ಲಿ ತಮ್ಮ 6 ನೇ ಪ್ರಶಸ್ತಿಯನ್ನು ಗೆದ್ದರೆ ಆಶ್ಚರ್ಯವಿಲ್ಲ.

Exit mobile version