Site icon Vistara News

Swapnil Kusale : ರೈಲ್ವೆ ಟಿಕೆಟ್​ ಕಲೆಕ್ಟರ್​ ಈಗ ಒಲಿಂಪಿಕ್​ ಹೀರೊ; ಧೋನಿಯಂತೆಯೇ ಸಾಧನೆ ಮಾಡಿ ಕಂಚು ಗೆದ್ದ ಶೂಟರ್​ ಸ್ವಪ್ನಿಲ್ ಕುಸಾಲೆ

Swapnil Kusale

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) 50 ಮೀಟರ್ ರೈಫಲ್ಸ್​ ಶೂಟಿಂಗ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ಶೂಟರ್​ ಸ್ವಪ್ನಿಲ್ ಕುಸಾಲೆ (Swapnil Kusale ) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಅವರು ಭಾರತದ ಪದಕಗಳ ಸಂಖ್ಯೆಯನ್ನು 3ಕ್ಕೆ ಏರಿಸಿದ್ದಾರೆ. ಭಾರತೀಯ ಶೂಟಿಂಗ್ ಕ್ಷೇತ್ರ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮೂರು ಶೂಟರ್​ಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿರುವುದು. ಸ್ವಪ್ನಿಲ್ ಈಗ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರೊಂದಿಗೆ ಸೇರಿ ಪ್ಯಾರಿಸ್ ಕ್ರೀಡಾಕೂಟದಲ್ಲಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.

ಅಂದ ಹಾಗೆ ಪದಕ ಗೆದ್ದಿರುವ ಸ್ವಪ್ನಿಲ್​ ಕುಸಾಲೆ ಅವರ ಶೂಟಿಂಗ್​ ಪ್ರಯಾಣವು ಅತ್ಯಂತ ರೋಚಕ ಮತ್ತು ಆಸಕ್ತಿಕಾರಕ. ಹೇಗೆಂದರೆ ಅವರು ಭಾರತ ಕ್ರಿಕೆಟ್​​ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯಂತೆಯೇ ರೈಲ್ವೆನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದವರು. ಅಲ್ಲಿಂದ ಅವರು ಶೂಟಿಂಗ್ ಕ್ರೀಡೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಇದೀಗ ಒಲಿಂಪಿಕ್ಸ್​ನಲ್ಲಿ ಸಾಧನೆ ಮಾಡಿದ್ದಾರೆ. 28 ವರ್ಷದ ಕುಸಾಲೆ ಅವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿಯಿಂದ ತಾನು ಸ್ಫೂರ್ತಿ ಪಡೆದುಕೊಂಡಿದ್ದೇನೆ ಎಂಬುದನ್ನು ಈ ಹಿಂದೆ ಬಹಿರಂಗಪಡಿಸಿದ್ದರು. ಹೀಗಾಗಿ ಧೋನಿ ಮತ್ತು ಸ್ವಪ್ನಿಲ್ ನಡುವೆ ಸಾಮ್ಯತೆ ಇರುವುದನ್ನು ಕ್ರೀಡಾಭಿಮಾನಿಗಳು ಗುರುತಿಸಿದ್ದಾರೆ.

ಶಾಂತವಾಗಿರುವುದು ಮತ್ತು ತಾಳ್ಮೆಯಿಂದಿರುವುದು ಶೂಟರ್​ಗೆ ಅತ್ಯಂತ ಅವಶ್ಯಕ ಸಂಗತಿ. ಆ ಎರಡು ಗುಣಲಕ್ಷಣಗಳು ಧೋನಿಯ ವ್ಯಕ್ತಿತ್ವದ ಹೆಗ್ಗುರುತು. ಅದನ್ನು ಸ್ವಪ್ನಿಲ್ ಕೂಡ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಕುಸಾಲೆ ಜೀವನವೂ ಧೋನಿಯ ಜೀವನ ಕಥೆಗೆ ಹತ್ತಿರವಾಗಿದೆ ಎಂಬುದರಲ್ಲಿ ಆಶ್ಚರ್ಯವಿಲ್ಲ. ಸ್ವಪ್ನಿಲ್ ಅವರು ಧೋನಿಯ ಜೀವನ ಕತೆಯಿಂದ ಪ್ರೇರಿತನಾಗಿರುವುದನ್ನು ಹೇಳಿಕೊಂಡಿದ್ದಾರೆ. ಹಿಂದೆ ಹಲವು ಬಾರಿ ಅವರ ಕತೆಯನ್ನು ಓದಿ ತಿಳಿಸುಕೊಂಡಿದ್ದಾರೆ.

ಧೋನಿ ಬ್ಯಾಟಿಂಗ್​ನಲ್ಲಿ ನಿಧಾನಗತಿಯ ಆರಂಭಕ್ಕೆ ಹೆಸರುವಾಸಿ. ಆದರೆ, ಒಂದು ಬಾರಿ ಕ್ರೀಸ್​ನಲ್ಲಿ ಗಟ್ಟಿಯಾಗಿ ತಳವೂರಿದರೆ ರನ್​ ಗಳಿಕೆ ವೇಗಗೊಳಿಸಿ ತಮ್ಮ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುತ್ತಿದ್ದರು. ಧೋನಿಯಂತೆಯೇ ಕುಸಾಲೆ ಸ್ಪರ್ಧೆಯ ನಡುವೆ ತಮ್ಮ ಶಾಂತತೆಯನ್ನು ತೋರಿಸಿದ್ದಾರೆ. 6 ನೇ ಸ್ಥಾನದಲ್ಲಿದ್ದ ಅವರು ತಕ್ಷಣ ಸುಧಾರಿಸಿಕೊಂಡು 451.4 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿ ಪದಕ ಗೆದ್ದಿದ್ದರು. ಈ ಮೂಲಕ ಅವರು ಧೋನಿಯಂತೆಯೇ ಸ್ಥಿರ ಪ್ರದರ್ಶನ ನೀಡಿದ್ದರು.

ಸ್ವಪ್ನಿಲ್ ಕುಸಾಲೆ ಎಂ.ಎಸ್.ಧೋನಿ ಸಾಮ್ಯತೆ

“ಶೂಟಿಂಗ್ ಜಗತ್ತಿನಲ್ಲಿ ನಾನು ಯಾರನ್ನೂ ನಿರ್ದಿಷ್ಟವಾಗಿ ಅನುಸರಿಸುವುದಿಲ್ಲ. ಅದರ ಹೊರಗೆ, ನಾನು ಧೋನಿಯನ ವ್ಯಕ್ತಿತ್ವನ್ನು ಮೆಚ್ಚುತ್ತೇನೆ. ನನ್ನ ಕ್ರೀಡೆಗೆ ನಾನು ಮೈದಾನದಲ್ಲಿ ಅವರಂತೆಯೇ ಶಾಂತ ಮತ್ತು ತಾಳ್ಮೆಯಿಂದಿರಬೇಕು. ನಾನು ಅವರಂತೆಯೇ ಟಿಕೆಟ್ ಕಲೆಕ್ಟರ್ ಆಗಿರುವುದರಿಂದ ಅವರ ಕಥೆಯೊಂದಿಗೆ ನಾನು ಸಂಬಂಧ ಹೊಂದಿದ್ದೇನೆ” ಎಂದು ಕುಸಾಲೆ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದ ನಂತರ ತಿಳಿಸಿದ್ದರು.

ಸೆಂಟ್ರಲ್​ ರೈಲ್ವೇಯ ಉದ್ಯೋಗಿ

ಕುಸಾಲೆ 2015 ರಿಂದ ಕೇಂದ್ರ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಬಳಿಯ ಕಂಬಳ್ವಾಡಿ ಗ್ರಾಮದ 28 ವರ್ಷದ ಅವರು 2012 ರಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ, ಆದರೆ ಪ್ಯಾರಿಸ್ ಕ್ರೀಡಾಕೂಟದಲ್ಲಿ ಒಲಿಂಪಿಕ್ಸ್​​ನಲ್ಲಿ ಪಾದಾರ್ಪಣೆ ಮಾಡಿದ್ದರು. ಅದಕ್ಕಾಗಿ ಅವರು ಶೂಟಿಂಗ್ ಆರಂಭದಿಂದ 12 ವರ್ಷ ಕಾಯಬೇಕಾಯಿತು.

ಇದನ್ನೂ ಓದಿ: Rohit Sharma: ಸಚಿನ್​, ಕೊಹ್ಲಿ ಜತೆ ಎಲೈಟ್​ ಪಟ್ಟಿ ಸೇರುವ ನಿರೀಕ್ಷೆಯಲ್ಲಿ ರೋಹಿತ್​

ಸ್ವಪ್ನಿಲ್ ಕುಸಾಲೆ 1995 ರಲ್ಲಿ ಕೃಷಿ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ್ದರೆ. 2009ರಲ್ಲಿ, ಅವರ ತಂದೆ ಅವರನ್ನು ಮಹಾರಾಷ್ಟ್ರ ಸರ್ಕಾರದ ಕ್ರೀಡೆಗೆ ಮೀಸಲಾದ ಪ್ರಾಥಮಿಕ ಕಾರ್ಯಕ್ರಮವಾದ ಕ್ರಿಡಾ ಪ್ರಭೋದಿನಿಗೆ ದಾಖಲಿಸಿದ್ದರು. ಒಂದು ವರ್ಷದ ದೈಹಿಕ ತರಬೇತಿಯ ನಂತರ, ಅವರು ಒಂದು ಕ್ರೀಡೆಯನ್ನು ಆರಿಸಬೇಕಾಯಿತು. ಈ ವೇಳೆ ಅವರು ಶೂಟಿಂಗ್ ಅನ್ನು ಆರಿಸಿಕೊಂಡರು. 2013 ರಲ್ಲಿ, ಅವರು ಲಕ್ಷ್ಯ ಸ್ಪೋರ್ಟ್ಸ್​​ ಅವರಿಗೆ ಪ್ರಾಯೋಜಕತ್ವ ನೀಡಿತು.

Exit mobile version