ಬೆಂಗಳೂರು: ರಶೀದ್ ಖಾನ್ ನೇತೃತ್ವದ ಅಫ್ಘಾನಿಸ್ತಾನ ತಂಡ ಭಾನುವಾರ (ಜೂನ್ 23) ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್ 2024ನಲ್ಲಿ ಸೂಪರ್ 8 ಹಂತದಿಂದ ಮೇಲಕ್ಕೇರುವ ಚೈತನ್ಯ ಪಡೆದುಕೊಂಡಿದೆ. ಈ ವಾರದ ಆರಂಭದಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ಸೂಪರ್ 8 ಪಂದ್ಯವನ್ನು ಸೋತ ನಂತರ ಅಫ್ಘಾನಿಸ್ತಾನವು ಹಾಲಿ ಟೆಸ್ಟ್ ಮತ್ತು ಏಕದಿನ ವಿಶ್ವ ಚಾಂಪಿಯನ್ಗಳನ್ನು ದಿಗ್ಭ್ರಮೆಗೊಳಿಸಿತು. ಈ ಮೂಲಕ ಸೆಮಿಫೈನಲ್ಗೆ ಅರ್ಹತೆ ಪಡೆಯುವ ಅವಕಾಶಗಳನ್ನು ಸೃಷ್ಟಿಸಿಕೊಂಡಿದೆ. ಇದು ಅಫ್ಘಾನಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಯಾವುದೇ ಸ್ವರೂಪದಲ್ಲಿ ಗಳಿಸಿದ ಮೊದಲ ಗೆಲುವಾಗಿದೆ.
AFGHANISTAN CELEBRATION. ❤️
— Johns. (@CricCrazyJohns) June 23, 2024
– A special song for their bowling consultant: DJ Bravo. [Mohammad Nabi IG] pic.twitter.com/NmzyiuLPTo
ರಶೀದ್ ಖಾನ್ ನೇತೃತ್ವದ ಅಫಘಾನಿಸ್ತಾನ ತಂಡಕ್ಕೆ ಈ ಗೆಲುವು ಬೇಕಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರನ್ ಅರ್ಧಶತಕಗಳನ್ನು ಬಾರಿಸಿದರು. ಮೊದಲ ವಿಕೆಟ್ಗೆ 118 ರನ್ಗಳ ಜೊತೆಯಾಟ ನೀಡಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಪ್ರತಿಯಾಗಿ ಆಡಿದ ಆಸ್ಟ್ರೇಲಿಯಾ ಕೇವಲ 127 ರನ್ಗಳಿಗೆ ಆಲೌಟ್ ಆಯಿತು.
ನವೀನ್-ಉಲ್-ಹಕ್ ಮೊದಲ ಓವರ್ನಲ್ಲಿಯೇ ಟ್ರಾವಿಸ್ ಹೆಡ್ ಅವರನ್ನು ಡಕ್ ಔಟ್ ಮಾಡುವ ಮೂಲಕ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಫ್ಘಾನಿಸ್ತಾನವು ಆ ಬಳಿಕ ಹಿಂತಿರುಗಿ ನೋಡಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಅರ್ಧಶತಕ ಗಳಿಸಿದರೂ ಅಫ್ಘಾನಿಸ್ತಾನವು ನಿಯಮಿತವಾಗಿ ವಿಕೆಟ್ಗಳನ್ನು ಪಡೆಯುತ್ತಲೇ ಗೆಲುವು ಸಾಧಿಸಿತು.
ಹಾಡಿಗೆ ಕುಣಿದು ಸಂಭ್ರಮ
ಐತಿಹಾಸಿಕ ಗೆಲುವಿನ ಕ್ಷಣವು ಆಟಗಾರರ ವಿಶೇಷ ಆಚರಣೆಗೆ ಪ್ರೇರಣೆ ನೀಡಿತು. ಅಫ್ಘಾನಿಸ್ತಾನದ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ತಮ್ಮ ಪ್ರಸಿದ್ಧ ಗೆಲುವನ್ನು ವಿಭಿನ್ನ ಶೈಲಿಯಲ್ಲಿ ಆಚರಿಸಿದರು. ಪಂದ್ಯದ ನಂತರ ಆಟಗಾರರು ತಂಡದ ಬಸ್ನಲ್ಲಿ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಂಡದ ಸದಸ್ಯರು ತಮ್ಮ ತರಬೇತುದಾರ ಡ್ವೇನ್ ಬ್ರಾವೋ ಅವರ ಅಪ್ರತಿಮ ಹಾಡಾದ ‘ಚಾಂಪಿಯನ್’ ಗೆ ನೃತ್ಯ ಮಾಡಿದರು. ಈ ಅದ್ಭುತ ಆಚರಣೆಯ ವೀಡಿಯೊವನ್ನು ಮೊದಲು ಅಫ್ಘಾನಿಸ್ತಾನದ ಆಲ್ರೌಂಡರ್ ಮೊಹಮ್ಮದ್ ನಬಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: T20 world Cup 2024 : ವೆಸ್ಟ್ ಇಂಡೀಸ್ನಲ್ಲೂ ಮನೆಯೂಟ ಮಾಡುತ್ತಿರುವ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ!
ಸೆಮಿಫೈನಲ್ನಲ್ಲಿ ಸ್ಥಾನ ಪಡೆಯಲು ಅಫ್ಘಾನಿಸ್ತಾನ ಈಗ ಬಾಂಗ್ಲಾದೇಶವನ್ನು ಸೋಲಿಸಬೇಕಾಗಿದೆ. ಒಂದು ವೇಳೆ ಭಾರತ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ ರಶೀದ್ ಖಾನ್ ನೇತೃತ್ವದ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.