Site icon Vistara News

T20 World Cup 2024 : ವೆಸ್ಟ್​ ಇಂಡೀಸ್​​ನಲ್ಲಿ ಹಲಾಲ್​ ಮಾಂಸದೂಟ ಸಿಗದ್ದಕ್ಕೆ ತಾವೇ ಅಡುಗೆ ಮಾಡಿಕೊಳ್ಳುತ್ತಿರುವ ಅಫಘಾನಿಸ್ತಾನದ ಕ್ರಿಕೆಟಿಗರು !

T20 World Cup 2024

ಬೆಂಗಳೂರು: ಟಿ20 ವಿಶ್ವ ಕಪ್​ ನಡೆಯುತ್ತಿರುವ (T20 World Cup 2024) ವೆಸ್ಟ್ ಇಂಡೀಸ್​ನ ಬಾರ್ಬಡೋಸ್​​ನಲ್ಲಿ ತಾವು ತಂಗಿರುವ ಹೋಟೆಲ್​ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲದ ಕಾರಣ ಅಫ್ಘಾನಿಸ್ತಾನದ ಆಟಗಾರರು ತಾವೇ ಅಡುಗೆ ಮಾಡಿಕೊಳ್ಳುವಂತಾಗಿದೆ. ಇಸ್ಲಾಂ ಅನುಯಾಯಿಗಳ ಆಹಾರದ ಅವಶ್ಯಕತೆಗಳಲ್ಲಿ ಕಡ್ಡಾಯ ಅಂಶವಾದ ಹಲಾಲ್ ಮಾಂಸದ ಅನುಪಸ್ಥಿತಿಯು ಅವರಿಗೆ ಸಮಸ್ಯೆ ಮಾಡಿದೆ. ಸ್ವತಃ ಅಡುಗೆ ಮಾಡುವುದು ಅಥವಾ ಹೊರಗೆ ಹೋಗಿ ತಿನ್ನುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲದಂತಾಗಿದೆ. ಭಾರತದಲ್ಲಿ ನೀಡಲಾಗುವ ಅದ್ಭುತ ಆತಿಥ್ಯಕ್ಕೆ ಒಗ್ಗಿಕೊಂಡಿದ್ದ ಅಫ್ಘಾನಿಸ್ತಾನ ತಂಡವು ಕೆರಿಬಿಯನ್ ದ್ವೀಪದಲ್ಲಿ ವಿಭಿನ್ನ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ 2023 ರಲ್ಲಿ ಅದ್ಭುತ ಆತಿಥ್ಯವನ್ನು ಅನುಭವಿಸಿದ್ದ ನಂತರ, ಅಫ್ಘಾನಿಸ್ತಾನವು 2024 ರ ಟಿ 20 ವಿಶ್ವಕಪ್​ಗಾಗಿ ವೆಸ್ಟ್ ಇಂಡೀಸ್​ಗೆ ಹೋಗಿದೆ. ಆದಾಗ್ಯೂ, ಬ್ರಿಜ್​ಟೌನ್​ ಹೋಟೆಲ್​ನಲ್ಲಿ ಲಭ್ಯವಿರುವ ಮಾಂಸವು ಹಲಾಲ್ ಹೌದೋ ಅಲ್ಲವೋ ಎಂಬುದರ ಬಗ್ಗೆ ಖಾತರಿ ಇಲ್ಲ. ಹಲಾಲ್ ಮಾಂಸವು ಕೆರಿಬಿಯನ್ ದ್ವೀಪದಲ್ಲಿ ಲಭ್ಯವಿದೆ, ಆದರೆ ಎಲ್ಲಾ ಹೋಟೆಲ್​​ಗಳು ಮತ್ತು ರೆಸ್ಟೋರೆಂಟ್​ಗಳು ತಮ್ಮ ಮೆನುವಿನಲ್ಲಿ ಹಲಾಲ್​ ಹೊಂದಿಲ್ಲ.

ನಾವು ಉಳಿದಿರುವ ಹೋಟೆಲ್​​ನಲ್ಲಿ ಹಲಾಲ್ ಮಾಂಸ ಲಭ್ಯವಿಲ್ಲ. ಕೆಲವೊಮ್ಮೆ ನಾವು ಸ್ವಂತ ಅಡುಗೆ ಮಾಡುತ್ತೇವೆ. ಅಥವಾ ನಾವು ಹೊರಗೆ ಹೋಗುತ್ತೇವೆ. ಭಾರತದಲ್ಲಿ ನಡೆದ ಕಳೆದ ವಿಶ್ವಕಪ್ನಲ್ಲಿ ಎಲ್ಲವೂ ಪರಿಪೂರ್ಣವಾಗಿತ್ತು. ಹಲಾಲ್ ಮಾಂಸ ಇಲ್ಲಿ ಒಂದು ಸಮಸ್ಯೆಯಾಗಿದೆ ಎಂದು ಅಫಘಾನಿಸ್ತಾನದ ಆಟಗಾರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Gautam Gambhir: ಮುಖ್ಯ ಕೋಚ್ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು?

ನಾವು ಸೇಂಟ್ ಲೂಸಿಯಾದದ ಹೋಟೆಲ್​ನಲ್ಲಿ ಹಲಾಲ್​ ತಿಂದಿದ್ದೇವೆ. ಆದರೆ ಅದು ಎಲ್ಲಾ ಸ್ಥಳಗಳಲ್ಲಿಲ್ಲ. ಸ್ನೇಹಿತರೊಬ್ಬರು ಇದನ್ನು ನಮಗಾಗಿ ವ್ಯವಸ್ಥೆ ಮಾಡಿದರು. ನಾವು ಸ್ವಂತವಾಗಿ ಅಡುಗೆ ಮಾಡಿದೆವು” ಎಂದು ಆಟಗಾರರೊಬ್ಬರು ತಿಳಿಸಿದ್ದಾರೆ.

ಟಿ 20 ವಿಶ್ವಕಪ್ 2024 ರಲ್ಲಿ ಸೂಪರ್ 8 ರ ವೇಳಾಪಟ್ಟಿಯು ಸಾಕಷ್ಟು ತೀವ್ರವಾಗಿದೆ. ತಂಡಗಳು ಮೂರು ವಿಭಿನ್ನ ಪ್ರಾಂತ್ಯಗಳಲ್ಲಿ ಮೂರು ಪಂದ್ಯಗಳನ್ನು ಆಡುತ್ತಿವೆ. ಗೆಲ್ಲಲೇಬೇಕಾದ ಪಂದ್ಯಗಳನ್ನು ಒಂದು ದಿನದ ಪ್ರಯಾಣ ನಂತರದ ಎದುರಿಸುವ ಪರಿಸ್ಥಿತಿ ಇದೆ. ಈ ವೇಳಾಪಟ್ಟಿಯು ತಂಡಗಳ ಸಿದ್ಧತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅಫ್ಘಾನಿಸ್ತಾನ ತಂಡದ ಮತ್ತೊಬ್ಬ ಸದಸ್ಯ ಒಪ್ಪಿಕೊಂಡಿದ್ದಾರೆ.

“ವಿಮಾನ ಮತ್ತು ತರಬೇತಿ ಸಮಯ ಬಗ್ಗೆ ಅನಿಶ್ಚಿತತೆ ಇದೆ. ಕೊನೆಯ ಕ್ಷಣದಲ್ಲಿ ನಮಗೆ ವಿಷಯ ತಿಳಿಸಲಾಗುತ್ತದೆ. ಬೇರೆಡೆಗಿಂತ ಕೆರಿಬಿಯನ್​ನಲ್ಲಿ ದೊಡ್ಡದಾದ ವ್ಯವಸ್ಥಾಪನಾ ಸವಾಲುಗಳಿವೆ, ಸಂಘಟಕರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ” ಎಂದು ಅವರು ಹೇಳಿದರು.

ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆದ ಸೂಪರ್ 8 ರ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಭಾರತ ವಿರುದ್ಧ 47 ರನ್​ಗಳಿಂದ ಸೋತಿದೆ. ಜೂನ್ 23ರಂದು ಭಾನುವಾರ ಅಪಘಾನಿಸ್ತಾನ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Exit mobile version