Site icon Vistara News

T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

T20 world cup 2024

ಆಂಟಿಗುವಾ: ಸಾಂಘಿಕ ಪ್ರದರ್ಶನ ನೀಡಿದ ಭಾರತ ತಂಡ ಟಿ20 ವಿಶ್ವ ಕಪ್ (T20 World Cup 2024)​ ಸೂಪರ್ 8 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ 50 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಈ ಪ್ರಮುಖ ಹಂತದಲ್ಲಿ ಸತತ ಎರಡನೇ ಗೆಲುವು ತನ್ನದಾಗಿಸಿಕೊಂಡಿದ್ದು ಸೆಮಿಫೈನಲ್ ಪ್ರವೇಶ ಬಹುತೇಕ ನಿಶ್ಚಿತವಾಗಿದೆ. ಭಾರತ ತಂಡ ಈಗ ಎ ಗುಂಪಿನ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದೆ. 27 ಎಸೆತಗಳಲ್ಲಿ ಅರ್ಧಶತಕ (50 ರನ್​) ಬಾರಿಸಿದ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ 3 ವಿಕೆಟ್​ ಕಬಳಿಸಿದ ಕುಲ್ದೀಪ್ ಯಾದವ್​ ಗೆಲುವಿನ ರೂವಾರಿಗಳೆನಿಸಿಕೊಂಡರು.

ಆಂಟಿಗುವಾದ ವಿವಿಎನ್​ ರಿಚರ್ಡ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಆಹ್ವಾನ ಪಡೆದು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 196 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ ನಷ್ಟಕ್ಕೆ 146 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡದ ಗೆಲುವಿನ ಅಭಿಯಾನ ಮುಂದುವರಿಯಿತು. ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ಭರ್ಜರಿ ರನ್​ ಬಾರಿಸುವ ಜತೆಗೆ ಸಂಘಟಿತ ಬೌಲಿಂಗ್ ನಡೆಸಿದ ಭಾರತ ಅರ್ಹವಾಗಿ ಗೆಲುವು ದಾಖಲಿಸಿತು.

ಪಾಂಡ್ಯ ಅಬ್ಬರದ ಬ್ಯಾಟಿಂಗ್​

ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ 11 ಎಸೆತಕ್ಕೆ 23 ರನ್ (3 ಫೋರ್​, 1 ಸಿಕ್ಸರ್​) ಬಾರಿಸಿದರೆ ವಿರಾಟ್​ ಕೊಹ್ಲಿ 27 ಎಸೆತಕ್ಕೆ 37 ರನ್ (1 ಫೋರ್​, 3 ಸಿಕ್ಸರ್​)​ ಕೊಡುಗೆ ಕೊಟ್ಟರು. ಆದರೆ, 39 ರನ್​ಗಳಿಗೆ ಮೊದಲ ವಿಕೆಟ್​ ನಷ್ಟವಾದ ಕಾರಣ ಭಾರತದ ಬ್ಯಾಟಿಂಗ್​ ಮೇಲೆ ಒತ್ತಡ ಬಿತ್ತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್ ಪಂತ್ ಮತ್ತೊಮ್ಮೆ ಅಬ್ಬರಿಸಿ 24 ಎಸೆತಗಳಿಗೆ 36 ರನ್ ಕೊಡುಗೆ ಕೊಟ್ಟರು. ಅವರ ಇನಿಂಗ್ಸ್​​ನಲ್ಲಿ 4 ಫೋರ್ ಹಾಗೂ 2 ಸಿಕ್ಸರ್​ಗಳಿದ್ದವು. ಆದರೆ ವಿರಾಟ್ ಔಟಾದ ಬಳಿಕ ಆಡಲು ಬಂದ ಸೂರ್ಯಕುಮಾರ್ ಯಾದವ್​ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿ ಸಿಡಿಯುವ ವಿಶ್ವಾಸ ಮೂಡಿಸಿದರೂ ನಂತರದ ಎಸೆತದಲ್ಲೇ ಔಟಾದರು.

ಇದನ್ನೂ ಓದಿ: T20 World Cup 2024 : ವೆಸ್ಟ್​ ಇಂಡೀಸ್​​ನಲ್ಲಿ ಹಲಾಲ್​ ಮಾಂಸದೂಟ ಸಿಗದ್ದಕ್ಕೆ ತಾವೇ ಅಡುಗೆ ಮಾಡಿಕೊಳ್ಳುತ್ತಿರುವ ಅಫಘಾನಿಸ್ತಾನದ ಕ್ರಿಕೆಟಿಗರು !

ಒಂದು ಹಂತದಲ್ಲಿ ಭಾರತ ತಂಡ 108 ರನ್​ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದುಬೆ 24 ಎಸೆತಕ್ಕೆ 34 ರನ್ ಗಳಿಸಿದರೆ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮೂಲಕ 50 ರನ್​ ಕೊಡುಗೆ ಕೊಟ್ಟರು. ಇವರಿಬ್ಬರ ಆಟದಿಂದ ಭಾರತದ ಬ್ಯಾಟಿಂಗ್ ಶಕ್ತಿ ಚೇತರಿಸಿಕೊಂಡು ಬೌಲಿಂಗ್ ಸ್ನೇಹಿ ಈ ಸ್ಟೇಡಿಯಮ್​ನಲ್ಲಿ ಗೆಲುವಿನ ಮೊತ್ತನ್ನೇ ಪರಿಸಿತು.

ಕುಲ್ದೀಪ್​ ಭರ್ಜರಿ ಬೌಲಿಂಗ್​

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಬಾಂಗ್ಲಾದೇಶ ತಂಡ ಭರ್ಜರಿ ವಿಶ್ವಾಸ ವ್ಯಕ್ತಪಡಿಸಿತು. ಅದರೆ, ಭಾರತೀಯ ಬೌಲರ್​ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಹಾರ್ದಿಕ್ ಪಾಂಡ್ಯ ಆರಂಭಿಕ ಬ್ಯಾಟರ್​ ಲಿಟನ್ ದಾಸ್ ಅವರನ್ನು 13 ರನ್ ಗೆ ಔಟ್ ಮಾಡಿದರು. ಆದರೆ, ತಂಜಿದ್ ಹಸನ್​ (29 ರನ್​) ಹಾಗೂ ನಜ್ಮುಲ್ ಹೊಸೈನ್​ (40 ರನ್​) ಇನಿಂಗ್ಸ್​ ಕಟ್ಟಲು ಆರಂಭಿಸಿದರು. ಈ ವೇಳೆ ದಾಳಿಗಿಳಿದ ಕುಲ್ದೀಪ್ ಯಾದವ್​ ತಂಜಿದ್​, ತೌಹಿದ್ ಹೃದೋಯ್​ (4 ರನ್​) , ಹಾಗೂ ಶಕಿಬ್ ಅಲ್​ ಹಸನ್​ (11 ರನ್​) ವಿಕೆಟ್​ ಕಿತ್ತರು. ಈ ವೇಳೆ ಬಾಂಗ್ಲಾ ತಂಡದ ಬಲ ಕುಸಿಯಿತು. ಭಾರತದ ಬೌಲರ್​ಗಳಿಗೆ ಬೆದರಿಕೆ ಹುಟ್ಟಿಸಿದ್ದ ನಜ್ಮುಲ್ ಬುಮ್ರಾ ಎಸೆತಕ್ಕೆ ಔಟಾದರು. ಜೇಕರ್ ಅಲಿ ಅರ್ಶ್​ದೀಪ್​ಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಆಡಲು ಬಂದ ರಶಿದ್ ಹೊಸೈನ್​ 10 ಎಸೆತಕ್ಕೆ 24 ರನ್ ಬಾರಿಸಿ ಬುಮ್ರಾಗೆ ವಿಕೆಟ್​ ಕೊಟ್ಟರು. ಮಹಮ್ಮದುಲ್ಲಾ 13 ರನ್​ಗಳಿಗೆ ತಮ್ಮ ಆಟ ಮುಗಿಸಿದರು.

ಭಾರತ ಪರ ಕುಲ್ದೀಪ್​ 3 ವಿಕೆಟ್​, ಬುಮ್ರಾ 2 ವಿಕೆಟ್​, ಅರ್ಶ್​ದೀಪ್​ 2 ವಿಕೆಟ್ ಹಾಗೂ ಪಾಂಡ್ಯ 1 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version