Site icon Vistara News

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

T20 World Cup 2024

ಸನತ್ ರೈ, ಬೆಂಗಳೂರು

2024ರ ಜೂನ್ 29. ಭಾರತೀಯ ಕಾಲಮಾನ ರಾತ್ರಿ 8 ಗಂಟೆ., ಟಿ-20 ವಿಶ್ವಕಪ್ ಟೂರ್ನಿಯ (T20 World Cup 2024) ಅಶ್ವಮೇಧ ಯಾಗದ ಕೊನೆಯ ಪರ್ವ. ವಿಜಯಲಕ್ಷ್ಮಿ ಸ್ವಯಂವರದ ತಹತಹಿಕೆ ಭಾರತೀಯ ಮಕ್ಕಳ ಹೃದಯದ ಭಾವಕೋಶದಲ್ಲಿ ಅವ್ಯಾಹತವಾಗಿ ಪುಟಿಯುತ್ತಲೇ ಇತ್ತು.. ಸತತ ಗೆಲುವಿನ ನಾಗಾಲೋಟದಲ್ಲಿದ್ದ ವಿಶ್ವದ ಬಲಿಷ್ಠ ಎರಡು ತಂಡಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದವು. ನಾಲ್ಕನೇ ಬಾರಿ ಚಂಚಲೆ ಚೆಲುವೆಯನ್ನು ಒಲಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು ಭಾರತದ ರೋಹಿತ್ ಶರ್ಮಾ ಹುಡುಗರು.

ಇನ್ನೊಂದೆಡೆ ಐಸಿಸಿ ಅಖಾಡದಲ್ಲಿ ಯಾವತ್ತೂ ಭಗ್ನ ಪ್ರೇಮಿಗಳಾಗಿದ್ದ ದಕ್ಷಿಣ ಆಫ್ರಿಕಾ ಹುಡುಗರು ಇದೇ ಮೊದಲ ಬಾರಿ ವಿಶ್ವ ಸುಂದರಿಯ ಸ್ವಯಂವರದ ಮಂಟಪದ ಕೊನೆಯ ಮೆಟ್ಟಿಲು ಹತ್ತಿ ನಿಂತಿದ್ದರು. ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

ಹೌದು, ಈ ಬಾರಿ ಟಿ-20 ವಿಶ್ವಕಪ್ ಟ್ರೋಫಿಗೆ ಗೆಲುವಿನ ಮಾಲೆ ಹಾಕಿ ಭಾರತಾಂಬೆಯ ಪಾದದಡಿಯಲ್ಲಿಡಲು ರೋಹಿತ್ ಹುಡುಗರು ಭೀಷ್ಮ ಶಪಥ ಮಾಡಿದ್ದರು. ಸಮರ್ಥ ನಾಯಕ ರೋಹಿತ್, ಗುರು ದ್ರಾವಿಡಾಚಾರ್ಯರಿಗೆ ಗೆಲುವೊಂದೇ ಉಡುಗೊರೆ ಅನ್ನುವುದು ತಂಡದ ಎಲ್ಲಾ ಆಟಗಾರರ ಅಂಬೋಣವಾಗಿತ್ತು.

ಹತ್ತು ವರ್ಷಗಳ ಹಿಂದೆ ಸ್ವಯಂವರ ಮಂಟಪದಿಂದ ಹೊರದಬ್ಬಿದ್ದ ಚಂಚಲ ಚೆಲುವೆ, ಎರಡು ಬಾರಿ ಮದರಂಗಿ ಶಾಸ್ತ್ರದ ವೇಳೆಯಲ್ಲೇ ಕೈಕೊಟ್ಟಿದ್ದಳು (ಸೆಮಿಫೈನಲ್ ನಿರ್ಣಾಯಕ ಘಟ್ಟದಲ್ಲಿ). ಆದ್ರೆ ಈ ಬಾರಿ ಗುರು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಹುಡುಗರು ಪಕ್ಕಾ ರಣತಂತ್ರ ಹಣೆದು ಅಂತಿಮ ಅಂಕಣಕ್ಕೆ ಕಂಕಣ ಕಟ್ಟಿಕೊಂಡು ಇಳಿದಿದ್ದರು.

ಬ್ಯಾಟಿಂಗ್ ಆಯ್ಕೆ

ಮಹತ್ವದ ಟಾಸ್ ಗೆದ್ದ ರೋಹಿತ್ ಹಿಂದು ಮುಂದು ಯೋಚನೆ ಮಾಡದೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಯಾಕಂದ್ರೆ ಬ್ಯಾಟಿಂಗ್ ಶಕ್ತಿ ಮತ್ತು ಬೌಲಿಂಗ್ ಯುಕ್ತಿಯ ಮೇಲೆ ರೋಹಿತ್ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ಮಿನುಗು ತಾರೆಯಂತೆ ಹೊಳೆಯುವ ಚೆಂದುಳ್ಳಿ ಚೆಲುವೆಯ ಕೊರಳಿಗೆ ಮಾಲೆ ಹಾಕಲು ಗುರು ದ್ರಾವಿಡ್ ಕೊಟ್ಟ ದಾರದಲ್ಲಿ ಪುಷ್ಪಮಾಲೆಗಳ ಪೋಣಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶುರು ಮಾಡಿದ್ರು.

ಆರಂಭದಲ್ಲೇ ವಿರಾಟ್ ಕೊಹ್ಲಿ ಮಲ್ಲಿಗೆಯ ಕಂಪನ್ನು ಪಸರಿಸಿದ್ರು. ಒಂದರೆಗಳಿಗೆಯೂ ಮೈಮರೆಯಲಿಲ್ಲ. ತಾಳ್ಮೆ, ಏಕಾಗ್ರತೆಯೊಂದಿಗೆ ಘಮಘಮಿಸುವ ಬ್ಯಾಟಿಂಗ್ ವೈಖರಿಗೆ ಅಭಿಮಾನಿಗಳು ಕೂಡ ಮೈಮರೆತು ಕುಣಿದಾಡಿದರು. ಆದ್ರೆ ದುರದೃಷ್ಟವಶಾತ್ ಗುಲಾಬಿ ಹೂವಿನಂತೆ ಆಕರ್ಷಿಸುವ ರೋಹಿತ್ ಬ್ಯಾಟಿಂಗ್ ಅಂತಿಮ ಹಣಾಹಣಿಯಲ್ಲಿ ಹೆಚ್ಚು ಸುವಾಸನೆ ಬೀರಲಿಲ್ಲ. ಕೇಶವ್ ಮಹಾರಾಜ್ ಎಂಬ ಹರಿಣಪಾಳೆಯದ ಪತಂಗವೊಂದು ಗುಲಾಬಿಯ ಮಕರಂದವನ್ನು ಹೀರುತ್ತಿದ್ದಂತೆ ರೋಹಿತ್ ಪೋಣಿಸುವಿಕೆ ಮುಗಿದಂತಾಯ್ತು. ಹಿಟ್ ಮ್ಯಾನ್, ಗೆಲುವಿನ ಮಾಲೆಗೆ 9 (ರನ್) ಗುಲಾಬಿ ಪೋಣಿಸಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದಾಗ ಇಡೀ ಓವಲ್ ಅಂಗಳ ಒಂದು ಕ್ಷಣ ಸ್ತಬ್ದಗೊಂಡಿತ್ತು. ಮರು ಕ್ಷಣದಲ್ಲೇ (ಕೇಶವ್ ಮಹಾರಾಜ್) ಪತಂಗದ ಚೆಲ್ಲಾಟಕ್ಕೆ ಶೂನ್ಯ ಸುತ್ತಿದ ರಿಷಬ್ ಪಂತ್ ಸುಗಂಧ ರಾಜನಂತೆ ಬ್ಯಾಟಿಂಗ್‍ನಲ್ಲಿ ಪರಿಮಳ ಬೀರಲಿಲ್ಲ. ಹಿಂದೆಯೇ ಕೇವಲ 3 (ರನ್) ಸೂರ್ಯಕಾಂತಿಗಳಷ್ಟೇ ಮಾಲೆಗೆ ಪೋಣಿಸಿದ ಸೂರ್ಯಕುಮಾರ್ ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಿದ್ರು. ಜೇನುನೋಣದಂತೆ ದಾಳಿ ಮಾಡಿದ ರಬಾಡ ಸ್ಕೈ ವಿಕೆಟ್ ಉರುಳಿಸಿ ಟೀಮ್ ಇಂಡಿಯಾದ ಅಭಿಮಾನಿಗಳ ಹೃದಯವನ್ನು ಘಾಸಿ ಮಾಡಿದ್ದರು. ಹೀಗೆ, ದುಂಬಿ, ಪತಂಗ, ಜೇಣುನೋಣದ ಆಕ್ರಮಣಕ್ಕೆ ಟೀಮ್ ಇಂಡಿಯಾದ ಗೆಲುವಿನ ಮಾಲೆಗೆ ಹೂ ಪೋಣಿಸುವ ಕಾರ್ಯ ನಿಧಾನವಾಗಿ ಸಾಗುತ್ತಿತ್ತು.

ಇದನ್ನೂ ಓದಿ: Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

ಆದ್ರೂ ಮಲ್ಲಿಗೆಯ ಕಂಪಿನಂತೆ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ ಅಕ್ಸರ್ ಪಟೇಲ್ ಸಾಥ್ ನೀಡಿದ್ರು. ಲಯ ಪಡೆದುಕೊಂಡ ವಿರಾಟ್ ಕೊಹ್ಲಿ ಗೆಲುವಿನ ಹಾರಕ್ಕೆ ಮಲ್ಲಿಗೆಯನ್ನು ಪೋಣಿಸಿಕೊಂಡು ಹೋದ್ರೆ, ಇತ್ತ ಅಕ್ಸರ್ ಪಟೇಲ್ ಹೆಚ್ಚು ಸುವಾಸನೆ ಇಲ್ಲದ ಕನಕಾಂಬರ ಹೂವಿನಂತೆ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಬ್ಯಾಟ್ ಬೀಸಿದ್ರು. ವಿರಾಟನ ಮಲ್ಲಿಗೆಯ ಜೊತೆಗೆ ಅಕ್ಸರ್ ಪಟೇಲ್ ಕನಕಾಂಬರವನ್ನು ಪೋಣಿಸಿ ಗೆಲುವಿನ ಹಾರದ ಅಲಂಕಾರವನ್ನು ಹೆಚ್ಚಿಸಿದ್ರು. ಆದ್ರೆ 47 (ರನ್) ಕನಕಾಂಬರ ಹೂಗಳನ್ನು ಗೆಲುವಿನ ಹಾರಕ್ಕೆ ಸೇರಿಸಿ ಮರಳಿ ಪೆವಿಲಿಯನ್ ಸೇರಿಕೊಂಡ್ರು.

ಇನ್ನೊಂದೆಡೆ ವಿರಾಟನ ಮಲ್ಲಿಗೆಯ ಸುವಾಸನೆ ಜೊತೆ ಸೇವಂತಿ ಹೂವಿನಂತೆ ಘಮ್ಮಂತ ಪಸರಿಸಿದ್ದು ಶಿವಂ ದುಬೆ. ಅದರಲ್ಲೂ ಕಿಂಗ್ ಕೊಹ್ಲಿ, ಬೆಳಂದಿಗಳ ಚಂದಿರನ ಬೆಳಕಿನಲ್ಲಿ ಫಳಫಳನೆ ಹೊಳೆವ ಮಲ್ಲಿಗೆಯಂತೆ ಕಂಗೊಳಿಸುತ್ತಿದ್ದರು. ಅಷ್ಟರಲ್ಲೇ ಜಾನ್ಸೆನ್ ಎಂಬ ದುಂಬಿ ಮಲ್ಲಿಗೆ ಪೋಣಿಸುತ್ತಿದ್ದ ವಿರಾಟನ ಏಕಾಗ್ರತೆಗೆ ಭಂಗವನ್ನುಂಟು ಮಾಡಿತು. ಅಷ್ಟೊತ್ತಿಗಾಗಲೇ 76 (ರನ್) ಮಲ್ಲಿಗೆ ಹೂಗಳು ಭಾರತದ ಗೆಲುವಿನ ಹಾರದಲ್ಲಿ ಸೇರಿಕೊಂಡಿದ್ದವು.

ಬಳಿಕ ಸೇವಂತಿಯ (ಶಿವಂ ದುಬೆ) ಜೊತೆ ಹಾರ್ದಿಕ್ ಪಾಂಡ್ಯ ಎಂಬ ಕೆಂಡ ಸಂಪಿಗೆಯೂ ಸ್ವಯಂವರ ಮಾಲೆಗೆ ಇನ್ನಷ್ಟು ಮೆರಗು ನೀಡಿತು. 27 ಸೇವಂತಿ ಹೂ ಪೋಣಿಸಿ ಹೂ ಮಾಲೆಗೆ ಶೃಂಗಾರ ಹೆಚ್ಚಿಸಿದ ಶಿವಂ ದುಬೆಗೆ ಮಕರಂದ ಹೀರುವ ಚತುರ ಸನ್ ಬರ್ಡ ಹಕ್ಕಿಯಂತೆ ಆನ್ರಿಚ್ ನೋರ್ಟೆಜೆ ಕುಟುಕಿದ್ರು.
ಅಂತಿಮವಾಗಿ ಪಾಂಡ್ಯ ಅವರ 5* (ರನ್) ಕೆಂಡ ಸಂಪಿಗೆಯ ಜೊತೆ ಸುಂದರ ಮಾಲೆಗೆ ಕೇವಲ 2 ಜಾಜಿ ಮಲ್ಲಿಗೆ ಹೂ ಪೋಣಿಸಿದ ರವೀಂದ್ರ ಜಡೇಜಾಗೂ ಸನ್‍ಬರ್ಡ ನೊರ್ಟೆಜೆ ಅಡ್ಡಿಯನ್ನುಂಟು ಮಾಡಿದ್ರು. ಅಷ್ಟರಲ್ಲಾಗಲೇ ರೋಹಿತ್ ಹುಡುಗರು 176 ಮಾರುದ್ದದ ಹೂಮಾಲೆಯನ್ನು ತಯಾರಿಸಿ ಇಟ್ಟಿದ್ದರು.
*
ಮುಂದಿನ ಪಾರಿ ನೀಲಿ ಜೆರ್ಸಿ ಹುಡುಗರ ಬೌಲಿಂಗ್ ಪಡೆಯದ್ದಾಗಿತ್ತು. ತಮ್ಮ ಪಾಲಿನ ಪುಷ್ಪಗಳನ್ನು ಸುಮಮಾಲೆಗೆ ಪೋಣಿಸಲು ಬುಮ್ರಾ ನೇತೃತ್ವದ ಬೌಲಿಂಗ್ ಸೈನಿಕರು ಸಿದ್ಧರಾಗಿದ್ದರು.

ವಿಶ್ವ ಕ್ರಿಕೆಟ್ ಬೌಲಿಂಗ್ ನ ನಾಯಕ ಶಿರೋಮಣಿ ಜಸ್ಪ್ರಿತ್ ಬೂಮ್ರಾ ಎರಡು (ವಿಕೆಟ್) ಗೊಂಚಲು ಚೆಂಡು ಹೂಗಳನ್ನು ಕಿತ್ತುಕೊಂಡು ಕೈ ಜಾರುತ್ತಿದ್ದ ವಿಜಯ ಮಾಲೆಗೆ ಮೆರಗು ನೀಡಿದ್ರು. ಇನ್ನೊಂದೆಡೆ ಅರ್ಶಾದೀಪ್ ಸಿಂಗ್ ಕೂಡ ಎರಡು (ವಿಕೆಟ್) ಗೊಂಚಲು ತುಳಸಿದಳಗಳನ್ನು ಪೋಣಿಸಿ ಗೆಲುವಿನ ಮಾಲೆಯ ಅಂದವನ್ನು ಹೆಚ್ಚಿಸಿದ್ರು. ಹಾಗೇ ಕುಲದೀಪ್ ಯಾದವ್ ಮೂರು (ಕ್ಯಾಚ್) ಗಂಟು ಪಾರಿಜಾತ ಹೂಗಳನ್ನು ಗೆಲುವಿನ ಹಾರಕ್ಕೆ ಪೋಣಿಸಿ ಸುವಾಸನೆಯನ್ನು ಇಮ್ಮಡಿಗೊಳಿಸಿದ್ರು. ಮತ್ತೊಂದೆಡೆ ಬ್ಯಾಟಿಂಗ್ ನಲ್ಲಿ ಶೂನ್ಯ ಸುತ್ತಿದ್ದ ರಿಷಬ್ ಪಂತ್ ಕೂಡ ಎರಡು (ಕ್ಯಾಚ್) ಸುಗಂಧರಾಜ ಹೂ ಸೇರಿಸಿ ಪರಿಮಳ ಹೆಚ್ಚಿಸಿದ್ರು. ಜೊತೆಗೆ ಅಕ್ಸರ್ ಪಟೇಲ್ 1 (ವಿಕೆಟ್) ಗಂಟು ಕನಕಾಂಬರ ಹೂ ಪೋಣಿಸಿ ದೃಷ್ಟಿ ಬೊಟ್ಟು ಇಟ್ರು. ಮಗದೊಂದು ಕಡೆ ಕಳೆಗುಂದಿದ್ದ ಸೂರ್ಯಕಾಂತಿ ಪುಷ್ಪ, ಉಗ್ರ ಸೂರ್ಯನ ಪ್ರಖರತೆಗೆ ನಾಚಿನೀರಾಗಿ ಹೋಯ್ತು. ಸೂರ್ಯನ ತೇಜೋಪುಂಜದ ಪ್ರಭಾವಳಿಗೆ ಸೂರ್ಯಕಾಂತಿ ಕೂಡ ಸದ್ದಿಲ್ಲದೆ ಬಂದು ಗೆಲುವಿನ ಹಾರ ಸೇರಿಕೊಂಡಿತ್ತು.

ಸೂರ್ಯಕುಮಾರ್ ಕ್ಯಾಚ್​

ಗೆಲುವಿನ ಹಾರ ಕಟ್ಟುವಲ್ಲಿ ಲಯ ತಪ್ಪಿದ್ದ ರೋಹಿತ್ ಹುಡುಗರನ್ನು ಸುಗ್ಗಿಯ ಸಂಕ್ರಾಂತಿ ಮಾಡುವಂತೆ ಮಾಡಿದ್ದು ಕೂಡ ಸೂರ್ಯನೇ. ಚಿಗರೆಯಂತೆ ಜಿಗಿದು ಸಮಯ ಪ್ರಜ್ಞೆಯಿಂದ ಸೂರ್ಯಕಾಂತಿಯನ್ನು (ಕ್ಯಾಚ್) ಹಿಡಿದು ಅಂದವಾದ ಮಾಲೆಗೆ ಹೊಳಪು ನೀಡಿದ್ರು. ಹೂವಿನ ಮಾಲೆಯ ಅಂದವನ್ನು ಹೆಚ್ಚಿಸಲು ಪಾಂಡ್ಯ ಮತ್ತೆ ಮೂರು (ವಿಕೆಟ್) ಕೆಂಡಸಂಪಿಗೆಯನ್ನು ಸೇರಿಸಿದ್ರು. ಕೊನೆಗೆ ಗೆಲುವಿನ ಮಾಲೆಗೆ ದಾರ ಕೊಟ್ಟಿದ್ದ ಗುರು ರಾಹುಲ್ ದ್ರಾವಿಡ್ ಆಚಾರ್ಯ ಬ್ರಹ್ಮಕಮಲವನ್ನು ಪೋಣಿಸಿ ಫಿನಿಶಿಂಗ್ ಟಚ್ ನೀಡಿಬಿಟ್ಟರು.

ಅಂತಿಮವಾಗಿ ಬಗೆ ಬಗೆಯ ಅಂದ ಚೆಂದದ ಸುಂದರ ಹೂ ಮಾಲೆಯನ್ನು ಚಂಚಲ ಚೆಲುವೆಯ ಕೊರಳಿಗೆ ಟೀಮ್ ಇಂಡಿಯಾ ಹುಡುಗರು ಹಾಕಿ ನಲಿದರು. ವೈಯ್ಯಾರದಿಂದ ಬೀಗುತ್ತಿದ್ದ ಐಸಿಸಿ ಟಿ-20ಯ ಪಟ್ಟದರಸಿಯನ್ನು ಒಲಿಸಿಕೊಂಡಾಗಿನ ಕ್ಷಣ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತದೆ.

ಗೆಲುವಿನ ಸಂಭ್ರಮ.. ಸಡಗರ.. ಕಣ್ಣೀರು, ಭಾವುಕ, ಆನಂದಭಾಷ್ಪ, ಉತ್ಸಾಹ, ಉನ್ಮಾದ, ವಿದಾಯ, ಹತಾಶೆ, ಸೋಲು, ಬೇಸರ.. ಅಬ್ಬಾಬ್ಬಾ.. ಬಣ್ಣಿಸಲು ಪದಗಳಿಲ್ಲ

Exit mobile version