Site icon Vistara News

T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

T20 World Cup 2024

ಬೆಂಗಳೂರು: ಜೂನ್​ನಲ್ಲಿ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದ ಟಿ 20 ವಿಶ್ವಕಪ್ 2024 ರ (T20 World Cup 2024) ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಗೆಲುವಿನ ಕಡೆಗೆ ಮುನ್ನುಗ್ಗುತ್ತಿದ್ದಾಗ ತಮ್ಮ ಮನಸ್ಸಿನಲ್ಲಿ ಆದ ಭಾವನೆಗಳನ್ನು ಅವರು ವಿವರಿಸಿದ್ದಾರೆ. ಆ ವೇಳೆ ತಮ್ಮ ಮನಸ್ಸು ಸಂಪೂರ್ಣವಾಗಿ ನಿಶ್ಚಲವಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

15ನೇ ಓವರ್​ನಲ್ಲಿ ಹೆನ್ರಿಕ್ ಕ್ಲಾಸೆನ್, ಅಕ್ಷರ್ ಪಟೇಲ್ ಅವರ ಒಂದೇ ಓವರ್​ನಲ್ಲಿ 24 ರನ್ ಬಾರಿಸಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಗೆಲುವಿನತ್ತ ಸಾಗುತ್ತಿತ್ತು. ಮೊದಲ ವಿಶ್ವಕಪ್ ಗೆಲ್ಲಲು 177 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಕೊನೆಯ ಐದು ಓವರ್​ಗಳಲ್ಲಿ ಕೇವಲ 30 ರನ್​ ಅವಶ್ಯಕತೆಯಿತ್ತು. ಕ್ಲಾಸೆನ್ 22 ಎಸೆತಗಳಲ್ಲಿ 49 ರನ್ ಗಳಿಸಿದರೆ, ಮಿಲ್ಲರ್ 7 ಎಸೆತಗಳಲ್ಲಿ 14 ರನ್ ಗಳಿಸಿ ಇದ್ದರು. ದಕ್ಷಿಣ ಆಫ್ರಿಕಾ ಆರು ವಿಕೆಟ್​ ಕೂಡ ಹೊಂದಿತ್ತು. ಟಿ 20 ಕ್ರಿಕೆಟ್​ನ ಅತ್ಯಂತ ಅಪಾಯಕಾರಿ ಬ್ಯಾಟರ್​ಗಳು ಅವರು.

ಇಂಥ ಪರಿಸ್ಥಿತಿಯಲ್ಲಿ ಏನಾಗುತ್ತಿದೆ ಎಂದು ಗೊತ್ತಾಗಿರಲಿಲ್ಲ. ತಮ್ಮ ತಂಡದ ಆಟಗಾರರಿಗೆ ತಮ್ಮ ಸಂಯಮವನ್ನು ಕಾಪಾಡಿಕೊಳ್ಳುವಂತೆ ಕೇಳಿಕೊಳ್ಳುವುದು ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಪ್ರಶಸ್ತಿಯ ಆಕಾಂಕ್ಷೆಗಳು ಹೊತ್ತು ಕಳೆದಂತೆ ಕ್ಷೀಣಿಸಿತ್ತು ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ

ನಾನು ಸಂಪೂರ್ಣವಾಗಿ ಸ್ತಬ್ಧನಾಗಿದ್ದೆ. ನಾನು ಮುಂದೆ ಏನಾಗುತ್ತದೆ ಎಂದು ಯೋಚಿಸಲೂ ಸಮಯ ಇರಲಿಲ್ಲ. ಈ ವಾಸ್ತವದಲ್ಲೇ ಉಳಿಯುವುದು ಮತ್ತು ಕೆಲಸದ ಮೇಲೆ ಗಮನ ಹರಿಸುವುದು ಗುರಿಯಾಗಿತ್ತು. ನಾವೆಲ್ಲರೂ ಶಾಂತವಾಗಿದ್ದು ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವುದು ಬಹಳ ಮುಖ್ಯವಾಗಿತ್ತು”ಎಂದು ಡಲ್ಲಾಸ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ: Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದ ರೋಹಿತ್​​ ಒತ್ತಡದಲ್ಲಿ ಭಯಭೀತರಾಗದೆ ಕಾರ್ಯಯೋಜನೆ ಮೇಲೆ ಗಮನ ಹರಿಸಿದ್ದಕ್ಕಾಗಿ ತಮ್ಮ ತಂಡವನ್ನು ಶ್ಲಾಘಿಸಿದರು.

ದಕ್ಷಿಣ ಆಫ್ರಿಕಾಕ್ಕೆ 30 ಎಸೆತಗಳಲ್ಲಿ 30 ರನ್​ಗಳ ಅಗತ್ಯವಿದ್ದಾಗ ನಾವು ತೀವ್ರ ಒತ್ತಡದಲ್ಲಿದ್ದೆವು. ನಾವು ಎಸೆದ ಐದು ಓವರ್​ಗಳು ನಾವು ಎಷ್ಟು ಸಂಯಮದಿಂದ ಇದ್ದೆವು ಎಂಬುದನ್ನು ತೋರಿಸಿತು. ನಾವು ಬೇರೆ ಯಾವುದರ ಬಗ್ಗೆಯೂ ಹೆಚ್ಚು ಯೋಚಿಸದೆ ನಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿದೆವು. ನಾವು ಭಯಭೀತರಾಗಲಿಲ್ಲ; ಅದರ ಫಲಿತಾಂಶ ಸಿಕ್ಕಿತು ಎಂದು 37 ವರ್ಷದ ಆಟಗಾರ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ, ಅರ್ಶ್​ದೀಪ್​ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಕೊನೆಯ ಐದು ಓವರ್​ಗಳಲ್ಲಿ ಗಮನಾರ್ಹವಾಗಿ ಬೌಲಿಂಗ್ ಮಾಡಿ ಕೇವಲ 22 ರನ್​ ಬಿಟ್ಟುಕೊಟ್ಟು ಏಳು ರನ್​ಗಳ ಅಂತರದಿಂದ ಗೆದ್ದರು. ಇದರೊಂದಿಗೆ ಐಸಿಸಿ ಪ್ರಶಸ್ತಿಗಾಗಿ ಭಾರತದ 11 ವರ್ಷಗಳ ಕಾಯುವಿಕೆ ಕೊನೆಗೊಂಡಿತು.

Exit mobile version