Site icon Vistara News

T20 World Cup 2024 : ಗೆಲುವು ಬೋನಸ್​ ಎನ್ನುತ್ತಿರುವ ಬಾಂಗ್ಲಾವನ್ನು ಮಟ್ಟ ಹಾಕುವುದೇ ಭಾರತ?

T20 World Cup

ಬೆಂಗಳೂರು: ಭಾರತ ಕ್ರಿಕೆಟ್​ ತಂಡ ಟಿ20 ವಿಶ್ವ ಕಪ್​ 2024ರ (T20 World Cup 2024 ) ಸೂಪರ್​ 8 ಪಂದ್ಯದಲ್ಲಿ ಅಪಘಾನಿಸ್ತಾನವನ್ನು ಸೋಲಿಸಿ ಮುನ್ನುಗ್ಗಿದೆ. ತನ್ನ ಎರಡನೇ ಪಂದ್ಯದಲ್ಲಿ ಜೂನ್ 22 ರಂದು ನೆರೆಯ ಬಾಂಗ್ಲಾದೇಶವನ್ನು ಎದುರಿಸಲು ಸಿದ್ಧವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಸೆಮಿಗೆ ಪ್ರವೇಶ ಪಡೆಯಲಿದೆ. ಆದರೆ ಸೋಲು ಅವರ ಅವಕಾಶಗಳನ್ನು ಅಪಾಯಕ್ಕೆ ಸಿಲುಕಿಸಲಿದೆ.

ಬಾಂಗ್ಲಾದೇಶವು ಪಂದ್ಯಾವಳಿಯನ್ನು ಉತ್ತಮವಾಗಿ ಪ್ರಾರಂಭಿಸಿತ್ತು. ಟಿ20 ವಿಶ್ವ ಕಪ್​ ಇತಿಹಾಸದಲ್ಲಿ ಮೊದಲ ಬಾರಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಸೂಪರ್ ಎಂಟಕ್ಕೆ ಮುಂಚಿತವಾಗಿ ಮುಖ್ಯ ಕೋಚ್ ಚಂಡಿಕಾ ಹತುರುಸಿಂಘ ಅವರು, ಬಾಂಗ್ಲಾದೇಶ ಈಗಾಗಲೇ ತಮ್ಮ ಗುರಿ ಸಾಧಿಸಿದೆ. ಎರಡನೇ ಸುತ್ತಿನಲ್ಲಿ ಏನೇ ಸಂಭವಿಸಿದರೂ ಅದು ಅವರಿಗೆ ಬೋನಸ್ ಎಂದು ಹೇಳಿದ್ದಾರೆ. ಮುಖ್ಯ ತರಬೇತುದಾರರ ಇಂತಹ ಹೇಳಿಕೆಯು ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಅಂತಿಮವಾಗಿ ಬಾಂಗ್ಲಾದೇಶವು ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೂಪರ್ ಎಂಟರ ಪಂದ್ಯವನ್ನು 28 ರನ್​ಗಳಿಂದ (ಡಕ್​ವರ್ತ್​ ಲೂಯಿಸ್​ ನಿಯಮದಂತೆ) ಕಳೆದುಕೊಂಡಿತು. ನಜ್ಮುಲ್ ಶಾಂಟೊ 2024ರ ಐಸಿಸಿ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಸುತ್ತಿನಲ್ಲಿ 3 ಗೆಲುವು ಮತ್ತು 1 ಸೋಲಿನೊಂದಿಗೆ ಬಾಂಗ್ಲಾದೇಶವು ಶ್ರೀಲಂಕಾ, ನೆದರ್ಲ್ಯಾಂಡ್ಸ್ ಮತ್ತು ನೇಪಾಳದಂತಹ ತಂಡಗಳನ್ನು ಸೋಲಿಸಿ ಸೂಪರ್ 8 ರಲ್ಲಿ ಸ್ಥಾನ ಪಡೆಯಿತು.

ಆತ್ಮ ವಿಶ್ವಾಸದಲ್ಲಿ ಭಾರತ

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ವಿಶೇಷವಾಗಿ ತಂಡದ ಎಲ್ಲಾ ಬೌಲರ್​ಗಳು ಉತ್ತಮ ಫಾರ್ಮ್​ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ನಿರ್ದಯ ಬೌಲಿಂಗ್ ಮಾಡುತ್ತಿದ್ದು. ಅರ್ಶ್​ದೀಪ್ ಸಿಂಗ್ ಲಯ ಕಂಡುಕೊಂಡಿದ್ದಾರೆ. ಅವರು ನಾಲ್ಕು ಪಂದ್ಯಗಳಲ್ಲಿ 10 ವಿಕೆಟ್ ಗಳನ್ನು ಪಡೆದಿದ್ದಾರೆ. ಪಂದ್ಯಾವಳಿಯ ನಾಲ್ಕನೇ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಬ್ಯಾಟಿಂಗ್​ ವಿಚಾರಕ್ಕೆ ಬಂದಾಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಫಾರ್ಮ್​ಗೆ ಮರಳಿದ್ದಾರೆ. ಆದರೆ, ಆದರೆ ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಅವರ ಫಾರ್ಮ್ ಬಗ್ಗೆ ಕಳವಳವಿದೆ.

ಇದನ್ನೂ ಓದಿ: Mohammed Shami : ಗುಟ್ಟಾಗಿ ಮದುವೆಯಾದರೇ ಶಮಿ- ಸಾನಿಯಾ? ಮಿರ್ಜಾ ತಂದೆಯ ಸ್ಪಷ್ಟನೆ ಇಲ್ಲಿದೆ

ರೋಹಿತ್​, ಕೊಹ್ಲಿ ಮೇಲೆ ಕಣ್ಣು

ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ ಹಾಗೂ ರೋಹಿತ್​ ಮೇಲೆ ಹೆಚ್ಚಿನ ಒತ್ತಡವಿದೆ. ಅಫಘಾನಿಸ್ತಾನ ವಿರುದ್ದ ಕೊಹ್ಲಿ 24 ರನ್ ಬಾರಿಸಿದ್ದರೂ ಅದು ಅವರ ಸಾಮರ್ಥ್ಯಕ್ಕೆ ತಕ್ಕುದಾಗಿ ಇರಲಿಲ್ಲ. ಇನ್ನು ರೋಹಿತ್​ 8 ರನ್​ಗೆ ಸಿಮಿತಗೊಂಡಿದ್ದರು. ಅವರಿಬ್ಬರೂ ಆರಂಭಿಕ ಬ್ಯಾಟರ್​ಗಳಾಗಿದ್ದು ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾಗಬೇಕಾಗಿದೆ. ಇಬ್ಬರೂ ರನ್​​ ಗಳಿಸು ವಿಚಾರದಲ್ಲಿ ಹೆಚ್ಚು ಒತ್ತಡಕ್ಕೆ ಬೀಳುವುದು ಖಚಿತ.

ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಭಾರತವು ಬಾಂಗ್ಲಾದೇಶಕ್ಕಿಂತ ಉತ್ತಮ ಫಾರ್ಮ್ ನಲ್ಲಿದೆ. ಭಾರತ ಈ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಿದೆ. ಆದಾಗ್ಯೂ, 2007 ರ ಏಕದಿನ ವಿಶ್ವಕಪ್​​ನಲ್ಲಿ ಬಾಂಗ್ಲಾದೇಶವು ಭಾರತವನ್ನು ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಸೋಲಿಸಿದ ನೋವು ಮರೆಯಲಾಗದು. ಈ ಹಿಂದೆ ಟಿ 20 ವಿಶ್ವಕಪ್​​ನಲ್ಲಿ ಭಾರತವು ಬಾಂಗ್ಲಾದೇಶವನ್ನು ನಾಲ್ಕು ಬಾರಿ ಸೋಲಿಸಿದೆ.

ಪಂದ್ಯದ ವಿವರ

ಪಂದ್ಯ: ಭಾರತ ವಿರುದ್ಧ ಬಾಂಗ್ಲಾದೇಶ, ಪಂದ್ಯ 47, ಸೂಪರ್ 8ರ ಹಂತ
ಸ್ಥಳ: ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣ, ನಾರ್ತ್ ಸೌಂಡ್, ಆಂಟಿಗುವಾ
ದಿನಾಂಕ ಮತ್ತು ಸಮಯ: ಶನಿವಾರ, ಜೂನ್ 22, ರಾತ್ರಿ 8:00 ಗಂಟೆಗೆ (ಭಾರತೀಯ ಸಮಯ)

ಮುಖಾಮುಖಿ ಸಾಧನೆ


ಆಡಿದ ಪಂದ್ಯಗಳು: 13
ಭಾರತಕ್ಕೆ ಗೆಲುವು 12
ಬಾಂಗ್ಲಾದೇಶ ವಿರುದ್ಧ ಗೆಲುವು 01
ಫಲಿತಾಂಶ ಇಲ್ಲ 00
ಮೊದಲ ಪಂದ್ಯ: 06/06/2009 (ಭಾರತ ಗೆದ್ದಿದೆ)
ಕೊನೇ: 06/10/2023 (ಭಾರತ ಗೆದ್ದಿದೆ)

ತಂಡಗಳು ಈ ರೀತಿ ಇವೆ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅರ್ಶ್​ದೀಪ್​ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ. ಸಿರಾಜ್ .

ಬಾಂಗ್ಲಾದೇಶ ತಂಡ: ನಜ್ಮುಲ್ ಹುಸೇನ್ ಶಾಂಟೊ (ನಾಯಕ), ತಂಜೀದ್ ಹಸನ್, ಲಿಟನ್ ದಾಸ್, ಶಕೀಬ್ ಅಲ್ ಹಸನ್, ತೌಹಿದ್ ಹೃದೋಯ್, ಮಹಮುದುಲ್ಲಾ, ಜೇಕರ್ ಅಲಿ, ರಿಷದ್ ಹುಸೇನ್, ತಸ್ಕಿನ್ ಅಹ್ಮದ್, ತಂಜೀಮ್ ಹಸನ್ ಸಾಕಿಬ್, ಮುಸ್ತಾಫಿಜುರ್ ರಹಮಾನ್, ಸೌಮ್ಯ ಸರ್ಕಾರ್, ಮಹೆದಿ ಹಸನ್, ತನ್ವೀರ್ ಇಸ್ಲಾಂ.

Exit mobile version