ಬಾರ್ಬಡೋಸ್: ಕಿಂಗ್ ಕೊಹ್ಲಿಯ ಅಬ್ಬರದ ಅರ್ಧ ಶತಕ (76 ರನ್) ರನ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಸ್ಫೋಟಕ ಬ್ಯಾಟಿಂಗ್ (47 ರನ್, 31 ಎಸೆತ, 4 ಸಿಕ್ಸರ್, 1 ಫೋರ್) ನೆರವು ಪಡೆದ ಭಾರತ ತಂಡ ವಿಶ್ವ ಕಪ್ 2024ರ ಫೈನಲ್ (T20 World Cup) ಪಂದ್ಯದಲ್ಲಿ 176 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿದೆ. ಇದು ಕೆನ್ಸಿಂಗ್ಟನ್ ಓವಲ್ನಲ್ಲಿ ಎದುರಾಳಿ ತಂಡಕ್ಕೆ ಗುರಿ ಮಟ್ಟಲು ಸ್ವಲ್ಪ ಕಷ್ಟ ಎಂದು ಎನಿಸಬಹುದು ಎಂಬುದು ಕಳೆದ 18 ದಿನಗಳ ಪಂದ್ಯಾವಳಿಯ ಫಲಿತಾಂಶದ ಹಿನ್ನೆಲೆಯಲ್ಲಿ ಹೇಳಬಹುದು. ಆದಾಗ್ಯೂ ಚೊಚ್ಚಲ ವಿಶ್ವ ಕಪ್ ಕಡೆಗೆ ಗುರಿಯಿಟ್ಟಿರುವ ದಕ್ಷಿಣ ಆಫ್ರಿಕಾ ತಂಡ ಆ ಕಡೆಗೆ ಗಮನ ಹರಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತೆ ಇಲ್ಲ. ಎಲ್ಲದಿಕ್ಕಿಂತ ಹೆಚ್ಚಾಗಿ ಪವರ್ ಪ್ಲೇ ಅವಧಿಯೊಳಗೆ ಮೂರು ವಿಕೆಟ್ ಕಳೆದುಕೊಂಡು ಭಾರತ ಚೇತರಿಸಿಕೊಂಡು ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ನಿಗದಿತ 20 ಓವರ್ಗಳು ಮುಕ್ತಾಯಗೊಳ್ಳುವಾಗ 7 ವಿಕೆಟ್ ನಷ್ಟ ಮಾಡಿಕೊಂಡು 176 ರನ್ ಬಾರಿಸಿತು. ಇದು ಟಿ20 ವಿಶ್ವ ಕಪ್ ಫೈನಲ್ನಲ್ಲಿ ತಂಡವೊಂದು ಪೇರಿಸಿದ ಗರಿಷ್ಠ ಮೊತ್ತವಾಗಿದೆ. ಹೀಗಾಗಿ ಇದು ಉತ್ತಮ ಮೊತ್ತವಾಗಿದೆ.
ಸ್ಥಳೀಯವಾಗಿ ಬೆಳಗಿನ ಅವಧಿಯಾಗಿದ್ದ ಕಾರಣ ಸ್ವಲ್ಪ ಮಟ್ಟಿನ ತೇವಾಂಶ ಪಿಚ್ ಮೇಲೆ ಇತ್ತು .ಅದರ ಲಾಭ ಪಡೆಯಲು ರೋಹಿತ್ ಮುಂದಾದರು. ಆದರೆ, ದಕ್ಷಿಣ ಆಫ್ರಿಕಾ ಬೌಲರ್ಗಳು ಅದಕ್ಕೆ ಆಸ್ಪದ ಕೊಡಲಿಲ್ಲ .ಮೊದಲ ಓವರ್ನಲ್ಲಿ ಭಾರತಕ್ಕೆ ಉತ್ತಮ ರನ್ ಬಂದ ಹೊರತಾಗಿಯೂ ಕಳೆದ ಎರಡು ಪಂಂದ್ಯಗಳ ಹೀರೋ ರೋಹಿತ್ ಶರ್ಮಾ 9 ರನ್ಗೆ ಔಟಾದರು. ಅವರು ಅದಕ್ಕೆ ಮೊದಲು ಸತತ 2 ಫೋರ್ ಬಾರಿಸಿದ್ದರು. ಆದರೆ, ನಾಯಕ ಮಾರ್ಕ್ರಮ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದು. ರೋಹಿತ್ ಔಟಾದ ತಕ್ಷಣವೇ ಭಾರತಕ್ಕೆ ಆಘಾತ ಉಂಟಾಯಿತು. ಆದರೆ ರಿಷಭ್ ಪಂತ್ ಸರಿಪಡಿಸುವರೆಂಬ ವಿಶ್ವಾಸ ಇತ್ತು. ಆದರೆ, ಅವರು ಶೂನ್ಯಕ್ಕೆ ನಿರ್ಗಮಿಸಿದರು. 2 ಎಸೆತ ಎದುರಿಸಿದ ಅವರು ಸ್ವೀಪ್ ಮಾಡಲು ಹೋಗಿ ಅನಗತ್ಯ ಕ್ಯಾಚ್ ನೀಡಿ ಔಟಾದರು.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್ 4 ಎಸೆತ ಎದುರಿಸಿ 3 ರನ್ಗೆ ಔಟಾದ ತಕ್ಷಣ ಭಾರತಕ್ಕೆ ಆಘಾತ ಉಂಟಾಯಿತು. ಹೆನ್ರಿಚ್ ಕ್ಲಾಸೆನ್ ಬೌಂಡರಿ ಲೈನ್ನಲ್ಲಿ ಹಿಡಿದ ಅದ್ಭುತ ಕ್ಯಾಚ್ ಗೆ ಅವರು ಔಟಾದರು. ಈ ವೇಳೆ 4.3 ಓವರ್ಗಳಲ್ಲಿ ಭಾರತ 3 ವಿಕೆಟ್ ಕಳೆದುಕೊಂಡಿತು.
ಮಿಂಚಿದ ಕೊಹ್ಲಿ
ಭಾರತ ತಂಡದ ವಿಕೆಟ್ಗಳು ಪತನಗೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ಜಾಗೃತರಾದರು. ಅವರು ನಿಧಾನಗತಿಯ ಆಟಕ್ಕೆ ಮೊರೆ ಹೋಗಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ಆದರೆ, ಮುಂಬಡ್ತಿ ಪಡೆದುಕೊಂಡು ಕ್ರೀಸ್ಗೆ ಬಂದ ಅಕ್ಷರ್ ಪಟೇಲ್ ಇದೇ ತಕ್ಕ ಸಮಯ ಎಂಬಂತೆ ಆಡಿದರು. ಅಗತ್ಯ ಸಂದರ್ಭದಲ್ಲಿ ಬಿಡುಬೀಸಿನ ಆಟವಾಡಿದರು. ಹೀಗಾಗಿ ಭಾರತ ತಂಡದ ಸ್ಕೋರ್ ಪಟ್ಟಿ ಬೆಳೆಯಲು ಆರಂಭಗೊಂಡಿತು. ಕೊಹ್ಲಿ ಜತೆ ಉತ್ತಮ ಜತೆಯಾಟವಾಡಿದ ಅಕ್ಷರ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಆದರೆ, ರನ್ಗಾಗಿ ಓಡುವ ವೇಳೆ ಯಾಮಾರಿ ಔಟಾದರು. ಅವರು 3 ರನ್ ಕೊರತೆಯಿಂದ ಅರ್ಧ ಶತಕದ ಅವಕಾಶ ಕಳೆದುಕೊಂಡರು.
ಇದನ್ನೂ ಓದಿ: Hardik Pandya : ಕಪಿಲ್ ದೇವ್ ರೀತಿ ಮೀಸೆ ಬಿಟ್ಟುಕೊಂಡು ಫೈನಲ್ ಪಂದ್ಯ ಆಡಲು ಬಂದ ಹಾರ್ದಿಕ್ ಪಾಂಡ್ಯ
ಶಿವಂ ದುಬೆ ಹಿಂಬಡ್ತಿ ಪಡೆದುಕೊಂಡು ಬಂದು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅವರು 16 ಎಸೆತಕ್ಕೆ 27 ರನ್ ಬಾರಿಸಿದರು. ಏತನ್ಮಧ್ಯೆ, 48 ಎಸೆತಕ್ಕೆ ಅರ್ಧ ಶತಕ ಪೂರೈಸಿದ ವಿರಾಟ್ ಕೊಹ್ಲಿ ಅಬ್ಬರಿಸಲು ಆರಂಭಿಸಿದರು. ಬೌಂಡರಿ ಸಿಕ್ಸರ್ಗಳನ್ನು ಬಾರಿಸುವ ಮೂಲಕ ಬೆದರಿಕೆ ಹುಟ್ಟಿಸಿದರು. ಇದು ಫೈನಲ್ ಪಂದ್ಯದಲ್ಲಿ ಅವರ ಪಾಲಿಗೆ ಸ್ಮರಣೀಯ ಇನಿಂಗ್ಸ್ ಎನಿಸಿತು.