Site icon Vistara News

T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

T20 World Cup

ಬೆಂಗಳೂರು: ಟಿ20 ವಿಶ್ವ ಕಪ್​ನ ಲೀಗ್ ಹಂತದಲ್ಲಿ ಎ ಗುಂಪಿನಲ್ಲಿರುವ (T20 World Cup) ಅಮೆರಿಕ ಮತ್ತು ಭಾರತ ತಂಡದ ವಿರುದ್ಧ ಸೋತು ಮುಖಭಂಗ ಎದುರಿಸಿದ್ದ ಪಾಕಿಸ್ತಾನ ತಂಡ ಕೊನೆಗೂ ಒಂದು ಗೆಲುವು ತನ್ನದಾಗಿಸಿಕೊಂಡಿದದೆ. ಮಂಗಳವಾರ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​ಗಳ ವಿಜಯ ತನ್ನದಾಗಿಸಿಕೊಂಡಿದೆ. ಪಾಕ್ ಪಾಲಿಗೆ ಅಗತ್ಯ ಪಂದ್ಯವಾಗಿತ್ತು. ಇಲ್ಲಿ ಸೋತಿದ್ದರೆ ಗುಂಪು ಹಂತದ ನಿರ್ಗಮನ ನಿರ್ಧಾರವಾಗುತ್ತಿತ್ತು. ಆದರೆ, ದುರ್ಬಲ ತಂಡದ ವಿರುದ್ಧ ಕೊನೆಗೂ ಗೆದ್ದಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಮತ್ತೊಂದು ಕಡಿಮೆ ಮೊತ್ತದ ಪಂದ್ಯದಲ್ಲಿ ಬಾಬರ್‌ ಅಜಮ್‌ ಪಡೆಯು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್‌ ಪೇರಿಸಿತು. ಆ್ಯರೋನ್ ಜಾನ್ಸನ್ ಆಕರ್ಷಕ ಅರ್ಧಶತಕ ಬಾರಿಸಿದರೂ ಉಳಿದವರ ನೆರವು ಸಿಗಲಿಲ್ಲ. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 17.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿ ಗೆದ್ದಿತು.

ಹೆದರಿಕೊಂಡೇ ಆಡಿದ ಪಾಕಿಸ್ತಾನ ತಂಡದ ಪರ ಆರಂಭಿಕ ಬ್ಯಾಟರ್​ ಸೈಮ್‌ ಅಯೂಬ್‌ 6 ರನ್‌ ಗಳಿಸಿ ಔಟಾದರು. ಈ ವೇಳೆ ಒಂದಾದ ಮೊಹಮ್ಮದ್‌ ರಿಜ್ವಾನ್‌ ಹಾಗೂ ಬಾಬರ್‌ ಅಜಮ್ ಅರ್ಧಶತಕದ ಜೊತೆಯಾಟವಾಡಿದರು. 33 ರನ್‌ ಗಳಿಸಿದ ಪಾಕ್‌ ನಾಯಕ ಔಟಾದರು. ಜವಾಬ್ದಾರಿಯುತವಾಗಿ ಆಡಿದ ರಿಜ್ವಾನ್ ಆಕರ್ಷಕ ಅರ್ಧಶತಕ ಸಿಡಿಸಿ ಗೆಲ್ಲಿಸಿದರು ಗೆಲುವಿಗೆ 3 ರನ್‌ ಅಗತ್ಯವಿದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ಫಕರ್‌ ಜಮಾನ್‌ 4(6) ತನ್ನ ವಿಕೆಟ್ ಒಪ್ಪಿಸಿದರು.

ಕೆನಡಾದ ನಿಧಾನಗತಿಯ ಆಟ

ಮೊದಲು ಬ್ಯಾಟಿಂಗ್‌ ನಡೆಸಿದ ಕೆನಡಾ ದೊಡ್ಡ ಮೊತ್ತ ಪೇರಿಸಲು ಯತ್ನಿಸಲಿಲ್ಲ. ಆದಾಗ್ಯೂ ಬೌಲಿಂಗ್​ಗೆ ಪೂರಕ ಪಿಚ್‌ನಲ್ಲಿ ಪಾಕಿಸ್ತಾನದ ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದ ಆ್ಯರೋನ್ ಜಾನ್ಸನ್ 44 ಎಸೆತಗಳಲ್ಲಿ 52 ರನ್ ಗಳಿಸಿ ಮಿಂಚಿದರು. ಇದರಲ್ಲಿ ನಾಲ್ಕು ಸ್ಫೋಟಕ ಸಿಕ್ಸರ್ ಹಾಗೂ 4 ಬೌಂಡರಿಗಳವೆ . ಆರಂಭಿಕರಾಗಿ ಕಣಕ್ಕಿಳಿದ ಜಾನ್ಸನ್, ಆರನೆಯವರಾಗಿ ಔಟಾದರು.

ಸಾದ್ ಬಿನ್ ಜಾಫರ್ 10 ರನ್‌ ಗಳಿಸಿದರೆ, ಕಲೀಮ್ ಸನಾ 13 ರನ್‌ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದರು. ಆರಂಭಿಕ ಆಟಗಾರ ನವನೀತ್‌ (4). ಪರ್ಗತ್ ಸಿಂಗ್ ಗಳಿಕೆ 2 ರನ್​. ನಿಕೋಲಸ್ ಕಿರ್ಟನ್ (1) ಔಟಾಗುವುದರೊಂದಿಗೆ ಜಾನ್ಸನ್ ಮೇಲೆ ಒತ್ತಡವನ್ನು ಹೆಚ್ಚಿಸಿತು.

ಹ್ಯಾರಿಸ್ ರವೂಫ್​ ಎಸೆದ ಇನಿಂಗ್ಸ್​​ 10ನೇ ಓವರ್‌ನಲ್ಲಿ ಶ್ರೇಯಸ್ ಮೊವ್ವಾ (2) ಹಾಗೂ ರವೀಂದರ್ಪಾಲ್ ಸಿಂಗ್ (0) ವಿಕೆಟ್ ಒಪ್ಪಿಸಿದರು. ಇದು ಹ್ಯಾರಿಸ್‌ ರೌಫ್‌ ಅವರ ಟಿ20 ಸ್ವರೂಪದಲ್ಲಿ 100 ವಿಕೆಟ್. ಮೊಹಮ್ಮದ್ ಅಮೀರ್ 13 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಪಡೆದರೆ, ಹ್ಯಾರಿಸ್ ರೌಫ್ 26ಕ್ಕೆ 2 ಹಾಗೂ ಶಾಹೀನ್ ಶಾ ಅಫ್ರಿದಿ 21ಕ್ಕೆ 1 ವಿಕೆಟ್‌ ಪಡೆದರು.

Exit mobile version